ಶಾಸಕ ಷಡಕ್ಷರಿ ಚೇತರಿಕೆ, ಶನಿವಾರ ತಿಪಟೂರಿಗೆ
Tumkur news
ತುಮಕೂರು: ಗುರುವಾರ ಬೆಳಗ್ಗೆ ತೀರಾ ಅಸ್ವಸ್ಥರಾಗಿದ್ದ ಕೆ. ಷಡಕ್ಷರಿಯವರು ಪರಿಣಾಮಕಾರಿ ಚಿಕಿತ್ಸೆ ನಂತರ ಗುಣಮುಖರಾಗಿದ್ದು, ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ನ್ಯಾಕೇನಹಳ್ಳಿ ಸುರೇಶ್ ತಿಳಿಸಿದ್ದಾರೆ.
ಇಂದು ಬೆಳಗ್ಗೆ ನವದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಶಾಸಕರನ್ನು ಭೇಟಿ ಮಾಡಿದ ಸುರೇಶ್ ನೇತೃತ್ವದ ಷಡಕ್ಷರಿ ಅವರ ಅಭಿಮಾನಿಗಳ ತಂಡ ಆರೋಗ್ಯ ವಿಚಾರಿಸಿದೆ.
ಸಂಜೆಯವರೆಗೂ ಅಲ್ಲಿಯೇ ಇದ್ದು, ಅವರ ಯೋಗಕ್ಷೇಮ ಗಮನಿಸಿದ ನಂತರ ಗುಣಮುಖರಾದ ಕಾರಣ ಶುಕ್ರವಾರ ಸಂಜೆಯ ಮೇಲೆ ಕರ್ನಾಟಕ ಭವನಕ್ಕೆ ಅವರನ್ನು ಸ್ಥಳಾಂತರ ಮಾಡಲಾಯಿತು.
ಶನಿವಾರ ಬೆಳಗ್ಗೆ ದೆಹಲಿಯಿಂದ ಹೊರಟು ಸಂಜೆಯ ವೇಳೆಗೆ ತಿಪಟೂರಿಗೆ ಬರಬಹುದೆಂದು ಅವರು ತಿಳಿಸಿದ್ದಾರೆ.
ರಾಜ್ಯದ ರಾಜಕೀಯ ಬದಲಾವಣೆ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಶಾಸಕ ಕೆ. ಷಡಕ್ಷರಿ ಬುಧವಾರ ಸಂಜೆ ದೆಹಲಿಗೆ ತೆರಳಿದ್ದರು. ಗುರುವಾರ ಬೆಳಗ್ಗೆ ಡಿಸಿಎಂ ಜಿ. ಪರಮೇಶ್ವರ ಅವರ ಕೊಠಡಿಯಲ್ಲಿ ಉಪಹಾರ ಸೇವಿಸುವ ಸಂದರ್ಭದಲ್ಲಿ ಸ್ವಲ್ಪ ಕೈ ನಡುಗಿ, ತಲೆ ಸುತ್ತು ಬಂದು ಅಲ್ಲೆ ಕುಸಿದು ಕುಳಿತಿದ್ದಾರೆ. ನಂತರ ಪ್ರಜ್ಞೆ ಕಳೆದುಕೊಂಡು ನಿತ್ರಾಣರಾದ ಅವರನ್ನು ಕರ್ನಾಟಕ ಭವನದಲ್ಲಿದ್ದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಪರಮೇಶ್ವರ್ ಮತ್ತಿತರರು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದರು.
ಮದ್ಯಾಹ್ನ 11 ಗಂಟೆಯ ನಂತರ ಆರೋಗ್ಯ ಸುಧಾರಿಸಿ, ಚೇತರಿಕೆ ಕಂಡು ಬಂದಿದೆ. ಸಂಜೆಯ ವೇಳೆಗೆ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡಿದ್ದಾರೆ ಎಂದು ಸುರೇಶ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ, ಕೆಪಿಸಿಸಿ ಸದಸ್ಯ ವಿ.ಯೋಗೀಶ್ ಇದ್ದರು.
