ಭೋವಿ ಅಭಿವೃದ್ಧಿ ನಿಗಮಕ್ಕೆ 175 ಕೋಟಿ ರೂ., ಶೀಘ್ರ ಅಧ್ಯಕ್ಷರ ನೇಮಕ; ಮುಖ್ಯಮಂತ್ರಿ ಭರವಸೆ

1 min read

 

Tumkurnews
ತುಮಕೂರು; ಕಾಯಕ ಸಮಾಜವಾದ ಭೋವಿ ಅಭಿವೃದ್ಧಿ ನಿಗಮಕ್ಕೆ 175 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಈ ವರ್ಷ ನಿಗಮಕ್ಕೆ ನೀಡಿರುವ 110 ಕೋಟಿ ರೂ. ಅನುದಾನವನ್ನು ಸಮರ್ಪಕವಾಗಿ ಬಳಸಿ ಕಾರ್ಯಕ್ರಮ ರೂಪಿಸಿದರೆ ಮುಂದಿನ ವರ್ಷ ನಿಗಮಕ್ಕೆ 175 ಕೋಟಿ ರೂ. ಅನುದಾನ ನೀಡುವುದಾಗಿ ತಿಳಿಸಿದರು.
ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ರಾಷ್ಟ್ರೀಯ ಶ್ರೀ ಸಿದ್ದರಾಮೇಶ್ವರ ಓಡ್ಸ್ (ಭೋವಿ) ಯುವ ವೇದಿಕೆ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಭೋವಿ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭೋವಿ ಅಭಿವೃದ್ಧಿ ನಿಗಮಕ್ಕೆ ದೊಡ್ಡ ಮೊತ್ತದ ಅನುದಾನ ನೀಡುವ ಯೋಜನೆ ರೂಪಿಸಿದ ಮೇಲೆ ಈ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕಾದರೆ ದಕ್ಷ ಅಧ್ಯಕ್ಷರ ನೇಮಕ ಅಗತ್ಯವಿದೆ. ಹಾಗಾಗಿ ಇನ್ನೊಂದು ವಾರದೊಳಗೆ ನಿಗಮಕ್ಕೆ ದಕ್ಷ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದರು.
ಬದುಕಿನಲ್ಲಿ ಕಷ್ಟಕಾರ್ಪಣ್ಯ ಬಹಳ ಸಹಜ. ಯಾರ ಬದುಕಿನಲ್ಲಿ ಕಷ್ಟಕಾರ್ಪಣ್ಯ, ಸವಾಲು, ದುಡಿಮೆ ಇರುವುದಿಲ್ಲವೋ ಅಂತಹ ಬದುಕು ಬದುಕೇ ಅಲ್ಲ. ಕಷ್ಟಪಟ್ಟು ಮೈಮುರಿದು ಬೆವರು ಸುರಿಸಿ ದುಡಿದಾಗ ಮಾತ್ರ ದೇವರಿಗೆ ಮೆಚ್ಚುಗೆಯಾಗುತ್ತದೆ. ಈ ನಿಟ್ಟಿನಲ್ಲಿ ಭೋವಿ ಜನಾಂಗ ಕಾಯಕ ನಿರತವಾಗಿದೆ ಎಂದರು.
ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿದ್ದಾರೆ. ಇದರರ್ಥ ಪೂಜೆಗಿಂತ ಕಾಯಕವೇ ಶ್ರೇಷ್ಠ ಎಂಬುದಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಕಾಯಕಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಈ ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಹಾಗೆಯೇ ಉದ್ಯೋಗ ನೀಡುವ ಸಲುವಾಗಿ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
21ನೇ ಶತಮಾನ ಜ್ಞಾನದ ಶತಮಾನ. ಹಾಗಾಗಿ ಸಮುದಾಯದವರು ಕರಕುಶಲತೆಯಿಂದ ಲಯಬದ್ಧವಾಗಿ ಕೆಲಸ ಮಾಡುವ ಮೂಲಕ ತಂತ್ರಾಂಶ ಜ್ಞಾನವನ್ನು ಸಂಪೂರ್ಣವಾಗಿ ಮಕ್ಕಳಿಗೆ ಕಲಿಸಿದರೆ ನಿಮ್ಮ ಮಕ್ಕಳು ವಿಶ್ವ ಮಟ್ಟದಲ್ಲಿ ಸ್ಥಾನ ಪಡೆಯುತ್ತಾರೆ ಎಂದರು.
ಭೋವಿ ಸಮುದಾಯ ಭವನ ನಿರ್ಮಾಣಕ್ಕೆ ಎಸ್‍ಟಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಅನುದಾನ ಒದಗಿಸಲಾಗುವುದು, ಭೋವಿ ಸಮುದಾಯ ದೇಶ ಕಟ್ಟುವ, ನಾಡು ಕಟ್ಟುವ ಮತ್ತು ದೇವರಿಗೆ ಸ್ಥಾನ ಕಲ್ಪಿಸುವ ಮಹತ್ವದ ಕಾಯಕ ಸಮಾಜವಾಗಿದೆ. ಈ ಸಮಾಜ ಮತ್ತಷ್ಟು ಅಕ್ಷರ ಕ್ರಾಂತಿಗೆ ಮುಂದಾಗುವ ಅಗತ್ಯವಿದೆ ಎಂದು ತಿಳಿಸಿದರು.
ಸಿದ್ದರಾಮೇಶ್ವರರು ಬದುಕಿನ ದಾರಿ ತೋರಿಸಿಕೊಟ್ಟ ಪವಾಡ ಪುರುಷರು. ಪವಾಡದಲ್ಲಿ ಎರಡು ರೀತಿ ಇದೆ. ಇಲ್ಲದ್ದನ್ನು ಮಾಡಿ ತೋರಿಸುವುದು ಒಂದು ರೀತಿಯ ಪವಾಡವಾದರೆ, ಇರುವುದನ್ನು ಜ್ಞಾನದ ಮುಖಾಂತರ ಕಣ್ಣು ತೆರೆಸಿ ಬದುಕಿನಲ್ಲಿ ಉನ್ನತ ಮಟ್ಟಕ್ಕೆ ಹೋಗುವ ಪವಾಡ ಸಿದ್ದರಾಮೇಶ್ವರರದ್ದಾಗಿದೆ ಎಂದರು.
ದುಡಿಮೆಯಿಂದ ದುಡ್ಡಿಗೆ ಬೆಲೆ ಬರುತ್ತದೆ. ದುಡಿಮೆ ಮಾಡುವ ಜನ ಬದಲಾವಣೆ ತರುತ್ತಿದ್ದಾರೆ. ಹಾಗಾಗಿ ದುಡ್ಡೇ ದೊಡ್ಡಪ್ಪ ಎನ್ನುವ ಕಾಲ ಇದಲ್ಲ, ದುಡಿಮೆಯೇ ದೊಡ್ಡಪ್ಪ ಎನ್ನುವ ಕಾಲ ಇದಾಗಿದೆ ಎಂದು ತಿಳಿಸಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಶ್ರೀ ನಿರಂಜನ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಅಕ್ಷರ ಕ್ರಾಂತಿಗೆ ಒಳಗಾಗುವ ಸಮುದಾಯ ಇತಿಹಾಸ ನಿರ್ಮಾಣ ಮಾಡಲಿದೆ. ಹಾಗಾಗಿ ಭೋವಿ ಸಮುದಾಯ ಅಕ್ಷರ ಕ್ರಾಂತಿ ಮಾಡಬೇಕು ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೃದಯ ತಾಯಿ ಹೃದಯ ಇದ್ದಂತೆ. ನಮಗೆ ತಾಯಿ ಹೃದಯದ ಮುಖ್ಯಮಂತ್ರಿ ಸಿಕ್ಕಿದ್ದಾರೆ. ಚಿಕ್ಕ ಚಿಕ್ಕ ಸಮುದಾಯಗಳನ್ನು ಗುರುತಿಸಿ ಸಾಮಾಜಿಕ ನ್ಯಾಯ ಒದಗಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ.
ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದಾರೆ ಎಂದು ಶ್ಲಾಘಿಸಿದರು.
ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸಿದ್ದರಾಮೇಶ್ವರ ಅಧ್ಯಯನ ಪೀಠವನ್ನು ಸ್ಥಾಪಿಸಬೇಕು. ಭೋವಿ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಅನುದಾನವನ್ನು ನೀಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಕೋರಿದರು.
ಸಮಾವೇಶದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಐಎಎಸ್ ಅಧಿಕಾರಿ ಮಂಜುನಾಥ ಪ್ರಸಾದ್ ಅವರು, ಭೋವಿ ಸಮಾಜ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಮುಂದೆ ಬರಲು ಮುಖ್ಯಮಂತ್ರಿಗಳು ವಿಶೇಷ ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.
ಸಮಾರಂಭದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಂಸದ ಜಿ.ಎಸ್. ಬಸವರಾಜು, ಶಾಸಕ ಜ್ಯೋತಿಗಣೇಶ್, ಸಂಘದ ಅಧ್ಯಕ್ಷ ಕೋತೂರು ಹನುಮಂತರಾಯಪ್ಪ, ಕಾರ್ಯಾಧ್ಯಕ್ಷರಾದ ನಾಗೇಶ್ ರವಿ ಮಾಕಳಿ, ಮಾಜಿ ಶಾಸಕ ನಾಗರಾಜು, ರಾಜೇಶ್, ಓಂಕಾರ್ ಮತ್ತಿತರರು ಭಾಗವಹಿಸಿದ್ದರು.

About The Author

You May Also Like

More From Author

+ There are no comments

Add yours