ಎಲ್ಲಾ ಪಂಚಾಯತಿಗೂ ಪ್ರಶಸ್ತಿ ಬರಬೇಕೆಂಬ ಗುರಿ: ಶಾಸಕ ಗೌರಿಶಂಕರ್

1 min read

ತುಮಕೂರು, ಜೂ.19

2019-20ನೇ ಸಾಲಿನ ದೀನ ದಯಾಳ್ ಉಪಾಧ್ಯಾಯ ಪಂಚಾಯಿತಿ ಸಶಕ್ತೀಕರಣ ಪುರಸ್ಕಾರ ಪ್ರಶಸ್ತಿಗೆ ಗ್ರಾಮಾಂತರದ ನಾಗವಲ್ಲಿ ಪಂಚಾಯಿತಿ ಆಯ್ಕೆಯಾಗಿರುವುದಕ್ಕೆ ಶಾಸಕ ಡಿ.ಸಿ.ಗೌರಿಶಂಕರ್ ಅವರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಅಧಿಕಾರಿ ವರ್ಗ ಹಾಗೂ ನಾಗವಲ್ಲಿ ಪಂಚಾಯಿತಿ ಅಧಿಕಾರಿಗಳು ಮತ್ತು ನೌಕರ ವರ್ಗವನ್ನು ಅಭಿನಂದಿಸಿ ಸನ್ಮಾನಿಸಿದರು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಉತ್ತಮ ಅನುಷ್ಠಾನ, ಅಭಿವೃದ್ಧಿ ಕಾಮಗಾರಿಗಳ ಅನುದಾನ ಸಮರ್ಪಕ ಬಳಕೆ, ಸೌರಶಕ್ತಿ ವಿದ್ಯುತ್ ಬಳಕೆ, ಪಂಚಾಯಿತಿ ವ್ಯಾಪ್ತಿಯಲ್ಲಿ ನೈರ್ಮಲ್ಯ ನಿರ್ವಹಣೆ ಇತ್ಯಾದಿ ಮಾನದಂಡಗಳನ್ನು ಆಧರಿಸಿ ಈ ಪ್ರಶಸ್ತಿಗೆ ನಾಗವಲ್ಲಿ ಪಂಚಾಯಿತಿಯನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಅಧಿಕಾರಿ ಮತ್ತು ನೌಕರರನ್ನು ಸನ್ಮಾನಿಸಿ ಮಾತನಾಡಿದ ಶಾಸಕ ಡಿ.ಸಿ.ಗೌರಿಶಂಕರ್, 2018 ರಲ್ಲಿ ಶಾಸಕನಾಗಿ ಆಯ್ಕೆಯಾದ ನಂತರ ಗ್ರಾಮಾಂತರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಂದ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಎಲ್ಲಾ ಪಂಚಾಯಿತಿಗಳಿಗೂ ಉತ್ತಮ ಪ್ರಶಸ್ತಿ ಸಿಗಬೇಕೆಂಬ ನಿಟ್ಟಿನಲ್ಲಿ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ನನ್ನ ಅವಧಿಯ 2018-2019 ನೇ ಸಾಲಿನ ಅನುದಾವನ್ನು ಬಳಸಿಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಸಮುದಾಯ ಭವನ, ಅಂಗನವಾಡಿ, ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ನಿಟ್ಟಿನಲ್ಲಿ 2019-2020 ರಲ್ಲಿ ನಾಗವಲ್ಲಿ ಪಂಚಾಯಿತಿಗೆ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರಕಾರ ಮತ್ತು ಶಾಸಕರ ಅನುದಾನವನ್ನು ಬಳಸಿಕೊಂಡು ಕರ್ನಾಟಕ ಪಂಚಾಯತ್ ರಾಜ್ಯ ಇಲಾಖೆ ಅಡಿಯಲ್ಲಿ ಅಭಿವೃದ್ಧಿ ಪಡಿಸಿರುವ ನಾಗವಲ್ಲಿ ಗ್ರಾಮ ಪಂಚಾಯಿತಿಗೆ ದೀನ ದಯಾಳ್ ಉಪಾಧ್ಯಾಯ ಪಂಚಾಯಿತಿ ಸಶಕ್ತೀಕರಣ ಪುರಸ್ಕಾರ ಪ್ರಶಸ್ತಿ ಆಯ್ಕೆ ಮಾಡಿರುವುದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಗ್ರಾಮಾಂತರದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಇದೇ ರೀತಿ ಅಧಿಕಾರಿಗಳು ಕೆಲಸ ಮಾಡುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಜೈಪಾಲ್, ಸಹಾಯಕ ನಿರ್ದೇಶಕ ಶಶಿಧರ್, ಪಿಡಿಒ ರವಿಕುಮಾರ್ ಮತ್ತು ಅಧಿಕಾರಿ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಾಗವಲ್ಲಿ ಗ್ರಾಪಂ ಸದಸ್ಯ ದೀಪು ಸೇರಿದಂತೆ ಪಂಚಾಯ್ತಿ ಸದಸ್ಯರು, ಜೆಡಿಎಸ್ ಮುಖಂಡರು ಕಾರ್ಯಕರ್ತರು, ಅಧಿಕಾರಿಗಳು ಹಾಜರಿದ್ದರು.

About The Author

You May Also Like

More From Author

+ There are no comments

Add yours