ಮಕ್ಕಳ ಮಾಹಿತಿ, ಭಾವಚಿತ್ರ ಬಹಿರಂಗಪಡಿಸಿದರೆ ಜೈಲು ಶಿಕ್ಷೆ; ಮಾಧ್ಯಮಗಳು, ಸಾರ್ವಜನಿಕರಿಗೆ ಮಕ್ಕಳ ರಕ್ಷಣಾ ನಿರ್ದೇಶನಾಯದ ಎಚ್ಚರಿಕೆ

1 min read

ಮಕ್ಕಳ ಮಾಹಿತಿ, ಭಾವಚಿತ್ರ ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧ

Tumkurnews
ತುಮಕೂರು; ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ)ತಿದ್ದುಪಡಿ ಕಾಯ್ದೆ 2021ರ ಕಲಂ 74ರಲ್ಲಿ ಮಕ್ಕಳ ಮಾಹಿತಿ ಹಾಗೂ ಭಾವಚಿತ್ರವನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯವು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಪ್ತಾಪ್ರ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಕುರಿತು ಮಾಧ್ಯಮಗಳಲ್ಲಿ ಭಿತ್ತರಿಸಿದ ವರದಿಗಳಲ್ಲಿ ಮಗುವಿನ ಛಾಯಾಚಿತ್ರ ಹಾಗೂ ಹೆಸರು ಪ್ರಕಟಿಸಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ) ತಿದ್ದುಪಡಿ ಕಾಯ್ದೆ 2021ರ ಕಲಂ 74ರಲ್ಲಿ ಮಕ್ಕಳ ಮಾಹಿತಿ ಹಾಗೂ ಭಾವಚಿತ್ರವನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಅಲ್ಲದೇ ತಿದ್ದುಪಡಿ ಕಾಯ್ದೆ ಕಲಂ 75ರಲ್ಲಿ ಮಕ್ಕಳ ಮಾಹಿತಿಯನ್ನು ಬಹಿರಂಗಪಡಿಸಿದ್ದಲ್ಲಿ ಶಿಕ್ಷೆಗೆ ಒಳಪಡಿಸುವ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ 2012 ಕಲಂ 23(2)ರಲ್ಲಿಯೂ ಸಹ ಮಕ್ಕಳ ಗುರುತನ್ನು ಬಹಿರಂಗಪಡಿಸುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ 2012ರಲ್ಲಿ ಅತ್ಯಾಚಾರ ಎಂಬ ಶಬ್ದದ ಬಳಕೆ ಇರುವುದಿಲ್ಲ. ಅದರ ಬದಲಿಗೆ ಅಧಿನಿಯಮದಲ್ಲಿಯೇ ಲೈಂಗಿಕ ಅಪರಾಧ ಎಂಬ ಪದವನ್ನು ಉಲ್ಲೇಖಿಸಲಾಗಿದೆ ಎಂದು ತಿಳಿಸಿರುವ ಅವರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದ ಸಂದರ್ಭಗಳಲ್ಲಿ ಮಕ್ಕಳಿಗೆ ಸಲ್ಲದ ಶಬ್ದಗಳನ್ನು ಬಳಸದಂತೆ ಹಾಗೂ ಮಕ್ಕಳ ಹೆಸರು, ಭಾವಚಿತ್ರವನ್ನು ಪ್ರಕಟಿಸದಂತೆ ಹಾಗೂ ಮಕ್ಕಳ ಗುರುತುಗಳನ್ನು ತಿಳಿಸುವ ಯಾವುದೇ ವಿವರಗಳನ್ನು ಪ್ರಕಟಿಸಬಾರದು ಎಂದು ಅವರು ತಿಳಿಸಿದ್ದಾರೆ.
ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ-2015ರ ಪ್ರಕಾರ ಬಾಲಪರಾಧಿ ಶಬ್ದ ಬಳಕೆ ಇಲ್ಲ. ಬದಲಾಗಿ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳು ಎಂದು ಬಳಸಬೇಕು. ರಿಮ್ಯಾಂಡ್ ಹೋಂ ಶಬ್ದ ಬಳಕೆಗೆ ಬದಲಾಗಿ ವೀಕ್ಷಣಾಲಯ ಎಂದು ಬಳಸಬೇಕೆಂದು ಅವರು ತಿಳಿಸಿದ್ದಾರೆ.
ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ಕಲಂ 74ರ ಪ್ರಕಾರ, ಕಾನೂನಿನೊಂದಿಗೆ ಸಂಘರ್ಷದಲ್ಲಿರುವ(ಮಕ್ಕಳ ತಪ್ಪು ಅಥವಾ ಅಪರಾಧ ಮಾಡಿದ್ದಾರೆನ್ನುವ ಆರೋಪದ ಪ್ರಕರಣಗಳಲ್ಲಿ)ಅಥವಾ ಕಾಯ್ದೆಯಡಿ ಪೋಷಣೆ ಮತ್ತು ರಕ್ಷಣೆ ಹಾಗೂ ಸೇವೆಯ ಅಗತ್ಯವಿರುವಂತಹ ಪ್ರಕರಣವನ್ನು ಎದುರಿಸುತ್ತಿರುವ ಮಗುವಿನ ಹೆಸರು ಮತ್ತು ಮಗುವಿನ ಗುರುತು ಹಿಡಿಯಬಹುದಾದ ಯಾವುದೇ ವಿವರಗಳನ್ನು ಪ್ರಕಟಿಸುವುದನ್ನು ನಿಷೇಧಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದಲ್ಲಿ 6 ತಿಂಗಳವರೆಗೆ ಶಿಕ್ಷೆ ಮತ್ತು 2 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಯಾವುದೇ ದಿನಪತ್ರಿಕೆ, ಮ್ಯಾಗಜೀನ್ ಅಥವಾ ದೃಶ್ಯ ಮಾಧ್ಯಮದಲ್ಲಿ ಕಾನೂನು ಕಟ್ಟಳೆಯನ್ನು ಎದುರಿಸುತ್ತಿರುವ ಅಥವಾ ಪೋಷಣೆ, ರಕ್ಷಣೆ ಹಾಗೂ ಸೇವೆಯ ಅಗತ್ಯವಿರುವ ಮಗುವಿನ ವಿಚಾರಣೆಗೆ ಸಂಬಂಧಿಸಿದ ವರದಿಯಲ್ಲಿ ಮಗುವಿನ ಯಾವುದೇ ಗುರುತು ಬಹಿರಂಗ ಪಡಿಸುವಂತಿಲ್ಲ ಹಾಗೂ ಮಗುವಿನ ಭಾವಚಿತ್ರಗಳನ್ನು ಪ್ರಕಟಿಸುವಂತಿಲ್ಲ. ಈ ಸೆಕ್ಷನ್‍ನನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ 6 ತಿಂಗಳವರೆಗೆ ಶಿಕ್ಷೆ ಮತ್ತು 2 ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಯಾವುದೇ ವ್ಯಕ್ತಿ ಈ ಕಾನೂನು ನಿಯಮಗಳನ್ನು ಉಲ್ಲಂಘಿಸಿದರೆ ಕನಿಷ್ಟ ಆರು ತಿಂಗಳಿಂದ ಒಂದು ವರ್ಷದವರೆಗೂ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ನಿರ್ದಿಷ್ಟ ಸಂದರ್ಭಗಳಲ್ಲಿ ಮಗುವಿನ ಹಿತಾಸಕ್ತಿಗಾಗಿ ಮಾತ್ರ ವಿಶೇಷ ನ್ಯಾಯಾಲಯಗಳು ಕೆಲವೊಮ್ಮೆ ಇಂತಹ ಮಗುವಿನ ಗುರುತನ್ನು ಬಹಿರಂಗಪಡಿಸಲು ಅನುಮತಿ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 228 (ಎ) ಅನುಸಾರ ಅತ್ಯಾಚಾರಕ್ಕೊಳಗಾದ ಮಹಿಳೆಯ ಗುರುತನ್ನು ಮುದ್ರಿಸುವ ಅಥವಾ ಪ್ರಕಟಿಸುವ ಯಾವುದೇ ವ್ಯಕ್ತಿ ಅಥವಾ ಮಾಧ್ಯಮ ಸಂಸ್ಥೆಗೆ, ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಪ್ರಕಾರ 2 ವರ್ಷ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಈ ಹಿನ್ನೆಲೆ ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ)ತಿದ್ದುಪಡಿ ಕಾಯ್ದೆ 2021 ಅನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ಸೂಚನೆ ನೀಡಿದ್ದಾರೆ.

About The Author

You May Also Like

More From Author

+ There are no comments

Add yours