ಮಾಜಿ ಶಾಸಕ ಎಚ್.ನಿಂಗಪ್ಪ ಜೆಡಿಎಸ್ ತೊರೆಯಲು ಅಸಲಿ ಕಾರಣ ಏನು ಗೊತ್ತೇ?

1 min read

 

ಜೆಡಿಎಸ್ ಗೆ ಮಾಜಿ ಶಾಸಕ ಎಚ್.ನಿಂಗಪ್ಪ ಗುಡ್ ಬೈ

Tumkurnews
ತುಮಕೂರು; ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಹಿರಿಯ ಜೆಡಿಎಸ್ ಮುಖಂಡ ಹೆಚ್. ನಿಂಗಪ್ಪ ಮಂಗಳವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದರ ಮೂಲಕ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ಈ ಸಂಬಂಧ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರಿಗೆ ತಮ್ಮ ರಾಜಿನಾಮೆ ಪತ್ರವನ್ನು ಬರೆದಿದ್ದು, ತಮ್ಮ ರಾಜೀನಾಮೆಗೆ ಅಸಲಿ ಕಾರಣವನ್ನು ವಿವರಿಸಿದ್ದಾರೆ. “ನಾನು ಜಾತ್ಯತೀತ ಜನತಾದಳದ ಸಕ್ರಿಯ ಕಾರ್ಯಕರ್ತನಾಗಿದ್ದು, ಹತ್ತು ವರ್ಷಗಳ ಕಾಲ ಪಕ್ಷದ ಜಿಲ್ಲಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. 2013ನೇ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡದ ಕಾರಣ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದೆ, ನಂತರದ 2018ನೇ ವಿಧಾನಸಭಾ ಚುನಾವಣೆಯ ವೇಳೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ತಮಗೆ ಮತ್ತೆ ಪಕ್ಷಕ್ಕೆ ಆಹ್ವಾನ ನೀಡಿದ್ದು, ಅವರು ತಮ್ಮ ಮೇಲಿಟ್ಟಿದ್ದ ಪ್ರೀತಿ ಮತ್ತು ವಿಶ್ವಾಸಕ್ಕೆ ಮಣಿದು ಮತ್ತೆ ಜೆಡಿಎಸ್ ಸೇರ್ಪಡೆಗೊಂಡು ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡಿ ಅಭ್ಯರ್ಥಿಯ ಗೆಲುವಲ್ಲಿ ಕಿಂಚಿತ್ ಸೇವೆ ಸಲ್ಲಿಸಿದೆ”.
“ಚುನಾವಣೆಯ ನಂತರದ ವಿದ್ಯಮಾನಗಳನ್ನು ಹಾಗೂ ಆರೋಪಗಳನ್ನು ಮಾಡಲು ಈ ಸಂದರ್ಭದಲ್ಲಿ ನನಗೆ ಇಷ್ಟವಿಲ್ಲ. ನಾನು ಪಕ್ಷಕ್ಕೆ ಮರಳಿದಾಗ ಪ್ರಾಥಮಿಕ ಸದಸ್ಯತ್ವವನ್ನು ಮತ್ತೆ ಪಡೆದಿದ್ದರೂ ಸಹ ಕುಮಾರಸ್ವಾಮಿ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದರು. ಆದರೆ ನನ್ನನ್ನು ಪಕ್ಷದ ಎಲ್ಲ ಚಟುವಟಿಕೆಗಳಿಂದ ದೂರ ಇಡಲಾಯಿತು. ಪ್ರಸ್ತುತ ನಾನು ಜೆಡಿಎಸ್ ಪಕ್ಷದಲ್ಲಿ ಇದ್ದೇನೆ ಎಂದು ಭಾವಿಸಿ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಮಾಜಿ ಶಾಸಕ ಹೆಚ್.ನಿಂಗಪ್ಪನವರು ಕಾಂಗ್ರೆಸ್ ಪಕ್ಷದ ಕಡೆ ಮುಖ ಮಾಡಿದ್ದು, ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ತರುವಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.

About The Author

You May Also Like

More From Author

+ There are no comments

Add yours