ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಕುರಿತು ತರಬೇತಿ; ಆಸಕ್ತರಿಗೆ ಅವಕಾಶ

1 min read

 

ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಕುರಿತು ತರಬೇತಿ

Tumkurnews
ತುಮಕೂರು; ಪ್ರಾಣಾಪಾಯದಲ್ಲಿ ಇರುವ ಯಾವುದೇ ವ್ಯಕ್ತಿಯನ್ನು ಸನಿಹದಲ್ಲಿ ಇರುವ ಇತರೆ ವ್ಯಕ್ತಿಯು ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಲು ಸಹಕಾರಿ ಆಗುವ ಕುರಿತು ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರ, ತುಮಕೂರು ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ, ಮಾಗಡಿ ರಸ್ತೆ, ಬೆಂಗಳೂರು ಇವರ ಸಹಕಾರದಲ್ಲಿ ನಗರದ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ನವೆಂಬರ್ 17 ರಿಂದ 19ರವರೆಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ವಿವಿಧ ಇಲಾಖೆಗಳ ಸಿಬ್ಬಂದಿಗಳಿಗೆ 1 ದಿನದ ಕೌಶಲ್ಯಾಧಾರಿತ ತರಬೇತಿ ನೀಡಲಾಗುವುದು. ವಿಶೇಷವಾಗಿ ಅಪಘಾತ ಸಂಭವಿಸಿದಾಗ, ಬೆಂಕಿ ಅನಾಹುತ, ವಿದ್ಯುತ್ ಆಘಾತ, ಹಾವು ಕಡಿದವರು, ನೀರಿನಲ್ಲಿ ಮುಳುಗಿದವರು, ತಲೆಗೆ ಏಟು ಬಿದ್ದವರು, ಮೂಳೆ ಮುರಿತಗಳು ಈ ಸಂದರ್ಭದಲ್ಲಿ ಆಸ್ಪತ್ರೆ ತಲುಪುವ ತನಕ ಹಾನಿಗೊಳಗಾದ ವ್ಯಕ್ತಿಗೆ ನೀಡುವ ಪ್ರಥಮ ಚಿಕಿತ್ಸೆ ಬಗ್ಗೆ ತರಬೇತಿ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ.ರಜನಿ ತಿಳಿಸಿದ್ದಾರೆ.
ತರಬೇತಿಯನ್ನು ಆರಕ್ಷಕ, ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಮತ್ತು ಶಾಲೆಗಳಲ್ಲಿನ ದೈಹಿಕ ಶಿಕ್ಷಕರು, ಗೃಹ ರಕ್ಷಕ ದಳದ ಸಿಬ್ಬಂದಿ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ ಸ್ವಯಂ ಪ್ರೇರಿತರಾದ ನಾಗರಿಕರಿಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಸ್ತೆ ಅಪಘಾತಗಳು ಆದಾಗ ಹತ್ತಿರದಲ್ಲಿ ಇರುವವರು ಯಾರೇ ಆದರೂ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಿದಲ್ಲಿ ಅವರನ್ನು ಕಾನೂನು ಕ್ರಮಕ್ಕೆ ಒಳಪಡಿಸುವುದಿಲ್ಲ ಹಾಗೂ ಅವರಿಗೆ ಕಾನೂನು ರಕ್ಷೆ ಇರುವುದನ್ನು ಎಲ್ಲರೂ ಅರಿತುಕೊಳ್ಳಬೇಕು. ಹೃದಯಾಘಾತವಾದಾಗ ಏನು ಮಾಡಬೇಕು ಎಂದು ಸಾಮಾನ್ಯ ಜನತೆ ಕೂಡ ತಿಳಿದುಕೊಂಡಿರಬೇಕು. ರಸ್ತೆ ಅಪಘಾತ ಆದಾಗ ಕೋಮಾದಲ್ಲಿರುವವರಿಗೆ ನೀರು ಕುಡಿಸಲು ಪ್ರಯತ್ನಿಸುವುದು ಕೂಡ ಜೀವಕ್ಕೆ ಅಪಾಯ ತಂದೊಡ್ಡುತ್ತದೆ. ಫಿಟ್ಸ್ ಬರುತ್ತಿರುವವರಿಗೆ ನೀರು ಕುಡಿಸುವುದು, ಕಬ್ಬಿಣದ ಕೀಗಾಗಿ ಹುಡುಕುವುದು ಕೂಡ ತಪ್ಪು ಕಲ್ಪನೆ ಆಗಿದೆ. ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆ ಸಿಗುವವರೆಗೂ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕೆಂಬ ಮಾಹಿತಿಯನ್ನು ತರಬೇತಿಯಲ್ಲಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆಸಕ್ತರು ತರಬೇತಿಯ ಪ್ರಯೋಜನವನ್ನು ಪಡೆದು ಮುಂದಿನ ದಿನಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಬಹುದಾಗಿದೆ. ಈ ರೀತಿ ತರಬೇತಿ ಪಡೆದವರಿಗೆ First Responder ಎಂಬ ಗುರುತಿನ ಚೀಟಿ ನೀಡಲಾಗುವುದು. ಜಿಲ್ಲಾ ಆಸ್ಪತ್ರೆ ತುಮಕೂರು, ನಿಪುಣ ಸ್ಕಿಲ್ ಲ್ಯಾಬ್, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಗೌರಿಬಿದನೂರು ಇಲ್ಲಿನ ನುರಿತ ತರಬೇತುದಾರರು ತರಬೇತಿ ನೀಡುವರು. ಇದು ಕೌಶಲ್ಯಾಧಾರಿತ ತರಬೇತಿ ಆಗಿದ್ದು, ಮನುಷ್ಯಾಕೃತಿ ಗೊಂಬೆ ಆಧಾರಿತವಾಗಿ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours