ಕಾಮಗಾರಿ ಪ್ರಗತಿ ವಿಳಂಬವಾದರೆ ಅಧಿಕಾರಿಗಳಿಗೆ ಕಠಿಣ ಕ್ರಮದ ಎಚ್ಚರಿಕೆ; ಕಾಲ್ನಡಿಗೆಯಲ್ಲಿಯೇ ಕಾಮಗಾರಿ ಪರಿಶೀಲಿಸಿದ ಸಚಿವ ಚಲುವರಾಯಸ್ವಾಮಿ
Tumkurnews.in
ತುಮಕೂರು: ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ಸಂಕಲ್ಪ ತೊಟ್ಟಿರುವ ರಾಜ್ಯ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು, ಗುರುವಾರ ತಿಪಟೂರು ಸಮೀಪದ ಚೌಡ್ಲಪುರದ ಎತ್ತಿನಹೊಳೆ ಕಾಮಗಾರಿಯ ಪ್ಯಾಕೇಜ್ 18 ಹಾಗೂ ತಿಪಟೂರಿನ ಬೈಪಾಸ್ ಬಳಿ ನಡೆಯುತ್ತಿರುವ ‘ಎಲಿವೇಟೆಡ್ ಟ್ರಫ್’ ಕಾಮಗಾರಿಗಳನ್ನು ಖುದ್ದು ಪರಿಶೀಲನೆ ನಡೆಸಿದರು.
ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಅಕ್ಟೋಬರ್ ಅಂತ್ಯದ ಗಡುವು ನೀಡಿದ ಸಚಿವರು, ಯಾವುದೇ ಕಾರಣಕ್ಕೂ ನೆಪಗಳನ್ನು ಸಹಿಸುವುದಿಲ್ಲ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಕಾಲ್ನಡಿಗೆಯಲ್ಲೇ ಪರಿಶೀಲನೆ ಯೋಜನೆಯ ಪ್ರಗತಿಯನ್ನು ಕಣ್ಣಾರೆ ಕಂಡು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಚಿವರು ಒಂದು ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಕಾಲ್ನಡಿಗೆಯಲ್ಲಿಯೇ ತೆರಳಿ, ಚೌಡ್ಲಪುರದ 127 ರಿಂದ 137 ಕಿ.ಮೀ ವ್ಯಾಪ್ತಿಯ ಕಾಮಗಾರಿಯ ಪ್ರತಿಯೊಂದು ಹಂತವನ್ನು ಕೂಲಂಕಷವಾಗಿ ವೀಕ್ಷಿಸಿದರು.
ಚೌಡ್ಲಪುರ ಪ್ಯಾಕೇಜ್: ಚೌಡ್ಲಪುರ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಾಖಲೆಗಳ ಕೊರತೆಯಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಇದೀಗ ಎಲ್ಲಾ ತೊಡಕುಗಳನ್ನು ನಿವಾರಿಸಿ, ಭರದಿಂದ ಕಾಮಗಾರಿ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ನಂತರ ಮಾತನಾಡಿದ ಸಚಿವರು, ಈ ಭಾಗದಲ್ಲಿ 22 ಮೀಟರ್ ಡೀಪ್ ಕಟ್ ಮಾಡಲಾಗಿದ್ದು, ಲೈನಿಂಗ್ ಕಾರ್ಯ ಪ್ರಗತಿಯಲ್ಲಿದೆ. ಹೆದ್ದಾರಿಯ ಬಳಿ ಕಟ್ ಅಂಡ್ ಕವರ್ ಕಾಮಗಾರಿಯನ್ನು ನಡೆಸಲಾಗಿದೆ. ಒಟ್ಟು 606 ಕೋಟಿ ರೂ. ವೆಚ್ಚದ ಈ ಪ್ಯಾಕೇಜ್‌ನಲ್ಲಿ ಈಗಾಗಲೇ ಶೇ.86ರಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದು, ದಿನದ 22 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಸಾಗುತ್ತಿದೆ. ಇಲ್ಲಿಂದ ತುಮಕೂರಿನವರೆಗೂ ಯಾವುದೇ ಅಡೆ ತಡೆಗಳಿಲ್ಲ. ಹೀಗಾಗಿ ಅಕ್ಟೋಬರ್ ತಿಂಗಳಿನಲ್ಲಿಯೇ ಈ ಭಾಗದ ಕಾಮಗಾರಿ ಸಂಪೂರ್ಣವಾಗಿ ಕ್ಲಿಯರ್ ಆಗಲೇಬೇಕು ಎಂದು ಸಚಿವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಎಲಿವೇಟೆಡ್ ಟ್ರಫ್’ ತಿಪಟೂರು ಬೈಪಾಸ್ ಬಳಿ ರಸ್ತೆಯ ಮೇಲ್ಭಾಗದಲ್ಲಿ ಎತ್ತಿನಹೊಳೆ ನೀರು ಹರಿಯಲು ನಿರ್ಮಿಸುತ್ತಿರುವ ‘ಎಲಿವೇಟೆಡ್ ಟ್ರಫ್'(ಮೇಲ್ಸೇತುವೆ) ಕಾಮಗಾರಿಯನ್ನು ವೀಕ್ಷಿಸಿದ ಸಚಿವರು, ಕಳೆದ 3 ವರ್ಷಗಳಿಂದಲೂ ಈ ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಯೋಜನೆಯಲ್ಲಿ ಸಮಯ ಪಾಲನೆ ಅತ್ಯಂತ ಮುಖ್ಯ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಸ ನಡೆಯುತ್ತಿರುವುದರಿಂದ ವಾಹನಗಳ ಸಂಚಾರಕ್ಕೂ ಯಾವುದೇ ರೀತಿಯಲ್ಲಿ ಸಮಸ್ಯೆಯಾಗಬಾರದು. ಮುಂದಿನ ಒಂದೂವರೆ ತಿಂಗಳೊಳಗೆ(ಅಕ್ಟೋಬರ್ ಅಂತ್ಯಕ್ಕೆ) ಈ ಕಾಮಗಾರಿ ಕಡ್ಡಾಯವಾಗಿ ಮುಗಿಯಲೇಬೇಕು. ಯಾವುದೇ ಕಾರಣಕ್ಕೂ ಇಲಾಖೆಗೆ ಮುಜುಗರವಾಗುವಂತಹ ಸನ್ನಿವೇಶ ಸೃಷ್ಟಿಯಾಗಬಾರದು” ಎಂದು ತಾಕೀತು ಮಾಡಿದರು.
“ಖುದ್ದು ನಾನೇ ಬಂದು ಸ್ಥಳ ಪರಿಶೀಲನೆ ನಡೆಸಿದ್ದೇನೆ. ಇನ್ನಾದರೂ ಕಾಮಗಾರಿ ವಿಳಂಬವಾಗುವಂತಿಲ್ಲ. ಒಂದು ವೇಳೆ ಮತ್ತೆ ಅದೇ ಹಳೇ ರಾಗದಂತೆ ಕೆಲಸ ತಡವಾದರೆ, ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೇಲೆಯೇ ನೇರ ಕ್ರಮ ಜರುಗಿಸಲಾಗುವುದು. ಮುಂದಿನ ಅನಾಹುತಗಳಿಗೆ ನಾನಂತೂ ಜವಾಬ್ದಾರನಲ್ಲ” ಎಂದು ಸಚಿವರು ಎಚ್ಚರಿಸಿದರು.
ಸಚಿವರ ಪರಿಶೀಲನಾ ಕಾರ್ಯದ ವೇಳೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ, ತಿಪಟೂರು ಕ್ಷೇತ್ರದ ಶಾಸಕ ಷಡಕ್ಷರಿ ಹಾಗೂ ಜಲಸಂಪನ್ಮೂಲ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
