ಎಕ್ಸ್’ಪ್ರೆಸ್ ಕೆನಾಲ್ ಮೂಲಕ ಮಾಗಡಿಗೆ ಹೇಮಾವತಿ ನೀರು: ವಿವಿಧ ಸಂಘಟನೆಗಳಿಂದ ಹೋರಾಟಕ್ಕೆ ಬೆಂಬಲ
Tumkurnews
ತುಮಕೂರು: ಕುಣಿಗಲ್ ಮೂಲಕ ಮಾಗಡಿ ತಾಲೂಕಿಗೆ ಹೇಮಾವತಿ ನಾಲೆಯಿಂದ ಎಕ್ಸ್’ಪ್ರೆಸ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೊಗುವ ಕಾಮಗಾರಿಗೆ ಜಿಲ್ಲೆಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಇಂದು ಜಿಲ್ಲೆಯ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಮುಖ್ಯಸ್ಥರು ಸಭೆ ಸೇರಿ ಮೇ 16 ರಂದು ನಡೆಯುವ ಹೇಮಾವತಿ ಹೋರಾಟ ಸಮಿತಿಯ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.
ನಗರದ ಖಾಸಗಿ ಹೊಟೇಲ್‍ನಲ್ಲಿ ಸಭೆ ಸೇರಿದ್ದ ಕನ್ನಡಸೇನೆಯ ಧನಿಯಕುಮಾರ್, ಕನ್ನಡ ಮತ್ತು ಸಂಸ್ಕೃತಿ ವೇದಿಕೆಯ ಕನ್ನಡ ಪ್ರಕಾಶ್ಮ, ತುಮಕೂರು ಜಿಲ್ಲಾ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವೀರೇಂದ್ರ ಪ್ರಸಾದ್, ಭಗತ್ ಕ್ರಾಂತಿ ಸೇನೆಯ ಜಿಲ್ಲಾಧ್ಯಕ್ಷ ಆರಾಧ್ಯ, ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಸವರಾಜು, ಅಖಿಲ ಕರ್ನಾಟಕ ಕಾರ್ಮಿಕರ ಪ್ರಜಾವೇದಿಕೆಯ ರಾಜ್ಯ ಅಧ್ಯಕ್ಷ ಸತೀಶ್, ಕರ್ನಾಟಕ ರಕ್ಷಣಾ ವೇದಿಕೆಯ ಅರುಣ್‍ಕುಮಾರ್, ಮಾಜಿ ಕಾರ್ಪೋರೇಟರ್ ಬಾಲಕೃಷ್ಣ ಅವರುಗಳು, ಮೇ 16 ರಂದು ಜಿಲ್ಲೆಯ ಜನಪ್ರತಿನಿಧಿಗಳು, ಮಠಾಧೀಶರು, ರೈತ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ಹೋರಾಟದಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಲು ತೀರ್ಮಾನ ಕೈಗೊಂಡರು.
ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಕುಮಾರ್ ಮಾತನಾಡಿ, ಹಲವಾರು ಮಹನೀಯರು ಹೋರಾಟದ ಫಲವಾಗಿ ಜಿಲ್ಲೆಗೆ ಹೇಮಾವತಿ ನೀರು ಹರಿದಿದೆ. ಜಿಲ್ಲೆಗೆ ನಿಗದಿಯಾಗಿರುವ 24.08 ಟಿ.ಎಂ.ಸಿ ನೀರು ಯೋಜನೆ ಪ್ರಾರಂಭವಾದ ಅಂದಿನಿಂದ ಇಂದಿನವರೆಗೆ ಪೂರ್ಣ ಪ್ರಮಾಣದಲ್ಲಿ ಹರಿದಿಲ್ಲ. ಹೀಗಿರುವಾಗ ನಾಲೆಯ ಮಧ್ಯಭಾಗದಿಂದ ಕೊಳವೆ ಮೂಲಕ ನಮ್ಮ ಜಿಲ್ಲೆಯ ನೀರನ್ನು ಬೇರೆ ಜಿಲ್ಲೆಗೆ ತೆಗೆದುಕೊಂಡು ಹೋಗಲು ಕಾಮಗಾರಿ ನಡೆಸುತ್ತಿರುವುದು ಖಂಡನೀಯ. ಇದರಿಂದ ಇಡೀ ಜಿಲ್ಲೆಯ ಕುಡಿಯುವ ನೀರಿನ ಮೇಲೆ ದೊಡ್ಡ ದುಷ್ಪರಿಣಾಮ ಬೀರಲಿದೆ. ಹಾಗಾಗಿ ಯೋಜನೆಯನ್ನು ಸರಕಾರ ಕೂಡಲೇ ರದ್ದು ಪಡಿಸಿ, ಹಾಲಿ ಇರುವ ಓಪನ್ ಕೆನಾಲ್ ಮೂಲಕವೇ ಕುಣಿಗಲ್ ತಾಲೂಕಿಗೆ ನೀರು ತೆಗೆದುಕೊಂಡು ಹೋಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
+ There are no comments
Add yours