ಜುಲೈ 2ರ ಬಳಿಕ ಆಪರೇಷನ್ ತುಮಕೂರು ಕಾಂಗ್ರೆಸ್!

1 min read

ತುಮಕೂರು(ಜೂ.28) tumkurnews.in
ಜಿಲ್ಲೆಯ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸ ತೊಡಗಿದೆ. ಬಿಜೆಪಿ ಪಕ್ಷದಲ್ಲಿ ಜಿಲ್ಲಾ ಅಧ್ಯಕ್ಷರ ಬದಲಾವಣೆ ಬಳಿಕ ಜೆಡಿಎಸ್‌ನಲ್ಲಿ ಜಿಲ್ಲಾಧ್ಯಕ್ಷರ ಬದಲಾವಣೆಯಾಗಬೇಕು ಎಂಬ ಕೂಗೆದ್ದಿದೆ, ಅದರ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಸರದಿ.

ಜಿಲ್ಲಾ ಕಾಂಗ್ರೆಸ್ ನಲ್ಲೂ ಜಿಲ್ಲಾ ಅಧ್ಯಕ್ಷರ ಬದಲಾವಣೆ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ, ಪಕ್ಷದ ಸಾಮಾನ್ಯ ಕಾರ್ಯಕರ್ತರು ಜಿಲ್ಲಾ ಅಧ್ಯಕ್ಷರ ಬದಲಾವಣೆಯ ಕೂಗೆಬ್ಬಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ವಿಚಾರದಲ್ಲಿ ಕಾರ್ಯಕರ್ತರಿಗೆ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ ಎನ್ನುವುದು ಬೆಳಕಿಗೆ ಬರುತ್ತಿದೆ. ಹೀಗಾಗಿ ಸ್ವತಃ ಕಾರ್ಯಕರ್ತರು ‘ನಾಯಕನನ್ನು ಬದಲಿಸಿ’ ಎಂದು ಕೂಗೆಬ್ಬಿಸುತ್ತಿರುವುದು tumkurnews.in ಗಮನಕ್ಕೆ ಬಂದಿದೆ.
ಯಾರಿಗೆ ಚುಕ್ಕಾಣಿ: ಹಾಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.
ರಾಮಕೃಷ್ಣ ಅವರು ಶಾಸಕ ಡಾ.ಜಿ ಪರಮೇಶ್ವರ್ ಅವರ ಶಿಷ್ಯರಾದ್ದರಿಂದ ಅವರ ಬದಲಾವಣೆ ಸದ್ಯಕ್ಕೆ ಸಾಧ್ಯವಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಪದಗ್ರಹಣವಾದ ಬಳಿಕ ಈ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ.

ಡಿ.ಕೆ ಶಿವಕುಮಾರ್ ಅವರು ತಮಗೆ ಬೇಕಾದ ಯಾರಿಗೆ ಬೇಕಾದರೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಿರಿಯನ್ನು ನೀಡಬಹುದು. ಅಥವಾ ಸಾಮಾಜಿಕ ನ್ಯಾಯ, ಹಿರಿತನದ ಆಧಾರದ ಮೇಲೆ ಯಾರಿಗೆ ಬೇಕಿದ್ದರೂ ಜಿಲ್ಲಾಧ್ಯಕ್ಷ ಹುದ್ದೆ ಒಲಿಯಬಹುದು.
ಆದ್ದರಿಂದಲೇ ಕಾರ್ಯಕರ್ತರು ತಮ್ಮ ತಮ್ಮ ನಾಯಕರ ಪರವಾಗಿ ವಕಾಲತ್ತು ಆರಂಭಿಸಿದ್ದಾರೆ.
ಸದ್ಯಕ್ಕೆ ಜಿಲ್ಲೆಯಲ್ಲಿ ತಿಪಟೂರು ಮಾಜಿ ಶಾಸಕ ಕೆ.ಷಡಕ್ಷರಿ ಅವರ ಹೆಸರನ್ನು ಕಾರ್ಯಕರ್ತರು ಪ್ರಸ್ತಾಪಿಸಿದ್ದಾರೆ. ಉಳಿದಂತೆ ಮಾಜಿ ಸಂಸದ‌ ಎಸ್.ಪಿ ಮುದ್ದಹನುಮೇಗೌಡ, ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರ ಹೆಸರು ಓಡಾಡುತ್ತಿದೆ. ಆದರೆ ಈ ಇಬ್ಬರೂ ಸದ್ಯಕ್ಕೆ ಪಕ್ಷದ ಕಾರ್ಯ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.
ಜುಲೈ 2ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇದಕ್ಕಾಗಿ ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಆದರೆ ಜಿಲ್ಲೆಯ ಈ ಇಬ್ಬರು ಪ್ರಮುಖ ನಾಯಕರು ಈ ಸಿದ್ಧತೆ ಕಾರ್ಯಗಳಿಂದ ದೂರ ಉಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಕೆಶಿ ವಿಶ್ವಾಸಕ್ಕೆ ಪಾತ್ರರಾಗುವ ಸಾಧ್ಯತೆಗಳು ಕಡಿಮೆ ಇದೆ.

ಕುಣಿಗಲ್ ಭಾಗದಲ್ಲಿ ಶಾಸಕ ಡಾ.ರಂಗನಾಥ್ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡುವಂತೆ ಡಿಕೆಶಿಗೆ ಮನವಿ ಮಾಡಲು ರಂಗನಾಥ್ ಬೆಂಬಲಿಗರು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಶಿರಾ ಮಾಜಿ ಶಾಸಕ, ಮಾಜಿ ಸಚಿವರಾದ ಟಿ.ಬಿ ಜಯಚಂದ್ರ ಅವರಂತಹ ಹಿರಿಯ ನಾಯಕರಿರುವಾಗ ಇತರೆ ನಾಯಕರು ಪೈಪೋಟಿಗೆ ನಿಲ್ಲುವ ಸಾಧ್ಯತೆಗಳು ಕಡಿಮೆ ಇದೆ. ಈ ನಡುವೆ ಟಿ.ಬಿ ಜಯಚಂದ್ರ ಅವರಿಗೆ ಪಕ್ಷದ ಜವಾಬ್ದಾರಿ ನೀಡಿ, ಸಂಘಟನೆಗೆ ಒತ್ತು ನೀಡಬೇಕು ಎಂಬ ಒತ್ತಾಯವೂ ಪಕ್ಷದಲ್ಲಿ ಇದೆ.

ಅಲ್ಪ ಸಂಖ್ಯಾತ ಮುಖಂಡರು ತಮ್ಮ ನಾಯಕ, ತುಮಕೂರು ನಗರ ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದಲ್ಲದೇ ಎಲ್ಲಾ ಕ್ಷೇತ್ರದಲ್ಲಿನ ಕಾರ್ಯಕರ್ತರು ತಮ್ಮ ನಾಯಕರ ಪರವಾಗಿ ಧ್ವನಿ ಎತ್ತಲು ಸಿದ್ಧರಾಗಿದ್ದು, ಜುಲೈ 2ರ ಬಳಿಕ ಜಿಲ್ಲಾ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆಯ ಕೂಗು ಜೋರಾಗಲಿರುವ ಸುಳಿವು Tumkurnews.inಗೆ ಲಭ್ಯವಾಗಿದೆ.

About The Author

You May Also Like

More From Author

+ There are no comments

Add yours