ಕನ್ನಡ ರಾಜ್ಯೋತ್ಸವ ಅದ್ಧೂರಿ ಆಚರಣೆ
Tumkurnews
ತುಮಕೂರು; ಪ್ರತಿ ವರ್ಷದಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ನವೆಂಬರ್ 1 ರಿಂದ ಮನೆಮನೆಗಳಲ್ಲಿ ಕನ್ನಡ ಬಾವುಟ ಎನ್ನುವ ಅಭಿಯಾನ ಕೈಗೊಳ್ಳಲು ಜಾತ್ಯಾತೀತ ಜನತಾ ದಳ ನಿರ್ಧಾರ ಕೈಗೊಂಡಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪ ತಿಳಿಸಿದರು.
ನಗರದಲ್ಲಿನ ಜೆಡಿಎಸ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ಅಭಿಯಾನದ ಅಡಿಯಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರು ಮತ್ತು ಬೆಂಬಲಿಗರ ಮನೆಗಳ ಮೇಲೆ ಕನ್ನಡ ಬಾವುಟ ಮತ್ತು ಪಕ್ಷದ ಬಾವುಟಗಳನ್ನು ಹಾರಿಸಬೇಕು ಎಂದರು.
ತಮ್ಮ ಕ್ಷೇತ್ರದಲ್ಲಿರುವ ನೆರೆ-ಹೊರೆಯವರ ಮನೆ ಮೇಲೆ ಕೂಡ ಕನ್ನಡ ಬಾವುಟ ಹಾರಿಸಲು ಬಾವುಟ ನೀಡುವುದು ಮತ್ತು ನೆರೆ-ಹೊರೆಯವರನ್ನು ಸಹ ಪಕ್ಷದ ಬಾವುಟವನ್ನು ಹಾರಿಸಲು ಮನವೊಲಿಸಬೇಕು. ಆದರೆ, ಒತ್ತಾಯ ಮತ್ತು ಬಲವಂತದಿಂದ ಬಾವುಟಗಳನ್ನು ಹಾರಿಸಲು ಪ್ರಯತ್ನ ಮಾಡಬಾರದು ಎಂದು ಹೇಳಿದರು.
ಪಕ್ಷದ ವತಿಯಿಂದ ಈ ವರ್ಷದ ಕನ್ನಡ ರಾಜ್ಯೋತ್ಸವವನ್ನು ಇಡೀ ನವೆಂಬರ್ ತಿಂಗಳಲ್ಲಿ ಕನ್ನಡ ರಾಜೋತ್ಸವ ಆಚರಣೆ ಮಾಸವೆಂದು ಆಚರಿಸಲು ನಿರ್ಧರಿಸಲಾಗಿದೆ. ಹಾಗಾಗಿ ಜೆಡಿಎಸ್ ಪಕ್ಷದ ಎಲ್ಲ ತಾಲ್ಲೂಕು ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ತಮ್ಮ ಮನೆಗಳ ಮೇಲೆ ಕನ್ನಡ ಬಾವುಟವನ್ನು ಹಾರಿಸಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಳ್ಳಿ ಲೋಕೇಶ್, ಪ್ರತಿ ವರ್ಷದಂತೆ ಈ ವರ್ಷವು ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ರಾಜ್ಯದಲ್ಲಿ ಮತ್ತು ರಾಜ್ಯದ ಗಡಿನಾಡು ಭಾಗದಲ್ಲಿ ಹಾಗೂ ಹೊರ ರಾಜ್ಯ ಮತ್ತು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ, ಜಗತ್ತಿನಾದ್ಯಂತ ರಾಷ್ಟ್ರಗಳು ಪ್ರಾದೇಶಿಕತೆ ಮತ್ತು ಭಾಷೆಯ ಬಗ್ಗೆ ಸಾರ್ವಭೌಮತ್ವ ಸ್ಥಾಪಿಸಿವೆ ಎಂದರು.
ಭಾರತ ಒಂದು ಒಕ್ಕೂಟ ರಾಷ್ಟ್ರ, ರಾಷ್ಟ್ರದಲ್ಲಿ, ಒಟ್ಟು 22 ಪ್ರಾದೇಶಿಕ ಭಾಷೆಗಳಿವೆ. ಪ್ರಾದೇಶಿಕತೆಯಲ್ಲಿ ವೈವಿದ್ಯತೆ ಇದೆ. ಭಾಷಾವಾರು ವಿಂಗಡಣೆ ಆಗಿರುವ ರಾಜ್ಯಗಳು ತನ್ನ ಪ್ರಾದೇಶಿಕತೆಗೆ ಮೆರಗು ಕೊಡುವುದರೊಂದಿಗೆ ನೆಲ, ಜಲ ಮತ್ತು ಭಾಷೆಯ ಬಗ್ಗೆ ತಮ್ಮ ಇರುವಿಕೆಗಾಗಿ ಶ್ರಮಿಸುತ್ತಿವೆ. ಯಾವುದೇ ರಾಷ್ಟ್ರ ಅಥವಾ ರಾಜ್ಯದ ಅಸ್ತಿತ್ವಕ್ಕೆ, ಆ ರಾಷ್ಟ್ರ ಅಥವಾ ರಾಜಕೀಯ ಸ್ಥಿರತೆ ಮತ್ತು ಸಂಸ್ಕೃತಿ ಪ್ರತಿಬಿಂಬಿಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡಿನ ಅಸ್ಮಿತೆ, ಪ್ರಾದೇಶಿಕತೆ, ನೆಲ-ಜಲ ಮತ್ತು ಭಾಷೆಯ ಬಗ್ಗೆ ಕನ್ನಡ ನಾಡಿನ ಜನತೆಗೆ ಅರಿವು ಮತ್ತು ಅಭಿಲಾಷೆ ಮೂಡಿಸುವುದು ಸಹ ಅತ್ಯವಶ್ಯಕವಾಗಿದೆ ಎಂದರು.
ಕನ್ನಡ ರಾಜೋತ್ಸವ ಮಾಸಾಚರಣೆ ಅಭಿಯಾನದಲ್ಲಿ, ಕನ್ನಡ ನಾಡಿನ ನೆಲ, ಜಲ ನುಡಿಗೆ ಶ್ರಮಿಸಿದ ಮಹನೀಯರನ್ನು ನೆನೆಯುವುದು ಅತ್ಯವಶ್ಯ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಅಭಿಯಾನದಲ್ಲಿ ಶಾಲಾ-ಕಾಲೇಜುಗಳು, ಯುವಕ ಸಂಘಗಳು, ಶಕ್ತಿ, ಸಂಘಗಳು, ಸಾರ್ವಜನಿಕ, ಖಾಸಗಿ ಸಂಘ-ಸಂಸ್ಥೆಗಳಲೂ, ಕನ್ನಡ ರಾಜೋತ್ಸವ ಆಚರಣೆಯನ್ನು ಪಕ್ಷದ ಮುಖಂಡರು ಕೈಗೊಳ್ಳಬೇಕು ಎಂದರು.
ಮುಖಂಡ ಗೋವಿಂದರಾಜು ಮಾತನಾಡಿ, ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡಿನ ಪ್ರಸಿದ್ಧ ಕವಿಗಳು, ಕಲಾವಿದರು, ನಾಡು ಒಗ್ಗೂಡಿಕೆಗೆ ಶ್ರಮಿಸಿದ ರಾಜಕೀಯ ಮುತ್ಸದ್ಧಿಗಳ ಬಗ್ಗೆ ನೆನೆದು ಅವರ ಸೇವೆಯನ್ನು ಸ್ಮರಿಸುವುದು ಅತ್ಯವಶ್ಯಕ ಎಂದರು.
20 ಸಾವಿರ ಉದ್ಯೋಗ, SSCಯಿಂದ ಹಿಂದಿ, ಇಂಗ್ಲೀಷ್’ನಲ್ಲಿ ಪರೀಕ್ಷೆ; ಕನ್ನಡದಲ್ಲೂ ಪರೀಕ್ಷೆಗೆ ಎಚ್ಡಿಕೆ ಆಗ್ರಹ
ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನೀತಿಯನ್ನು ಬಲವಂತವಾಗಿ ಖಂಡಿಸಬೇಕು. ಕೇಂದ್ರ ಸರ್ಕಾರದ ನಾಗರಿಕ ಸೇವೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ಒತ್ತಾಯ ಮಾಡಬೇಕು. ಅದರಲ್ಲೂ ರೈಲ್ವೆ, ಸೈನ್ಯ, ಬ್ಯಾಂಕಿಂಗ್ ಕ್ಷೇತ್ರಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಹೋರಾಟ ಅಗತ್ಯ ಎನ್ನುವುದನ್ನು ಕನ್ನಡ ಜನತೆಗೆ ಮನದಟ್ಟು ಮಾಡಿಕೊಡುವ ಕೆಲಸವಾಗಬೇಕು ಎಂದರು.
ಸಭೆಯಲ್ಲಿ ಉಪಮೇಯರ್ ನರಸಿಂಹಮೂರ್ತಿ, ಪಾಲಿಕೆ ಸದಸ್ಯರಾದ ಧರಣೇಂದ್ರಕುಮಾರ್, ಶ್ರೀನಿವಾಸ್, ಮಂಜುನಾಥ್, ಮಹಾಲಿಂಗಪ್ಪ, ಕೃಷ್ಣಮೂರ್ತಿ, ಬಿ.ಎನ್. ಜಗದೀಶ್, ತಹೇರಾ ಕುಲ್ಸಮ್, ಲೀಲಾವತಿ, ಲಕ್ಷ್ಮಮ್ಮ ವೀರಣ್ಣಗೌಡ, ಪ್ರೆಸ್ ರಾಜಣ್ಣ, ಮೆಡಿಕಲ್ ಮಧು, ರಂಗಪ್ಪ, ಹೊನ್ನೇಗೌಡ, ದೇವರಾಜು, ಗಂಗಣ್ಣ, ಅಬ್ದುಲ್ ಖಾದರ್ ಮತ್ತಿತರರು ಪಾಲ್ಗೊಂಡಿದ್ದರು.
ಜೆಡಿಎಸ್ ಶಾಸಕ ಎಂ.ವಿ ವೀರಭದ್ರಯ್ಯ ಚುನಾವಣೆ ನಿವೃತ್ತಿ ಘೋಷಣೆ!; ಕಾರಣವೇನು? ವಿಡಿಯೋ
+ There are no comments
Add yours