ವೀರಶೈವ ಸಮಾಜ ಒಗ್ಗಟ್ಟಿನಲ್ಲಿ ಇರಬೇಕು; ಸಂಸದ ಬಸವರಾಜ್

1 min read

 

Tumkurnews
ತುಮಕೂರು; ವೀರಶೈವ ಸಮಾಜ ಯಾವಾಗಲು ಒಗ್ಗಟ್ಟಿನಲ್ಲಿ ಇರಬೇಕು, ಸಮುದಾಯದ ಅಭಿವೃದ್ದಿಗಾಗಿ ಮಾಡುವ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಸಂಸದ ಜಿ.ಎಸ್ ಬಸವರಾಜು ತಿಳಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತುಮಕೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘ ಆಯೋಜಿಸಿದ್ದ ವೀರಶೈವ ಲಿಂಗಾಯಿತ ನೌಕರರ ಸಮಾವೇಶ, ಪ್ರತಿಭಾಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೇರೆ ಬೇರೆ ಸಮುದಾಯಗಳ ಜನರು, ತಮ್ಮ ಸಮುದಾಯದ ಅಭಿವೃದ್ದಿಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಕಿಕ್ಕಿರಿದು ಸೇರುವ ಮೂಲಕ ಒಗ್ಗಟ್ಟು ಪ್ರದರ್ಶಿಸಿ, ಸರಕಾರದ ಮೇಲೆ ಒತ್ತಡ ತಂದು, ತಮ್ಮ ಕೆಲಸ ಕಾರ್ಯಗಳನ್ನು ಸಾಧಿಸಿಕೊಳ್ಳುತ್ತಿದ್ದಾರೆ. ಆದರೆ ವೀರಶೈವ ಸಮಾಜದಿಂದ ನಡೆಸುವ ಕಾರ್ಯಕ್ರಮಗಳಲ್ಲಿ ಜನರೇ ಇರುವುದಿಲ್ಲ. ಇದೇ ರೀತಿಯ ನಡವಳಿಕೆಯಾದರೆ ಭವಿಷ್ಯ ಬಹಳ ಕರಾಳವಾಗಲಿದೆ ಎಂದು ಸಂಸದ ಜಿ.ಎಸ್ ಬಸವರಾಜು ಎಚ್ಚರಿಸಿದರು.
ಸಿದ್ದಗಂಗಾ ಆಸ್ಪತ್ರೆಯ ಡಾ.ಪರಮೇಶ್ ಮಾತನಾಡಿ, ಸಂಘ ಆರಂಭವಾಗಿ ಹತ್ತಾರು ವರ್ಷಗಳಾಗಿ, ಅಂದಿನಿಂದ ಪ್ರತಿವರ್ಷ ಪ್ರತಿಭಾಪುರಸ್ಕಾರ ನಡೆಸಿಕೊಂಡು ಬರಲಾಗುತ್ತಿದೆ. ಕಳೆದ ಎರಡು ವರ್ಷಗಳ ಕಾಲ ಕೋವಿಡ್ ನಿಂದಾಗಿ ಇದು ಸಾಧ್ಯವಾಗಿರಲಿಲ್ಲ. ಈ ವರ್ಷ ಅದ್ದೂರಿಯಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾರತೀಯ ಆಚಾರ, ವಿಚಾರಗಳನ್ನು ಹೆಚ್ಚು ಉಳಿಸಿಕೊಂಡಿರುವ ಸಮುದಾಯದ ವೀರಶೈವ ಸಮಾಜ ಇದು ಹೆಮ್ಮೆಯ ವಿಷಯವಾಗಿದೆ. ಇದನ್ನು ಮಕ್ಕಳಿಗೆ ತಿಳಿಸಿ ಹೇಳಬೇಕಿದೆ. ಇದನ್ನು ತಿಳಿಸದಿದ್ದರೆ ಮುಂದಿನ ದಿನಗಳಲ್ಲಿ ನಾಡಿಗೆ ಮಠ ಮಾನ್ಯಗಳನ್ನು ನೀಡಿದ ನಮ್ಮ ಸಂಸ್ಕೃತಿ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಇಂತಹ ವಿಷಯಗಳನ್ನು ತಿಳಿಸಿ, ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಲು ನಾವೆಲ್ಲರೂ ಬದ್ದರಾಗ ಬೇಕಿದೆ. ಸಂಘಟನೆ ಇಲ್ಲದಿದ್ದರೆ ಭವಿಷ್ಯ ಅತ್ಯಂತ ಕಷ್ಟದಾಯಕವಾಗಲಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ ಮಾತನಾಡಿ, ಪ್ರತಿಭೆ ಇಂದು ಎಲ್ಲಾ ಸಮಾಜಗಳಲ್ಲಿಯೂ ಇದೆ. ನಾವು ಮುಂದಿದ್ದೇವೆ ಎಂಬ ಭ್ರಮೆ ಬೇಡ. ಅಕ್ಷರ ಎಲ್ಲರಿಗೂ ಸಿಗುವಂತಾಗದ ಮೇಲೆ ಪೈಪೋಟಿ ಹೆಚ್ಚಿದೆ. ಕೇವಲ ಅಂಕಗಳಲ್ಲೇ ಅಲ್ಲದೆ, ಸಾಮಾನ್ಯ ಜ್ಞಾನದಲ್ಲಿಯೂ ನಾವು ಮಂಚೂಣಿಗೆ ಬರಬೇಕಿದೆ. ಸಣ್ಣ ಸಣ್ಣ ಸಮಾಜಗಳ ಮಕ್ಕಳು ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆಗಳಿಗೆ ಹೋಗುತ್ತಿದ್ದಾರೆ. ಆದರೆ ವೀರಶೈವ ಲಿಂಗಾಯಿತ ಸಮಾಜದಲ್ಲಿ ಅಂತಹ ಉತ್ಸಾಹ ಕಾಣುತ್ತಿಲ್ಲ. ಇದರ ಬಗ್ಗೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಮೇಲಣಗವಿ ಮಠದ ಶ್ರೀ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮಕ್ಕಳು ವಿದ್ಯೆಯ ಜೊತೆಗೆ ವಿನಯವನ್ನು ರೂಢಿಸಿಕೊಳ್ಳಬೇಕು, ವಯೋವೃದ್ದ ತಂದೆ, ತಾಯಿಗಳನ್ನು ನೋಡಿಕೊಳ್ಳಬೇಕು. ಅದು ನೀವು ಮುದುಕರಾದ ಮೇಲೆ ನಿಮ್ಮನ್ನು ಪೋಷಿಸಲು ಸಾಧ್ಯವಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಏನು ಕೋಡುತ್ತಿರೋ ಅದು ಮುಖ್ಯವಲ್ಲ. ವಿದ್ಯೆಯನ್ನು ನೀಡಿ, ಜ್ಞಾನವೊಂದೇ ಇಂದಿನ ದಿನಗಳಲ್ಲಿ ನಿಮ್ಮನ್ನು ಮೇಲಿಂದ ಮೇಲೆ ತೆಗೆದುಕೊಂಡು ಹೋಗಬಲ್ಲದು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ ಜ್ಯೋತಿಗಣೇಶ್, ವೀರಶೈವ ಲಿಂಗಾಯಿತ ನೌಕರರ ಸಂಘದ ಅಧ್ಯಕ್ಷ ರೇಣುಕಾರಾಧ್ಯ, ಗೌರವಾಧ್ಯಕ್ಷ ಹೆಚ್.ಜೈಶಂಕರ್, ಕಾರ್ಯಾಧ್ಯಕ್ಷ ಉಮೇಶ್, ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಟಿ.ಜೆ., ಖಜಾಂಚಿ ಮಂಜುನಾಥ್, ತುಮಕೂರು ತಾಲೂಕು ಪದಾಧಿಕಾರಿಗಳಾದ ಎಸ್.ಆರ್ ಶಿವಕುಮಾರ್, ನಿಜಲಿಂಗಪ್ಪ, ಕೊಪ್ಪಳ್ ನಾಗರಾಜು, ಡಿ.ಎಸ್ ಪರಮಶಿವಯ್ಯ, ರವೀಶ್ ಉಪಸ್ಥಿತರಿದ್ದರು.
ಇದೇ ವೇಳೆ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 262 ವಿದ್ಯಾರ್ಥಿಗಳನ್ನು ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು.

About The Author

You May Also Like

More From Author

+ There are no comments

Add yours