ತುಮಕೂರು: 14 ಕೋಟಿ ರೂ. ವೆಚ್ಚದಲ್ಲಿ 1.1 ಕಿಮೀ ರಸ್ತೆ ಅಭಿವೃದ್ಧಿ
Tumkur news
ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 3ನೇ ವಾರ್ಡ್ ಶಿರಾಗೇಟ್ ಪ್ರದೇಶದಲ್ಲಿ 80 ಅಡಿ ಮುಖ್ಯ ರಸ್ತೆ ಹಾಗೂ ಸರ್ವೀಸ್ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಯನ್ನು 14 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸುಮಾರು 1.1 ಕಿಲೋ ಮೀಟರ್ ಉದ್ದದ ಈ ರಸ್ತೆ ಕಾಮಗಾರಿಯಡಿ ಎಲ್ಲಾ ಸಾರ್ವಜನಿಕ ಉಪಯುಕ್ತತೆಯ ಹಾಗೂ ಗುಣಮಟ್ಟದ ಡಾಂಬರು ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ, ರಸ್ತೆ ಬದಿಗಳಲ್ಲಿ ಮುಚ್ಚಳದ ಸ್ಲ್ಯಾಬ್ಗಳೊಂದಿಗೆ ಆಧುನಿಕ ಚರಂಡಿಗಳು, ಪಾದಚಾರಿಗಳ ಸುರಕ್ಷಿತ ಸಂಚಾರಕ್ಕಾಗಿ ಪೇವರ್ ಅಳವಡಿಸಿದ ಕಾಲುದಾರಿಗಳನ್ನು ನಿರ್ಮಿಸಲಾಗುತ್ತಿದೆ. ನಗರದ ಪ್ರಮುಖ ಪ್ರವೇಶ ಮಾರ್ಗಗಳಲ್ಲಿ ಒಂದಾದ ಶಿರಾಗೇಟ್ ರಸ್ತೆಯನ್ನು ಸುಗಮ ಹಾಗೂ ಸುಸಜ್ಜಿತ ನಗರ ಮೂಲಸೌಕರ್ಯವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕಾಮಗಾರಿಗೆ ಈಗಾಗಲೇ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ಹಾಗೂ ಟೆಂಡರ್ ನಿಯಮಾವಳಿಗಳಿಗೆ ಅನುಸಾರವಾಗಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.
