ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, PDOಗಳಿಗೆ ಒಂದು ದಿನದ ವಿಶೇಷ ಕಾರ್ಯಾಗಾರ: ಪೂರ್ಣ ವರದಿ

1 min read

ಜನರ ನಿರೀಕ್ಷೆಗನುಗುಣವಾಗಿ ಪಂಚಾಯತಿಗಳಿಂದ ಉತ್ತಮ ಸೇವೆ ಒದಗಿಸಲು ಕರೆ

Tumakurunews
ತುಮಕೂರು: ಎಲ್ಲಾ ಗ್ರಾಮ ಪಂಚಾಯತಿಗಳು ಜನರ ನಿರೀಕ್ಷೆಗನುಗುಣವಾಗಿ ಉತ್ತಮ ಸೇವೆ ಒದಗಿಸಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ:ಜಿ ಪರಮೇಶ್ವರ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಶಿಕ್ಷಣ ಭೀಷ್ಮ ಹೆಚ್.ಎಂ. ಗಂಗಾಧರಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ಗುರುವಾರ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಗಳು ಅಭಿವೃದ್ಧಿ ಹಾದಿಯಲ್ಲಿ ಸಾಗಬೇಕಾದರೆ ಆಯಾ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಹಾಗೂ ಪಿಡಿಓಗಳು ಪಾರದರ್ಶಕವಾಗಿ ಸಾಮರಸ್ಯದಿಂದ ತಮ್ಮ ವ್ಯಾಪ್ತಿಯ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದರು.

ಸೆ.24ರಂದು ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ ಆದೇಶ
ಜಿಲ್ಲೆಯ 330 ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಓಗಳಿಗಾಗಿ ಕಾರ್ಯಾಗಾರ ಹಮ್ಮಿಕೊಂಡಿರುವುದು ರಾಜ್ಯದಲ್ಲಿ ಇದೇ ಮೊದಲು. ಗ್ರಾಮ ಪಂಚಾಯತಿ ಸೇವೆಗಳ ಪ್ರಾಮುಖ್ಯತೆಯ ಬಗ್ಗೆ ಅರ್ಥ ಮಾಡಿಸುವ ಪ್ರಯತ್ನವನ್ನು ಕಾರ್ಯಾಗಾರದಲ್ಲಿ ಮಾಡಲಾಗುತ್ತದೆ. ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು, ಉಪಾಧ್ಯಕ್ಷರು ತಮ್ಮ ವ್ಯಾಪ್ತಿಯ ಗ್ರಾಮಾಡಳಿತವನ್ನು ಚುರುಕುಗೊಳಿಸಲು ಅನುಸರಿಸುವ ಕ್ರಮಗಳ ಬಗ್ಗೆ ವಿವರಿಸಿದರು.
ಗ್ರಾಮ ಮಟ್ಟದಲ್ಲಿ ಸ್ಥಳೀಯ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿದ್ದಂತೆ. ಭಾರತ ಹೊರತು ಪಡಿಸಿ ವಿಶ್ವದ ಯಾವುದೇ ದೇಶದಲ್ಲಿ ಈ ಅಧಿಕಾರ ನೀಡಿರುವುದನ್ನು ನಾ ಕಂಡಿಲ್ಲ. ಹೆಚ್ಚಿನ ಜನಸಂಖ್ಯೆಯುಳ್ಳ ಚೀನಾ ದೇಶದಲ್ಲಿ ಪ್ರಜಾಪ್ರಭುತ್ವದ ಆಡಳಿತವಿಲ್ಲ. ಆದರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ರೂಪಿಸಿರುವ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ದೇಶದಲ್ಲಿ ಮಾತ್ರ ಕಾಣಬಹುದಾಗಿದೆ ಎಂದು ತಿಳಿಸಿದರು.

ತುಮಕೂರಿನಲ್ಲಿ ಟ್ರಾಮಾ ಕೇರ್ ಸೆಂಟರ್ ಆರಂಭ: ಏನಿದರ ಉಪಯೋಗ?
ಮಹಾತ್ಮ ಗಾಂಧೀಜಿಯವರ ಆಶಯದಂತೆ ಜನರಿಗಾಗಿ ಉತ್ತಮ ಆಡಳಿತ ನೀಡುವುದು ಎಲ್ಲಾ ಪಂಚಾಯತಿಗಳ ಜವಾಬ್ದಾರಿ. ಭಾರತ ಹಳ್ಳಿಗಳ ದೇಶವಾಗಿದ್ದು, ರಾಜ್ಯದಲ್ಲಿ 6000ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಿವೆ. ಗ್ರಾಮ ಪಂಚಾಯತಿಗಳಿಗೆ ರಾಜಧಾನಿ ಬೆಂಗಳೂರಿನಿಂದ ಯೋಜನೆಗಳ ಸೌಲಭ್ಯ ಕಲ್ಪಿಸುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ತಳ ಹಂತದಲ್ಲಿರುವ ಗ್ರಾಮ ಪಂಚಾಯತಿಗಳಿಗೆ ಶಕ್ತಿ ನೀಡುವ ದೃಷ್ಟಿಯಿಂದ ಆಯಾ ಪಂಚಾಯತಿಗಳಿಗೆ ಅಧಿಕಾರ ನೀಡಲಾಗಿದೆ. ಈ ಅಧಿಕಾರವನ್ನು ಜನರ ಕಲ್ಯಾಣಕ್ಕಾಗಿ ಬಳಸಿಕೊಳ್ಳುವಂತೆ ತಿಳಿಸಿದರು.
ವಿಧಾನಸಭಾ ಕ್ಷೇತ್ರದ ಶಾಸಕರಿಗಿದ್ದ ಅಧಿಕಾರವನ್ನು ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಿಗೆ ವಿಕೇಂದ್ರೀಕರಿಸಲಾಗಿದೆ. ಅಮೇರಿಕಾದಂತಹ ದೊಡ್ಡ ದೇಶದಲ್ಲಿಯೂ ಆಡಳಿತದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಸೌಲಭ್ಯ ನೀಡಿರುವುದಿಲ್ಲ. ಆದರೆ ಭಾರತದಲ್ಲಿ ಮಾತ್ರ ಪಂಚಾಯತಿ ಆಡಳಿತದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲಾಗಿದೆ. ಇದರಿಂದ ದೇಶದ ಲಕ್ಷಾಂತರ ಮಹಿಳೆಯರು ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತ ನಡೆಸುತ್ತಿದ್ದಾರೆ. ಪುರುಷ-ಮಹಿಳೆಯರಿಗೂ ಸಮಾನ ಸ್ಥಾನ-ಮಾನ ನೀಡಿರುವುದು ನಮ್ಮ ದೇಶದ ಹೆಗ್ಗಳಿಕೆ ಎಂದು ತಿಳಿಸಿದರು.

ಗೃಹ ಸಚಿವರ ನೇತೃತ್ವದಲ್ಲಿ ‘ಜನತಾ ದರ್ಶನ’: ದಿನಾಂಕ ನಿಗದಿ
ಕೂಲಿ ಸಿಗದೆ, ದುಡಿಮೆ ಇಲ್ಲದೆ ಹಸಿದವರಿಗೆ ಉದ್ಯೋಗ ನೀಡುವ ಸಲುವಾಗಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಉದ್ಯೋಗ ನೀಡಲಾಗುತ್ತಿದೆ. ಸ್ವಚ್ಛತಾ ಕಾರ್ಯಕ್ರಮದಡಿ ಗ್ರಾಮ ಪಂಚಾಯತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಜನ ಸಾಮಾನ್ಯರ ಆರೋಗ್ಯ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ವಿವಿಧ ವಸತಿ ಯೋಜನೆಯಡಿ ಬಡವರಿಗೆ ಸೌಲಭ್ಯ ಕಲ್ಪಿಸುವ ಸಲುವಾಗಿ ನಿವೇಶನ ಗುರುತಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರಲ್ಲದೆ, ನಿವೇಶನ ಹಂಚಿಕೆಯಲ್ಲಿ ಮಧ್ಯವರ್ತಿಗಳು ಲಾಭಿ ನಡೆಸುವುದನ್ನು ತಪ್ಪಿಸಿ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಹಂಚಿಕೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರ ಜಾರಿ ಮಾಡಿರುವ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಗ್ಯಾರಂಟಿಗಳ ಬಗ್ಗೆ ಬರುವ ಟೀಕೆಗಳಿಗೆ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ. ಕಡುಬಡವರ ಅನುಕೂಲಕ್ಕಾಗಿ ಈ ಗ್ಯಾರಂಟಿಗಳ ಜಾರಿ ಮಾಡಲಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರಂಟಿಗಳು ಜಾರಿಯಾದ 8 ತಿಂಗಳ ಅವಧಿಯಲ್ಲಿ 36,000 ಕೋಟಿ ರೂ. ಖರ್ಚಾಗಿದೆ. ಪ್ರತಿ ವರ್ಷ 42000 ಕೋಟಿ ರೂ. ವೆಚ್ಚವಾಗುವುದೆಂದು ಅಂದಾಜಿಸಲಾಗಿದೆ. ಆದರೂ ಎಲ್ಲರೂ ಸಮಾನವಾಗಿ ಬದುಕಬೇಕೆಂಬ ಪರಿಕಲ್ಪನೆಯಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ಗೃಹಲಕ್ಷ್ಮಿ; ಜಿಲ್ಲೆಯ 1.35ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ: ಉಳಿದವರಿಗೆ ಯಾವಾಗ? ಇಲ್ಲಿದೆ ಮಾಹಿತಿ
ಶಕ್ತಿ ಯೋಜನೆಯಡಿ ಈವರೆಗೂ 5 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಕುಟುಂಬದ ಯಜಮಾನಿ ಖಾತೆಗೆ ಜಮೆಯಾಗುವ 2000 ರೂ.ಗಳಿಂದ ಎಷ್ಟೋ ಕುಟುಂಬಗಳು ನೆಮ್ಮದಿಯಿಂದ ಬದುಕುತ್ತಿವೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಶಾಲೆಯಲ್ಲಿ ಆಟದ ಮೈದಾನ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಬೇಕೆನ್ನುವ ಉದ್ದೇಶದಿಂದ ಕಳೆದ ವಾರ ಕೈಗಾರಿಕೋದ್ಯಮಿಗಳಿಂದ 35ಕೋಟಿ ರೂ. ಸಂಗ್ರಹಿಸಲಾಗಿದೆ. ಈ ಹಣವನ್ನು ಶಾಲೆ, ಆಸ್ಪತ್ರೆಗಳ ಅಭಿವೃದ್ಧಿಗಾಗಿ ಖರ್ಚು ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಗ್ರಾಮ ಪಂಚಾಯತಿ ಅಧ್ಯಕ್ಷರು ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿ ಸಂಕಲ್ಪ ಮಾಡಬೇಕು. ಪಂಚಾಯತಿಯಲ್ಲಿ ಆರ್.ಓ.ಪ್ಲಾಂಟ್‍ಗಳನ್ನು ನಿರ್ವಹಣೆ ಮಾಡುತ್ತಿರುವ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು ಆಯಾ ಪಂಚಾಯತಿಗಳಿಗೆ ಹಸ್ತಾಂತರಿಸಬೇಕು. ಆಶ್ರಯ ವಸತಿ ಯೋಜನೆಯಡಿ ಅರ್ಹ ಬಡವರಿಗೆ ನಿವೇಶನ ಕಲ್ಪಿಸಲು ಜಿಲ್ಲೆಯಲ್ಲಿ ಈಗಾಗಲೇ 430 ಎಕರೆ ಪ್ರದೇಶವನ್ನು ಗುರುತಿಸಲಾಗಿದ್ದು, ಮುಂದಿನ 15 ದಿನಗಳೊಳಗೆ 1000 ಎಕರೆ ಪ್ರದೇಶವನ್ನು ಗುರುತಿಸಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು, ಪ್ರತಿ ಗ್ರಾಮ ಪಂಚಾಯತಿಯಲ್ಲಿ ಉದ್ಯಾನವನಕ್ಕಾಗಿ 3 ಎಕರೆ ಜಾಗ ಗುರುತಿಸಬೇಕೆಂದು ಪಿಡಿಓಗಳಿಗೆ ಸೂಚಿಸಿದರು. ಸ್ಮಶಾನ, ಖಬರಾಸ್ಥಾನಗಳಿಲ್ಲದ ಗ್ರಾಮಗಳು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಕ್ರಮಕೈಗೊಳ್ಳಲಾಗುವುದು. ಗ್ರಾಮಗಳ ಅಭಿವೃದ್ಧಿಗಾಗಿ ಜಿಲ್ಲಾಡಳಿತದಿಂದ ಸಹಕಾರ ನೀಡಲಾಗುವುದೆಂದು ತಿಳಿಸಿದರು.

ತೆಂಗು ಗೊನೆಗಾರರಿಗೆ ಶುಭ ಸುದ್ದಿ!; 5 ಲಕ್ಷ ರೂ.ಗಳ ವಿಮೆ ಸೌಲಭ್ಯ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿ ಹಾಗೂ ಯೋಜನೆಗಳ ಸಮಗ್ರ ಅನುಷ್ಟಾನಕ್ಕಾಗಿ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಓಗಳಿಗಾಗಿ ಒಂದೇ ಕಡೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಗ್ರಾಮೀಣ ಭಾಗದ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯ ಧ್ಯೇಯೋದ್ದೇಶ ಈವರೆಗೂ ಸಾಕಾರಗೊಂಡಿಲ್ಲ. ಈ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿದಲ್ಲಿ ಸಮಾನತೆ ಮಂತ್ರ ಯಶಸ್ಸು ಕಾಣುತ್ತದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ, ಶೌಚಾಲಯ, ಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪಂಚಾಯತಿಗಳು ಗುಣಮಟ್ಟದ ಸೇವೆ ನೀಡಬೇಕು. ಎಲ್ಲಾ ಪಂಚಾಯತಿಗಳ ಅಭಿವೃದ್ಧಿಗಾಗಿ ಅಗತ್ಯ ಮಾರ್ಗದರ್ಶನ, ಸಹಕಾರವನ್ನು ಜಿಲ್ಲಾ ಪಂಚಾಯತಿಯಿಂದ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಸಕ ಸುರೇಶ್ ಗೌಡ ಮಾತನಾಡಿ, ಜಿಲ್ಲಾ ಪಂಚಾಯತಿಯಡಿ 26 ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಗ್ರಾಮಪಂಚಾಯತಿಗಳಿಗೆ ನೇರವಾಗಿ ಅನುದಾನ ದೊರೆಯುತ್ತದೆ. ಗ್ರಾಮಪಂಚಾಯತಿಗಳು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೆ ಜನರಿಗೆ ಉತ್ತಮ ಸೇವೆ ನೀಡಬೇಕು. ಪಾರದರ್ಶಕತೆ ಆಡಳಿತ ಒದಗಿಸಲು ಗ್ರಾಮಪಂಚಾಯತಿ ಕಾಯ್ದೆ, ನಿಯಮಗಳನ್ನು ತಿಳಿದುಕೊಳ್ಳಬೇಕು. ಪಿಡಿಓ, ಕಾರ್ಯದರ್ಶಿ, ಬಿಲ್ ಕಲೆಕ್ಟರ್, ಪಂಚಾಯತಿ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರ ನಡುವೆ ಸಾಮರಸ್ಯ ಇಲ್ಲದೆ ಎಷ್ಟೋ ಪಂಚಾಯತಿಗಳು ಅಭಿವೃದ್ಧಿ ಕಾಣುತ್ತಿಲ್ಲ. ತುಮಕೂರು ಜಿಲ್ಲಾ ಕೇಂದ್ರಸ್ಥಾನದ ಸುತ್ತಮುತ್ತ ಇರುವ ಗ್ರಾಮಗಳಲ್ಲಿ ಅಭಿವೃದ್ಧಿ ಹಿನ್ನಡೆಯಾಗಿದ್ದು, ಜಿ.ಪಂ ಸಿಇಒ ಗಮನ ಹರಿಸಬೇಕೆಂದರು.
ಈ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ದುಡಿಯುವ ಕೂಲಿ ಕಾರ್ಮಿಕ ಮಹಿಳೆಯರ 3 ವರ್ಷದ ಮಕ್ಕಳ ಲಾಲನೆ-ಪಾಲನೆ ಮಾಡಲು ಕೂಸಿನ ಮನೆ ಎಂಬ ವಿನೂತನ ಯೋಜನೆಗೆ ಚಾಲನೆ ನೀಡಲಾಯಿತು,
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗ್ರಂಥಾಲಯಗಳಿಗೆ ಸಾಂಕೇತಿಕವಾಗಿ ಲ್ಯಾಪ್-ಟಾಪ್ ವಿತರಣೆ, ನರೇಗಾ ಯೋಜನೆಯಡಿ ಪಂಚಾಯತಿಗಳಿಗೆ ಕಾರ್ಯಾದೇಶ ನೀಡಲಾಯಿತು. ಸಾಮಾಜಿಕ ಅರಣ್ಯ ವಿಭಾಗದಿಂದ ಸಸಿಗಳನ್ನು ಬೆಳೆಸುವ ಬಗ್ಗೆ ಹೊರತಂದಿರುವ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಾಗಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಜಿ.ಪಂ. ನರಸಿಂಹಮೂರ್ತಿ, ಸಣ್ಣಮಸಿಯಪ್ಪ, ಹಾಲಸಿದ್ಧಪ್ಪ, ವಿವಿಧ ಇಲಾಖಾಧಿಕಾರಿಗಳು, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓಗಳು ಹಾಜರಿದ್ದರು.

About The Author

You May Also Like

More From Author

+ There are no comments

Add yours