ಉಚಿತ ವಿದ್ಯುತ್ ಸೌಲಭ್ಯ
Tumkurnews
ತುಮಕೂರು; ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಗ್ರಾಹಕರ ಸಮಸ್ಯೆಗಳನ್ನು ಅತಿ ಶೀಘ್ರವಾಗಿ ಬಗೆಹರಿಸಲು ಕ್ರಮವಹಿಸಬೇಕೆಂದು ಬೆಸ್ಕಾಂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ್ ಬಿಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕಿನ ಬೊಮ್ಮನಹಳ್ಳಿ ಆದಿಶಕ್ತಿ ಮಾರಮ್ಮ ದೇವಸ್ಥಾನದ ಆವರಣದಲ್ಲಿರುವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವಿದ್ಯುತ್ ಅದಾಲತ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿದ್ಯುತ್ ಅದಾಲತ್‍ನಲ್ಲಿ ಬೆಸ್ಕಾಂಗೆ ಸಂಬಂಧಿಸಿದ ಗ್ರಾಹಕರ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಲು ಕ್ರಮವಹಿಸಲಾಗುವುದು. ಉತ್ತಮ ಗುಣ ಮಟ್ಟದ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಗ್ರಾಹಕರು ಈ ಅದಾಲತ್‍ನಲ್ಲಿ ಸಲ್ಲಿಸಿ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.
ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಸರ್ಕಾರವು ಪಿಎಂ-ಕುಸುಮ್ ಯೋಜನೆಯನ್ನು ಜಾರಿಗೆ ತಂದಿದ್ದು, ನೀರಾವರಿ ಬಳಕೆದಾರರಿಗೆ ಹಗಲು ವೇಳೆಯಲ್ಲಿ 7 ಗಂಟೆ ವಿದ್ಯುತ್ ಸರಬರಾಜು ಮಾಡಲು ಈ ಯೋಜನೆ ಅನುಕೂಲವಾಗಲಿದೆ. ಅಮೃತ್ ಯೋಜನೆಯಡಿ ವಿದ್ಯುತ್ ಬಳಕೆ ಮಾಡುವ ಪ.ಜಾತಿ ಹಾಗೂ ಪಂಗಡದ ಬಿಪಿಎಲ್ ಪಡಿತರ ಚೀಟಿದಾರರು ಬೆಸ್ಕಾಂ ಕಚೇರಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಉಚಿತ ವಿದ್ಯುತ್ ಸರಬರಾಜು ಸೌಲಭ್ಯವನ್ನು ಪಡೆಯಬಹುದು ಎಂದು ತಿಳಿಸಿದರು.
ಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ಕಚೇರಿಯಿಂದ ಪಾವತಿಸಬೇಕಾದ ವಿದ್ಯುತ್ ಬಿಲ್ಲಿನ ಮೊತ್ತವನ್ನು ಆದಷ್ಟು ಶೀಘ್ರವಾಗಿ ಬೆಸ್ಕಾಂಗೆ ಪಾವತಿ ಮಾಡಬೇಕು ಎಂದು ಇದೇ ವೇಳೆ ಮನವಿ ಮಾಡಿದರು.
ನಂತರ ಗ್ರಾಹಕರಿಂದ ಅಹವಾಲುಗಳನ್ನು ಆಲಿಸಿ ಸುಮಾರು 19 ದೂರು ಅರ್ಜಿಗಳನ್ನು ಸ್ವೀಕರಿಸಿದರು. ಸುಮಾರು 100 ಮಂದಿ ಗ್ರಾಹಕರು ಅದಾಲತ್‍ನಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.
ಈ ಸಂದರ್ಭದಲ್ಲಿ ಬೆಸ್ಕಾಂ ಮುಖ್ಯ ಇಂಜಿನಿಯರ್ ಕೆ.ವಿ.ಗೋವಿಂದಪ್ಪ, ಅಧೀಕ್ಷಕ ಇಂಜಿನಿಯರ್ ವಿ.ಪಾಲನೇತ್ರ, ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಆರ್.ಶ್ರೀನಿವಾಸ್, ಶಾಖಾಧಿಕಾರಿ ಬಿ.ವಿ.ಸತೀಶ್ ಕುಮಾರ್, ಬೊಮ್ಮನಹಳ್ಳಿ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಮತ್ತಿತರರು ಹಾಜರಿದ್ದರು.
+ There are no comments
Add yours