ಬೆಂಗಳೂರು ಉಪ ನಗರ ಯೋಜನೆ ಕಾರಿಡಾರ್ 2 ಮತ್ತು ನಾಲ್ಕು 2026ಕ್ಕೆ ಪೂರ್ಣಗೊಳಿಸುವ ಗುರಿ
ಬೆಂಗಳೂರು: ಉಪ ನಗರ ರೈಲು ಯೋಜನೆ ಕುರಿತಾಗಿ ಇಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಸೋಮಣ್ಣ ಅವರು ಬೆಂಗಳೂರಿನ ವಿಧಾನ ಸೌಧದ ಸಭಾ ಕೊಠಡಿಯಲ್ಲಿ ಎಂ.ಬಿ. ಪಾಟೀಲ್, ಬೃಹತ್ ಮತ್ತು ಮದ್ಯಮ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವರು ಕರ್ನಾಟಕ ಸರ್ಕಾರ ಮತ್ತು ರೇಲ್ವೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ವಿ. ಸೋಮಣ್ಣ, ಕೇಂದ್ರ ಸಚಿವರು ಮತ್ತು ಶ್ರೀ ಎಂ.ಬಿ. ಪಾಟೀಲ್, ಜಂಟಿಯಾಗಿ ಮಾತನಾಡಿ, ಬೆಂಗಳೂರು ಉಪ ನಗರ ರೈಲು ಯೋಜನೆಯ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಉಪ ನಗರ ಯೋಜನೆ ಕಾರಿಡಾರ-2 ಮತ್ತು 4ನ್ನು 2026ಕ್ಕೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದರು.
ಚಿಕ್ಕಬಾಣಾವರ -ಬೈಯಪ್ಪನಹಳ್ಳಿ (ಕಾರಿಡಾರ್-2, 25 ಕಿ.ಮಿ.) ಮತ್ತು ಹೀಲಲಗಿ –ರಾಜಾನುಕುಂಟೆ (ಕಾರಿಡಾರ್-4, 46.88ಕಿ.ಮಿ.) ಉಪನಗರ ರೇಲ್ವೆ ಯೋಜನೆಗಳನ್ನು 2026 ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಿ ನಾಡಿಗೆ ಸಮರ್ಪಿಸಲಾಗುವುದು ಎಂದು ಕೇಂದ್ರ ರೇಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಹಾಗೂ ಮೂಲಸೌಕರ್ಯ ಅಭಿವೃದ್ದಿ ಎಂ.ಬಿ.ಪಾಟೀಲ್ ತಿಳಿಸಿದರು.
ಬೆಂಗಳೂರು ಉಪ ನಗರ ರೈಲು ಯೋಜನೆಯ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಉಪ ನಗರ ಯೋಜನೆ ಕಾರಿಡಾರ 2 ಮತ್ತು 4ನ್ನು 2026ಕ್ಕೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದರು. ಕೆಲವೊಂದು ಕಡೆ ಭೂಸ್ವಾದೀನದ ಸಮಸ್ಯೆಯಿದ್ದು, ಅತಿ ಶೀಘ್ರದಲ್ಲಿ ಭೂ ಸ್ವಾದೀನ ಪ್ರಕ್ರಿಯೆ ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಕೇಂದ್ರ ಸಚಿವ ಸೋಮಣ್ಣ ತಿಳಿಸಿದ್ದಾರೆ.
ಒಟ್ಟು ನಾಲ್ಕು ಕಾರಿಡಾರ್ ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಹಿಂದೆ ಶಂಕುಸ್ಥಾಪನೆ ನೇರವೇರಿಸಿದ್ದಾರೆ. ಈಗ ಕಾಮಗಾರಿಗೆ ಚುರುಕು ಮುಟ್ಟಿಸಲು ಕ್ರಮ ತೆಗೆದುಕೊಂಡಿದ್ದು, ನಿಗದಿತ ಅವಧಿಯೊಳಗೆ ಈ ಎರಡು ಕಾರಿಡಾರ್ ಯೋಜನೆಗಳನ್ನು ಉದ್ಘಾಟಿಸಲಾಗುವುದು. ಇದರ ನಂತರ ಇತರ ಎರಡು ಕಾರಿಡಾರ್ ಯೋಜನೆಗಳ ಜಾರಿ ಸಂಬಂಧ ಚರ್ಚಿಸಲಾಗುದುವುದು ಎಂದು ತಿಳಿಸಿದರು.
ಈ ಯೋಜನೆ ತ್ವರಿತವಾಗಿ ಕಾರ್ಯರೂಪಕ್ಕೆ ಬರಲು ಬೆಂಗಳೂರು ಮೆಟ್ರೋ ರೈಲು, ಉಪ ನಗರ ರೈಲು ಯೋಜನೆ ಮತ್ತು ರೇಲ್ವೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡುವಂತೆ ಮತ್ತು ಬಿ.ಬಿ.ಎಂ,ಪಿ. ಅಧಿಕಾರಿಗಳನ್ನೊಳಗೊಂಡು ಸಮನ್ವಯ ಸಭೆ ನಡೆಸುವಂತೆ ಕೇಂದ್ರ ಸಚಿವ ಸೋಮಣ್ಣನವರು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ ಇದಕ್ಕೆ ದನಿಗೊಡಿಸಿ ಈ ಯೋಜನೆ ಶೀಘ್ರ ಕಾರ್ಯರೂಪಕ್ಕೆ ತರಲು ಅಧಿಕಾರಿಗಳು ಪರಸ್ಪರ ಸಮನ್ವಯ ದಿಂದ ಕರ್ತವ್ಯ ನಿರ್ವಹಿಸುವುದು ಅತಿ ಅವಶ್ಯಕವೆಂದು ಅಭಿಪ್ರಾಯ ಪಟ್ಟಿದ್ದಾರೆ.
ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರೇಲ್ವೆ ಭೋಗಿಗಳನ್ನು ಸರಬರಾಜು ಮಾಡಲು ಕೆ-ರೈಡ್ ಟೆಂಡರ್ ಕರೆದಿದ್ದು, ಯಾವ ಸಂಸ್ಥೆಯು ಇದರಲ್ಲಿ ಭಾಗವಹಿಸಿಲ್ಲ ಎಂಬ ಪ್ರಸ್ತಾವನೆಗೆ ಆದಷ್ಟು ಬೇಗನೆ ದೆಹಲಿಯಲ್ಲಿ ಈ ಬಗ್ಗೆ ಸಭೆ ಏರ್ಪಡಿಸುವುದಾಗಿ ಕೇಂದ್ರ ಸಚಿವ ಸೋಮಣ್ಣ ತಿಳಿಸಿದ್ದಾರೆ.
2026ರ ಅಂತ್ಯದಲ್ಲಿ ಎರಡೂ ಕಾರಿಡಾರ್ ಕಾಮಗಾರಿ ಮುಗಿಯಲು ಯೋಜನೆ ರೂಪಿಸಿದ್ದು, ಅದಕ್ಕಿಂತ ಕನಿಷ್ಟ ಆರು ತಿಂಗಳು ಮೊದಲು ರೈಲ್ವೆ ಭೋಗಿಗಳ ಸರಬರಾಜು ಆಗಬೇಕು ಎಂಬ ಅಧಿಕಾರಿಗಳ ಬೇಡಿಕೆಗೆ ತಕ್ಷಣ ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಕೇಂದ್ರ ಸಚಿವ ಸೋಮಣ್ಣನವರು ತಿಳಿಸಿದ್ದಾರೆ.
ಬೆಂಗಳೂರಿನ ನೆರೆಹೊರೆಯ ನಗರ, ಪಟ್ಟಣಗಳಿಗೆ ಸಂಪರ್ಕ ಕಲ್ಪಿಸಲು ಉಪನಗರ ರೇಲ್ವೆ ಯೋಜನೆಯ ವಿಸ್ತರಣೆ ಅಗತ್ಯ ಇದೆ. ಬೆಂಗಳೂರಿನಿಂದ ಸಮೀಪದ ತುಮಕೂರು, ಮೈಸೂರು, ಮಾಗಡಿ, ಗೌರಿಬಿದನೂರು, ಕೋಲಾರ ನಗರಗಳಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಚರ್ಚೆಯಲ್ಲಿದೆ. ಈ ಬಗ್ಗೆ ಮುಂದಿನ ದಿವಸಗಳಲ್ಲಿ ಸಭೆ ಮಾಡಿ ಕ್ರಮ ವಹಿಸಲಾಗುವುದು ಎಂದು ಕೇಂದ್ರ ಸಚಿವ ಸೋಮಣ್ಣ ತಿಳಿಸಿದ್ದಾರೆ. ಸಚಿವ ಎಂ.ಬಿ. ಪಾಟೀಲ್ ಅವರ ಮನವಿಗೆ ಸಕರಾತ್ಮಕವಾಗಿ ಕೇಂದ್ರ ಸಚಿವರು ಸ್ಪಂದಿಸಿದ್ದಾರೆ.
ಬೆಂಗಳೂರು-ಯಲಹಂಕ ದೇವನಹಳ್ಳಿ ನಡುವೆ ಸಂಪರ್ಕ ಕಲ್ಪಿಸುವ ಕಾರಿಡಾರ್-1 ಉಪ ನಗರ ರೇಲ್ವೆ ಯೋಜನೆಯನ್ನು ಚಿಕ್ಕಬಳ್ಳಾಪುರ ಮೂಲಕ ಕೋಲಾರಕ್ಕೆ ಸಂಪರ್ಕಿಸುವ ಬದಲು ದೇವನಹಳ್ಳಿಯಿಂದಲೇ ನೇರವಾಗಿ ಕೋಲಾರಕ್ಕೆ ಸಂಪರ್ಕ ಕಲ್ಪಿಸುವ ಸಾದ್ಯತೆಯ ಬಗೆ ಸಭೆಯಲ್ಲಿ ಚರ್ಚಿಸಲಾಯಿತು.
ವರ್ತುಲ ರೇಲ್ವೆಗೆ ಸಂಪರ್ಕ: ಉಪ ನಗರ ರೇಲ್ವೆ ಯೋಜನೆಯನ್ನು ಬೆಂಗಳೂರು ಸುತ್ತಲಿನ ವರ್ತುಲ ರೇಲ್ವೆ ಹಳಿಗೆ ಸಂಪರ್ಕ ಕಲ್ಪಿಸುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಯಿತು. ಇದೊಂದು ಒಳ್ಳೆ ಪರಿಕಲ್ಪನೆ ಜನರಿಗೆ ಹೆಚ್ಚು ಅನುಕೂಲ ಆಗಲಿದೆಯೆಂದು ಸಚಿವರು ಅಭಿಪ್ರಾಯ ಪಟ್ಟರು.
ಅಂದಾಜು ಸುಮಾರು 80,000 ಕೋಟಿ ವೆಚ್ಚದ 281ಕಿ.ಮಿ. ವರ್ತುಲ ರೇಲ್ವೆ ಯೋಜನೆಗೆ ರೇಲ್ವೆ ಮಂಡಳಿ ಒಪ್ಪಿಗೆ ನೀಡಿದ್ದು, ಉಪನಗರ ರೈಲುಗಳನ್ನು ಇದರ ಜೊತೆ ಸಂಪರ್ಕ ಮಾಡುವುದು ಹೆಚ್ಚು ಸೂಕ್ತವೆಂದು ಸಭೆಯಲ್ಲಿ ಅಭಿಪ್ರಾಯ ಪಡಲಾಗಿದೆ.
ನೈರುತ್ಯ ರೇಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ನಮ್ಮ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ, ಕೆ-ರೈಡ ವ್ಯವಸ್ಥಾಪಕ ನಿರ್ದೇಶಕಿ ಡಾ. ಎನ್. ಮಂಜುಳಾ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರು.
ರಾಜ್ಯದ ರೇಲ್ವೆ ಯೋಜನೆಗಳ ಬಗ್ಗೆ ಸಭೆ:
ಬೆಂಗಳೂರು – ಮಂಗಳೂರು ಹಾಗೂ ಹುಬ್ಬಳ್ಳಿ –ಅಂಕೋಲಾ ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣ, ಚಿತ್ರದುರ್ಗ -ಹೊಸಪೇಟೆ –ಆಲಮಟ್ಟಿ ನಡುವ ಹೊಸ ರೈಲು ಮಾರ್ಗ, ಬೆಂಗಳೂರು –ಮಂಗಳೂರು ಜೋಡಿ ರೈಲು ಮಾರ್ಗ, ಸಕಲೇಶಪುರ -ಸುಬ್ರಹ್ಮಣ್ಯ ಸುರಂಗ ಮಾರ್ಗ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ, ಈ ಬಗ್ಗೆ ಅಧ್ಯಯನ ಮಾಡಲಾಗುವುದು ಎಂದು ಕೇಂದ್ರ ಸಚಿವ ಸೋಮಣ್ಣ ತಿಳಿಸಿದರು.
+ There are no comments
Add yours