Tumkurnews
ತುಮಕೂರು; ನಿವೇಶನ ಖಾತೆ ಮಾಡಿಕೊಡಲು 50 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದ ಪಿಡಿಒಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.
2019ರಲ್ಲಿ ಮಣಿಕಂಠ ಎಂಬುವರ ನಿವೇಶನದ ಖಾತೆ ಮಾಡಿಕೊಡಲು ಚೇಳೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ದೇಶ್ವರ 50 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದನು. ಲಂಚದ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು.
ಬಳಿಕ ಇನ್ಸ್ ಪೆಕ್ಟರ್ ಹಾಲಪ್ಪ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ತುಮಕೂರಿನ 7ನೇ ಜಿಲ್ಲಾ ಮತ್ತು ವಿಶೇಷ ದತ್ತ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇಗೌಡ ಅವರು ಆರೋಪಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಎನ್.ಡಿ ಬಸವರಾಜು ವಾದ ಮಂಡಿಸಿದ್ದರು.
ಎಸಿಬಿ ರದ್ದುಗೊಂಡಿರುವ ಬೆನ್ನಲ್ಲೇ ರಾಜ್ಯದಲ್ಲಿ ಎಸಿಬಿ ನಿರ್ವಹಿಸಿದ ಪ್ರಕರಣವೊಂದರಲ್ಲಿ ಆರೋಪಿಗೆ ಶಿಕ್ಷೆ ಜಾರಿಯಾಗಿರುವುದು ವಿಶೇಷವಾಗಿದೆ.
+ There are no comments
Add yours