ಜಾತ್ರೆಗಳಲ್ಲಿ ಪ್ರಸಾದ ವಿತರಣೆ: ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚನೆ: ಶುಭ ಕಲ್ಯಾಣ್
Tumkurnews
ತುಮಕೂರು: ಜಿಲ್ಲೆಯಲ್ಲಿ ಜಾತ್ರೆ ಮತ್ತು ಊರ ಹಬ್ಬಗಳಲ್ಲಿ ಆಹಾರ, ಪ್ರಸಾದ, ಮಜ್ಜಿಗೆ ವಿತರಣೆಯಿಂದ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಜಾತ್ರೆ ಮತ್ತು ಊರ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಸ್ವಚ್ಛತೆ ಮತ್ತು ಆಹಾರ, ಪ್ರಸಾದ ವಿತರಣೆ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಾಲ್ಲೂಕು ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಪೂರ್ವಾನುಮತಿ ಕಡ್ಡಾಯ:
ಜಾತ್ರೆ ಮತ್ತು ಊರ ಹಬ್ಬಗಳ ಆಯೋಜಕರು ಸಾರ್ವಜನಿಕರಿಗೆ ಆಹಾರ ಮತ್ತು ಪ್ರಸಾದ ವಿತರಣೆ ಮಾಡುವ ಮುನ್ನ ಆಯಾ ತಾಲ್ಲೂಕಿನ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಪೊಲೀಸ್ ವೃತ್ತ ನಿರೀಕ್ಷಕ, ತಾಲ್ಲೂಕು ಆರೋಗ್ಯಾಧಿಕಾರಿ, ಆಹಾರ ಸುರಕ್ಷತಾಧಿಕಾರಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳನ್ನು ಒಳಗೊಂಡಂತೆ ರಚಿಸಲಾದ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.
ಆಯೋಜಕರು ಹಬ್ಬ, ಜಾತ್ರೆ ಆಚರಣೆಯನ್ನು ಸೂಕ್ತ ರೀತಿಯಲ್ಲಿ ನಡೆಸಲು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಆಯಾ ತಾಲ್ಲೂಕು ಪಂಚಾಯಿತಿಗೆ ಎರಡು ವಾರಗಳ ಮುಂಚಿತವಾಗಿ ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು.
ಆಯಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಿಸಿದ ಗ್ರಾಮ ಪಂಚಾಯಿತಿ, ಆರೋಗ್ಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಪೊಲೀಸ್, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗಳಿಂದ ಆಹಾರ ಮತ್ತು ಕುಡಿಯುವ ನೀರಿನ ಗುಣಮಟ್ಟ, ಶುಚಿತ್ವ, ವೈದ್ಯಕೀಯ ಸಿದ್ಧತೆ ಹಾಗೂ ಕಾನೂನು ಸುವ್ಯವಸ್ಥೆ ಬಗ್ಗೆ ಮೂರು ದಿನದೊಳಗಾಗಿ ನಿರಾಕ್ಷೇಪಣಾ ವರದಿ ಪಡೆದು ಸಮಿತಿಗೆ ಸಲ್ಲಿಸಬೇಕು.
ತುಮಕೂರು: ಒಂದೇ ಗ್ರಾಮದ ಮೂವರು ಮಹಿಳೆಯರ ಸಾವು! ಜಿಲ್ಲಾಧಿಕಾರಿ ಹೇಳಿದ್ದೇನು?
ಜಾತ್ರೆ ನಡೆಯುವ ಗ್ರಾಮಗಳಲ್ಲಿರುವ ಕೊಳವೆ ಬಾವಿ, ಪೈಪ್ ಲೈನ್, ಓವರ್ ಹೆಡ್ ಟ್ಯಾಂಕ್, ಆರ್‌ಓ ಪ್ಲಾಂಟ್‌ಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಕುಡಿಯುವ ನೀರನ್ನು ಪಡೆದ ನೀರಿನ ಮೂಲ ಮತ್ತು ನೀರಿನ ಗುಣಮಟ್ಟ, ನೀರನ್ನು ಸಾಗಿಸಲು ಉಪಯೋಗಿಸುವ ಟ್ಯಾಂಕರ್ ಮತ್ತು ಶೇಖರಿಸುವ ಟ್ಯಾಂಕ್‌ಗಳ ಶುಚಿತ್ವದ ಬಗ್ಗೆ ಪರಿಶೀಲನೆ ನಡೆಸಬೇಕು.
ಊರ ಹಬ್ಬ, ಜಾತ್ರೆಗಳ ಆಚರಣೆಗೂ ಮುನ್ನ ಜಾತ್ರೆ, ಹಬ್ಬದ ಆಯೋಜಕರು, ಗ್ರಾಮಸ್ಥರಿಗೆ ಕುಡಿಯುವ ನೀರಿನ ನಿರ್ವಹಣೆ, ಆಹಾರ, ಪ್ರಸಾದ ತಯಾರಿಸುವ ಸ್ಥಳದ ಶುಚಿತ್ವ, ತ್ಯಾಜ್ಯ ವಿಸರ್ಜನೆ, ಶೌಚಾಲಯ ಬಳಕೆಗೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸಬೇಕು.
ಮಜ್ಜಿಗೆ, ಮೊಸರು ಮತ್ತಿತರ ಬೇಯಿಸದ ಆಹಾರಗಳಿಂದ ವಾಂತಿ-ಭೇದಿಯಾಗುವ ಸಾಧ್ಯತೆಯಿದ್ದು, ಹೆಚ್ಚು ಜನ ಸಮೂಹದ ಪ್ರದೇಶದಲ್ಲಿ ಮಜ್ಜಿಗೆ, ಮೊಸರಿನಂತಹ ಬೇಯಿಸದ ಆಹಾರ, ಪ್ರಸಾದ ವಿತರಣೆ ವೇಳೆ ಆಹಾರ ಸುರಕ್ಷತಾಧಿಕಾರಿಗಳಿಂದ ಪರೀಕ್ಷೆಗೊಳಪಡಿಸಬೇಕು. ಕುಡಿಯುವ ನೀರು, ಆಹಾರ, ಪ್ರಸಾದ ವಿತರಿಸುವವರ ವೈಯಕ್ತಿಕ ಸ್ವಚ್ಛತೆ ಅಗತ್ಯ. ತ್ಯಾಜ್ಯ ವಿಸರ್ಜನೆ ಸ್ಥಳಗಳು ಮತ್ತು ಶೌಚಾಲಯಗಳಿಂದ ಕುಡಿಯುವ ನೀರು, ಆಹಾರ, ಪ್ರಸಾದ ವಿತರಿಸುವ ಸ್ಥಳಗಳ ಅಂತರವನ್ನು ಕಾಪಾಡಬೇಕು.
ಊರ ಹಬ್ಬ, ಜಾತ್ರೆಗಳ ಅವಧಿಯಲ್ಲಿ ಸಂಬಂಧಪಟ್ಟ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ನೌಕರರು ಗ್ರಾಮಸ್ಥರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಗರ್ಭಿಣಿ, ಬಾಣಂತಿ, ರೋಗಿಗಳು ಕಾಯಿಸಿ ಆರಿಸಿದ ನೀರನ್ನು ಸೇವಿಸಬೇಕೆಂದು ಪ್ರಚುರಪಡಿಸುವುದರ ಜೊತೆಗೆ ಗ್ರಾಮಸ್ಥರ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೆ ಕೂಡಲೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮತ್ತು ಮೇಲಾಧಿಕಾರಿಗಳಿಗೆ ವರದಿ ಮಾಡಬೇಕು.
ಜಿಲ್ಲೆಯ ಜನತೆಯ ಧಾರ್ಮಿಕ ಭಾವನೆಗಳಿಗೆ ಯಾವುದೇ ಧಕ್ಕೆ ಉಂಟಾಗದಂತೆ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಯಾವುದೇ ಅಧಿಕಾರಿ ನಿರ್ಲಕ್ಷ್ಯತೆ ತೋರಿದಲ್ಲಿ ಅಂತಹ ಅಧಿಕಾರಿ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ಸೂಚನೆ ನೀಡಿದ್ದಾರೆ.
+ There are no comments
Add yours