ರೋಗಿಗಳಿಂದ ಸಂಗ್ರಹಿಸಿದ ಹಣ ದುರುಪಯೋಗ ಆರೋಪ
Tumkurnews
ತುಮಕೂರು; ಜಿಲ್ಲಾಸ್ಪತ್ರೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು, ತನಿಖೆಗೆ ಸಮಿತಿ ರಚನೆ ಮಾಡಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಆದೇಶಿಸಿದ್ದಾರೆ.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಂದ ವಿವಿಧ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಬ್ಯಾಂಕ್’ಗೆ ಕಟ್ಟದ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. 2016ರಿಂದ 2022ರ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಲಾಗಿದೆ, ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯಿಂದ ಸಾಕಷ್ಟು ಅವ್ಯವಹಾರಗಳು ನಡೆದಿದೆ ಎಂದು ಜಿಲ್ಲಾ ಸರ್ಜನ್ ಡಾ.ಟಿ.ಎ ವೀರಭದ್ರಯ್ಯ ಹಾಗೂ ವಿಷಯ ನಿರ್ವಾಹಕ ಹರೀಶ್ ವಿರುದ್ಧ ದೂರುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತನಿಖೆಗೆ ಆದೇಶ ಮಾಡಿದ್ದಾರೆ.
ಸಮಿತಿ ರಚನೆ; ಜಿಲ್ಲಾಸ್ಪತ್ರೆಯಲ್ಲಿ ರಕ್ಷಾ ಸಮಿತಿ ಹೆಸರಿನಲ್ಲಿ ಹಣ ದುರುಪಯೋಗ, ರೋಗಿಗಳಿಂದ ಸಂಗ್ರಹಿಸಿದ ಹಣವನ್ನು ಬ್ಯಾಂಕ್’ಗೆ ಜಮಾ ಮಾಡದೇ ಇರುವುದು ಸೇರಿದಂತೆ ಕೇಳಿಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಗುರುಬಸವೇಗೌಡ, ಜಿಪಂ ಲೆಕ್ಕಾಧಿಕಾರಿ ನಾಗೇಶ್ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ವಸಂತರಾಜು ಅವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚನೆ ಮಾಡಲಾಗಿದ್ದು, ಒಂದು ವಾರದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ತನಿಖೆಗೆ ಸ್ವಾಗತ; ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿರುವುದನ್ನು ಸ್ವಾಗತಿಸುವುದಾಗಿ ಜಿಲ್ಲಾ ಸರ್ಜನ್ ಡಾ.ಟಿ.ಎ ವೀರಭದ್ರಯ್ಯ ತಿಳಿಸಿದ್ದಾರೆ. ಈ ಕುರಿತು ‘ತುಮಕೂರು ನ್ಯೂಸ್’ಗೆ ಪ್ರತಿಕ್ರಿಯೆ ನೀಡಿದ ಅವರು, ಮಾನ್ಯ ಜಿಲ್ಲಾಧಿಕಾರಿಗಳು ಪ್ರಕರಣದ ಕುರಿತು ತನಿಖೆಗೆ ಆದೇಶಿಸಿರುವುದನ್ನು ಸ್ವಾಗತಿಸುತ್ತೇನೆ. ಇಷ್ಟು ವರ್ಷಗಳ ಕಾಲ ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ ಮತ್ತು ರೋಗಿಗಳ ಸೇವೆಗೆ ಪ್ರಾಮಾಣಿಕವಾಗಿ ಮತ್ತು ಕಳಂಕ ರಹಿತವಾಗಿ ದುಡಿದಿದ್ದೇನೆ. ಇಂತಹ ಆರೋಪಗಳು ಬಂದಾಗ ಅಷ್ಟೇ ಪ್ರಾಮಾಣಿಕವಾಗಿ ಅದರ ತನಿಖೆಗೆ ಸ್ವಾಗತಿಸುತ್ತೇನೆ. ತನಿಖೆಯಲ್ಲಿ ಯಾವುದೇ ಲೋಪ, ತಪ್ಪು ಕಂಡು ಬಂದಲ್ಲಿ ಜಿಲ್ಲಾಧಿಕಾರಿಗಳು ನಿಯಮಾನುಸಾರ ಕ್ರಮ ಜರುಗಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.
ತುಮಕೂರು ಡಿಸಿಸಿ ಬ್ಯಾಂಕ್ ವಿರುದ್ಧ ತನಿಖೆಗೆ ಆದೇಶ
+ There are no comments
Add yours