ಸಮಾನ ಸಮಾಜ ನಿರ್ಮಾಣಕ್ಕೆ ಶ್ರೀರಾಮಾನುಜಾಚಾರ್ಯರ ಕೊಡುಗೆ ಅಪಾರ: ಹಂಪಿ ವಿವಿ ಕುಲಪತಿ ಡಾ. ಎಂ. ಪರಮಶಿವಮೂರ್ತಿ
Tumkurnews.in
ತುಮಕೂರು: ಶ್ರೀರಾಮಾನುಜಾಚಾರ್ಯರು ಸಮಾಜದಲ್ಲಿ ಜಾತಿ ತಾರತಮ್ಯ ಮತ್ತು ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ್ ಸಮಾಜ ಸುಧಾರಕರಾಗಿದ್ದರು. ಸಮಾಜದ ಎಲ್ಲ ವರ್ಗದ ಜನರಿಗೂ ದೇವಾಲಯ ಪ್ರವೇಶದ ಅವಕಾಶ ಕಲ್ಪಿಸುವ ಮೂಲಕ ಸಮಾನ ಸಮಾಜದ ಕನಸು ಕಂಡಿದ್ದರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಪರಮಶಿವಮೂರ್ತಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು, ಶಾಸ್ತ್ರೀಯ ಕನ್ನಡ ವೇದಿಕೆ ಬೆಂಗಳೂರು ಹಾಗೂ ಜಿಲ್ಲಾ ಶ್ರೀವೈಷ್ಣವ ಮಹಾಸಭಾ ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀರಾಮಾನುಜಾಚಾರ್ಯರನ್ನು ಕೇವಲ ಧಾರ್ಮಿಕ ವ್ಯಕ್ತಿಯಾಗಿ ನೋಡದೆ, ಸಮಾಜ ಸುಧಾರಕರಾಗಿಯೂ ಅಧ್ಯಯನ ಮಾಡಬೇಕು. ಸಮಾಜದ ಎಲ್ಲ ವರ್ಗದ ಜನರಿಗೂ ಧಾರ್ಮಿಕ ಮತ್ತು ಸಾಮಾಜಿಕ ಸಮಾನತೆ ದೊರೆಯಬೇಕು ಎಂಬುದು ಅವರ ಆಶಯವಾಗಿತ್ತು ಎಂದು ತಿಳಿಸಿದರು.
ಸಮಾಜದ ಎಲ್ಲ ವರ್ಗದವರಿಗೂ ದೇವಾಲಯ ಪ್ರವೇಶ
ಶ್ರೀರಾಮಾನುಜಾಚಾರ್ಯರು ಜಾತಿ ಭೇದವಿಲ್ಲದೆ ಎಲ್ಲ ಸಮುದಾಯದ ಜನರಿಗೂ ದಾಸದೀಕ್ಷೆ ನೀಡುವ ಮೂಲಕ ವೈಷ್ಣವ ಸಂಪ್ರದಾಯದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದರು.
ದೇವಾಲಯ ಪ್ರವೇಶವು ಕೆಲವೇ ವರ್ಗಗಳಿಗೆ ಸೀಮಿತವಾಗಿದ್ದ ಕಾಲದಲ್ಲಿ ಸಾಮಾನ್ಯ ಜನರಿಗೂ ದೇವಾಲಯದ ಒಳಗೆ ಪ್ರವೇಶಿಸಿ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟಿದ್ದರು. ಇದರಿಂದ ಅವರ ಸಾಮಾಜಿಕ ಕಾಳಜಿ ಮತ್ತು ಸಮಾನತೆಯ ಚಿಂತನೆ ತಿಳಿಯುತ್ತದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಶ್ರೀರಾಮಾನುಜಾಚಾರ್ಯರ ಕೊಡುಗೆ
ಶ್ರೀರಾಮಾನುಜಾಚಾರ್ಯರು ಕರ್ನಾಟಕದಲ್ಲಿ ಸುಮಾರು 26 ವರ್ಷಗಳ ಕಾಲ ನೆಲೆಸಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ನಡೆಸಿದ್ದರು.
ಮೇಲುಕೋಟೆ, ತೊಂಡನೂರು ಮತ್ತು ಸಾಲಿಗ್ರಾಮ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅವರು ಸಮಾನತೆಯ ಸಂದೇಶ ಸಾರಿದ್ದರು. ಪಂಚಮರು ಸೇರಿದಂತೆ ಸಮಾಜದ ಹಿಂದುಳಿದ ವರ್ಗಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದರು.
ಅವರ ಸಾಮಾಜಿಕ ಕಾರ್ಯಗಳ ಕುರಿತು ಕರ್ನಾಟಕದಲ್ಲಿ ದೊರೆತಿರುವ ಸುಮಾರು 59 ಶಾಸನಗಳು ಹಲವು ಮಹತ್ವದ ಮಾಹಿತಿಗಳನ್ನು ನೀಡುತ್ತವೆ ಎಂದು ಡಾ. ಪರಮಶಿವಮೂರ್ತಿ ತಿಳಿಸಿದರು.
ಶ್ರೀರಾಮಾನುಜಾಚಾರ್ಯರ ಜೀವನ ಮತ್ತು ಸೇವೆ
ಹಿರಿಯ ವಿದ್ವಾಂಸರಾದ ಡಾ. ನಾಗೀತಾಚಾರ್ಯ ಮಾತನಾಡಿ, ಶಾಸ್ತ್ರೀಯ ಕನ್ನಡ ವೇದಿಕೆಯ ಮೂರು ವರ್ಷಗಳ ಕನಸು ಇಂದು ನನಸಾಗಿದೆ. 2017ರಿಂದ ನಮ್ಮ ಸಂಸ್ಥೆಯು ಶ್ರೀರಾಮಾನುಜಾಚಾರ್ಯರ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಹೇಳಿದರು.
ಶ್ರೀರಂಗಂ ದೇವಾಲಯದ ಆವರಣದಲ್ಲಿ ಸುಮಾರು 18 ಸಮುದಾಯಗಳ ಜನರು ತಮ್ಮ ಕುಲಕಸುಬುಗಳನ್ನು ಮಾಡಿಕೊಂಡು ದೇವಾಲಯದ ಆವರಣದಲ್ಲಿ ಇರಲು ರಾಮಾನುಜಾಚಾರ್ಯರು ಅವಕಾಶ ಕಲ್ಪಿಸಿದ್ದರು. ರಾಮನಾಥಪುರದ ಮೂಲಕ ಕರ್ನಾಟಕಕ್ಕೆ ಆಗಮಿಸಿ ತೊಂಡನೂರು, ಸಾಲಿಗ್ರಾಮ ಮತ್ತು ಮೇಲುಕೋಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ನಡೆಸಿದ್ದರು ಎಂದು ವಿವರಿಸಿದರು.
ಸಂಶೋಧಕ ಹಾಗೂ ಆಯುರ್ವೇದ ವೈದ್ಯ ಡಾ. ನಂಜುಂಡಸ್ವಾಮಿ ಮಾತನಾಡಿ, ಭಾರತೀಯ ಧಾರ್ಮಿಕ ಇತಿಹಾಸದಲ್ಲಿ ಶ್ರೀರಾಮಾನುಜಾಚಾರ್ಯರು ಮಹತ್ವದ ಸ್ಥಾನ ಪಡೆದಿದ್ದಾರೆ. ಅವರು ಸ್ಥಾಪಿಸಿದ ಶ್ರೀವೈಷ್ಣವ ಸಂಪ್ರದಾಯ ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಜೀವಂತವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ನಿಕಟಪೂರ್ವ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ, ಕರ್ನಾಟಕದಲ್ಲಿ ಶ್ರೀರಾಮಾನುಜಾಚಾರ್ಯರ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕು. ಈ ವಿಚಾರ ಸಂಕಿರಣದಲ್ಲಿ ಮಂಡನೆಯಾಗುವ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದರೆ ಅವರ ಜೀವನ ಮತ್ತು ಸಮಾಜ ಸುಧಾರಣಾ ಕಾರ್ಯಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿಸಲು ಸಾಧ್ಯವಾಗುತ್ತದೆ ಎಂದರು.
ಲೇಖಕಿ ಹಾಗೂ ವೈದ್ಯೆ ವಿಜಯಲಕ್ಷ್ಮಿ ಬಾಳೇಕುಂದ್ರಿ ಸೇರಿದಂತೆ ಹಲವು ಗಣ್ಯರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶ್ರೀವೈಷ್ಣವ ಮಹಾಸಭಾದ ಅಧ್ಯಕ್ಷ ಲಕ್ಷ್ಮೀಕಾಂತ್ ಟಿ.ಎಚ್., ಗೌರವಾಧ್ಯಕ್ಷ ರಘು ಎಸ್.ಎನ್., ಎನ್. ರಂಗಾಚಾರ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಶ್ರೀರಾಮಾನುಜಾಚಾರ್ಯರ ಸಾಮಾಜಿಕ ಸುಧಾರಣೆ, ಶಾಸನಗಳಲ್ಲಿನ ಅವರ ಕೊಡುಗೆ, ದೇವಾಲಯ ಶಿಲ್ಪಕಲೆ ಹಾಗೂ ಹರಿದಾಸ ಸಾಹಿತ್ಯದಲ್ಲಿ ಅವರ ಸ್ಥಾನಮಾನ ಕುರಿತು ವಿವಿಧ ವಿದ್ವಾಂಸರು ವಿಷಯ ಮಂಡಿಸಿದರು.
