ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಮಹತ್ವದ ಸಭೆ; ಸಂಪೂರ್ಣ ವರದಿ‌ ಇಲ್ಲಿದೆ

1 min read

 

Tumkurnews
ತುಮಕೂರು; ಕಂದಾಯ ಗ್ರಾಮ, ಗ್ರಾಮದ ಭಾಗವಾಗಿ ಪರಿವರ್ತನೆಯಾದ ಜನವಸತಿ ನಿವಾಸಿಗಳಿಗೆ ಹಕ್ಕು ದಾಖಲೆ ಒದಗಿಸುವ ಸಂಬಂಧ ತಹಶೀಲ್ದಾರರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಚರ್ಚಿಸಿದ ಅವರು, ಜಿಲ್ಲೆಯಲ್ಲಿ 519 ಜನವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ. ಕಂದಾಯ ಗ್ರಾಮಗಳಿಗೆ ಹಕ್ಕುಪತ್ರಗಳನ್ನು ವಿತರಿಸುವಂತೆ ಸರ್ಕಾರದ ನಿರ್ದೇಶನವಿದ್ದು, ತಹಶೀಲ್ದಾರರು ಈ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕಾರ್ಯೋನ್ಮುಖರಾಗುವಂತೆ ಸೂಚಿಸಿದರು.
ಕೋವಿಡ್ 19 ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಲಸಿಕಾಕರಣ ಪ್ರಗತಿ ಸಾಧಿಸುತ್ತಿದ್ದು, 15-17 ಮತ್ತು 12-14 ವಯೋಮಾನದ ಮಕ್ಕಳಿಗೆ ನೀಡಲಾಗುತ್ತಿರುವ ಎರಡನೇ ಡೋಸ್ ಲಸಿಕಾಕರಣ ಕ್ರಮವಾಗಿ ಶೇ.76.4 ಮತ್ತು ಶೇ.84.3 ಇದ್ದು ಶೀಘ್ರವಾಗಿ ಶೇ.100 ರಷ್ಟು ಲಸಿಕಾಕರಣದ ಗುರಿ ಸಾಧಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ರೋಗಗಳು ಹರಡದಂತೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಗ್ರಾಮಾಂತರದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಕಾಧಿಕಾರಿಗಳು ಕ್ರಮವಹಿಸಬೇಕು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳುವುದು, ಸೊಳ್ಳೆನಾಶಕ ದ್ರಾವಣವನ್ನುನ ಸಿಂಪಡಿಸುವುದು, ಧೂಮಿಕರಣ ಮಾಡಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಅಸ್ಪತ್ರೆಗಳು ಅತ್ಯಂತ ಸ್ವಚ್ಛವಾಗಿರುವಂತೆ ಆರೋಗ್ಯಾಧಿಕಾರಿಗಳು ನಿಗಾವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಯಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಆಸ್ಪತ್ರೆಯ ಒಳಾಂಗಣ ಮತ್ತು ಹೊರಾಂಗಣ ನೈರ್ಮಲ್ಯದಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಈ ಕುರಿತು ಡಿಹೆಚ್‍ಓ ಸೂಕ್ತ ನಿರ್ದೇಶನ ನೀಡಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ನಿವೇಶನಗಳನ್ನು ನೀಡಬೇಕಾಗಿದ್ದು, ಪಾಲಿಕೆ, ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತಿಗಳು ಸೂಕ್ತ ನಿವೇಶನಗಳನ್ನು ಗುರುತಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಬೇಕು. ಈ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ನಿವೇಶನ ಪಡೆಯಬೇಕು ಎಂದು ತಿಳಿಸಿದರು.
ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ಶಿಕ್ಷಣ ಇಲಾಖೆಯ ಸುಪರ್ದಿಗೆ ಖಾತೆ ಮಾಡಿಕೊಡುವ ಕೆಲಸ ಪ್ರಗತಿಯಲ್ಲಿದೆ. ತುಮಕೂರು, ಮಧುಗಿರಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಪ್ರಕರಣಗಳನ್ನು ಖಾತೆ ಮಾಡಲು ಹಾಗೂ ಶಿಕ್ಷಣ ಇಲಾಖೆಗೆ ಕಾಯ್ದಿರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ತಹಶೀಲ್ದಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಯಿತು, ಬಿಇಓ ಅವರು ಶಾಲಾವಾರು ಜಮೀನುಗಳ ವಿವರಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ತಾಲ್ಲೂಕು ಕಚೇರಿ ಹಾಗೂ ಸಂಬಂಧಿಸಿದ ಗ್ರಾಮಪಂಚಾಯಿತಿಗಳಿಗೆ ಬಿ.ಆರ್.ಪಿ, ಸಿ ಆರ್ ಪಿ ಅಧಿಕಾರಿಗಳ ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಿದರು.
ಸಾರ್ವಜನಿಕ ಕುಂದು-ಕೊರತೆ ನಿವಾರಣ ವ್ಯವಸ್ಥೆಯಡಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ತಹಶಿಲ್ದಾರ್’ಗಳಿಗೆ ನಿರ್ದೇಶಿಸಿದರು, ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಆಧಾರ್ ಸೀಡಿಂಗ್ ಸೇರಿ ಯಾವುದೇ ಪ್ರಕರಣಗಳಿದ್ದಲ್ಲಿ ಶೀಘ್ರ ಇತ್ಯರ್ಥಪಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳನ್ನು ಎಬಿಸಿ ಕೆಟಗೆರಿಗಳಾಗಿ ವಿಂಗಡಿಸಿ ಪೋರ್ಟಲ್ ನಲ್ಲಿ ನಮೂದಿಸಬೇಕು. ಅಂತೆಯೇ ಬೆಳೆಹಾನಿ ಕುರಿತಂತೆ ರೈತರಿಂದ ಅಗತ್ಯ ದಾಖಲೆಗಳಾದ ಪಹಣಿ, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‍ಎಸ್‍ಸಿ ಸಂಖ್ಯೆ, ಆಧಾರ್ ಕಾರ್ಡು ಪ್ರತಿಗಳನ್ನು ಸಂಗ್ರಹಿಸಿ ಪರಿಹಾರ ಪೋರ್ಟಲ್‍ನಲ್ಲಿ ತುಂಬಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಭೂಮಿ ಯೋಜನೆ ಪ್ರಗತಿ, ಪಹಣಿ ಕಾಲಂ 3/9 ಮಿಸ್‍ಮ್ಯಾಚ್ ವಿಲೇವಾರಿ, ಪೈಕಿಪಹಣಿ ಒಟ್ಟುಗೂಡಿಸುವಿಕೆ, 11ಇಗೆ ಸಂಬಂಧಿಸಿದಂತೆ ಆರ್‍ಟಿಸಿ ತಿದ್ದುಪಡಿ ಪ್ರಕರಣಗಳ ವಿಷಯಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ವಿ.ಅಜಯ್, ಡಿಡಿಎಲ್‍ಆರ್ ಸುಜಯ್ ಕುಮಾರ್, ತಹಶೀಲ್ದಾರ್ ಮೋಹನ್ ಕುಮಾರ್, ಪಾಲಿಕೆ ಆಯುಕ್ತೆ ಆರ್.ರೇಣುಕಾ, ಡಿಹೆಚ್‍ಓ ಡಾ.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ಡಿಡಿಪಿಐ ಸಿ.ನಂಜಯ್ಯ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎನ್.ಅಂಜನಪ್ಪ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

About The Author

You May Also Like

More From Author

+ There are no comments

Add yours