ಸಂವಿಧಾನಕ್ಕೆ ನಾವೆಲ್ಲರೂ ಬದ್ಧರಾಗಬೇಕು: ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್

1 min read

ಸಂವಿಧಾನಕ್ಕೆ ನಾವೆಲ್ಲರೂ ಬದ್ಧರಾಗಬೇಕು: ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್

ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು.

Tumkurnews
ತುಮಕೂರು: ನಾವೆಲ್ಲರೂ ಸಂವಿಧಾನಕ್ಕೆ ಬದ್ಧರಾಗಿ ಉತ್ತಮ ಪ್ರಜೆಗಳಾಗಿ ಬದುಕುವುದರ ಮೂಲಕ ರಾಷ್ಟ್ರ ಹಾಗೂ ರಾಜ್ಯದ ಅಭಿವೃದ್ಧಿಯ ಏಳಿಗೆಗಾಗಿ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.
ಇಂದು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಓದಿದ ನಂತರ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರು ಇಲ್ಲಿ ಸೇರುವುದಕ್ಕೆ ಕಾರಣ ಡಾ.ಬಿ.ಆರ್ ಅಂಬೇಡ್ಕರ್ ಅವರು ದೇಶಕ್ಕೆ ಕೊಟ್ಟಿರುವ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಎಲ್ಲ ವರ್ಗದ ಜನರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಎಲ್ಲರೂ ಸ್ವಾಭಿಮಾನದ ಬದುಕನ್ನು ನಡೆಸುವುದಕ್ಕೆ ಅವರು ದಿಟ್ಟ ಹೆಜ್ಜೆಯನ್ನು ಹಾಕಿ ಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ಭಾರತ ಸಂವಿಧಾನವು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಸಂವಿಧಾನದಲ್ಲಿ ಎಲ್ಲರಿಗೂ ಒಂದೇ ರೀತಿಯ ಹಕ್ಕು ಮತ್ತು ಕರ್ತವ್ಯಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳನ್ನು ಸಹ ನೀಡಲಾಗಿದೆ. ಭಾರತ ದೇಶದಲ್ಲಿ ಜನವರಿ 26, 1950 ರಿಂದ ಸಂವಿಧಾನವನ್ನು ಅಧಿಕೃತವಾಗಿ ಅಳವಡಿಸಿಕೊಳ್ಳಲಾಗಿದೆ. ಆ ದಿನವನ್ನು ಗಣರಾಜ್ಯ ದಿನವೆಂದು ಪ್ರತಿ ವರ್ಷ ಆಚರಣೆ ಮಾಡುತ್ತೇವೆ ಎಂದರು.
ಸಂವಿಧಾನದ ಮಹತ್ವವನ್ನು ಎಲ್ಲಾ ಜನರಿಗೂ ತಿಳಿಸುವುದಕ್ಕಾಗಿ ವಿಶ್ವಸಂಸ್ಥೆಯು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನಾಗಿ ಪ್ರತಿ ವರ್ಷವೂ ಒಂದೊಂದು ಸಂದೇಶದೊಂದಿಗೆ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಇಬ್ಬರ ಬಲಿ ಪಡೆದ ಫ್ರೀ ಬಸ್: ಗೊರವನಹಳ್ಳಿ ಲಕ್ಷ್ಮಿಗೆ ಬಂದವರ ಸಾವು: ವಿಡಿಯೋ
ಪ್ರಜಾಪ್ರಭುತ್ವದ ವೈಶಿಷ್ಟ್ಯವೆಂದರೆ ನಮ್ಮ ಮುಂದಿನ ಪೀಳಿಗೆಯ ಮಕ್ಕಳು ಮತ್ತು ಜನರಿಗೆ ಸಂವಿಧಾನ ಪೀಠಿಕೆ ಮತ್ತು ಹಕ್ಕುಗಳ ಬಗ್ಗೆ ತಿಳಿಸಿದರೆ, ಅವರು ಉತ್ತಮ ಜೀವನವನ್ನು ಕಟ್ಟಿಕೊಳ್ಳುವ ಮೂಲಕ ರಾಷ್ಟ್ರಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ ಹಾಗೂ ಸಂವಿಧಾನದಲ್ಲಿರುವ ಕಾನೂನು ಮತ್ತು ಹಕ್ಕುಗಳನ್ನು ತಿಳಿದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಎಲ್ಲಾ ಧರ್ಮದ ಜಾತಿಗಳಿಗೂ ಮೀಸಲಾತಿ ಕಲ್ಪಿಸಿರುವುದು ಕೂಡ ಸಂವಿಧಾನದಿಂದಲೇ ಎಂದ ಅವರು, ಅಂಬೇಡ್ಕರ್ ಅವರು ಸುಮಾರು 12 ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಎಲ್ಲ ವರ್ಗದ ಜನರಿಗೂ ಸಮಾನವಾದ ಹಕ್ಕು ಮತ್ತು ಕರ್ತವ್ಯಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಆದ್ದರಿಂದ ಅವರಿಗೆ ನಾವೆಲ್ಲರೂ ಸದಾ ಆಭಾರಿಯಾಗಿದ್ದೇವೆ ಎಂದು ಹೇಳಿದರು.

ಎರಡು ಬಸ್’ಗಳ ನಡುವೆ ಸಿಲುಕಿ ಮಹಿಳೆಯರ ಸಾವು; KSRTC ಬಸ್ ನಿಲ್ದಾಣದಲ್ಲಿ‌ ಘಟನೆ
ಅಂಬೇಡ್ಕರ್ ಅವರು ದೂರದೃಷ್ಟಿ ಇಟ್ಟುಕೊಂಡು ಸಂವಿಧಾನವನ್ನು ಬರೆಯುವ ಮೂಲಕ ವಿಶ್ವದಲ್ಲಿ ಶ್ರೇಷ್ಠ ಮಾನವ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಒಂದು ದೇಶವನ್ನು ಮುನ್ನಡೆಸಬೇಕಾದರೆ ಅದಕ್ಕೆ ಬೇಕಾದಂತ ಎಲ್ಲ ಕಾನೂನು ಮತ್ತು ಅವಕಾಶಗಳನ್ನು ಕಲ್ಪಿಸಿ ಕೊಡುವಂತಹ ಮೂಲಭೂತ ಕಡತವೇ ಸಂವಿಧಾನವಾಗಿದೆ ಎಂದು ಹೇಳಿದರು.
ಯಾವ ದೇಶದ ಸಂವಿಧಾನ ಬಲಿಷ್ಠವಾಗಿದೆಯೋ, ಆ ದೇಶ ಅಷ್ಟು ಬಲಿಷ್ಠವಾದ ಆಡಳಿತ ವ್ಯವಸ್ಥೆಯನ್ನ ಹೊಂದಿ ತನ್ನ ನಾಗರಿಕರಿಗೆ ಅಷ್ಟು ಶಕ್ತಿಯುತವಾದ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸಂವಿಧಾನದ ರೂವಾರಿಗಳಾದಂತಹ ಹಾಗೂ ರಚನಾ ಸಮಿತಿ ಅಧ್ಯಕ್ಷ ಡಾ.ಬಿ.ಆರ್ ಅಂಬೇಡ್ಕರ್ ಅವರು ಅನೇಕ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಅದರಲ್ಲಿರುವ ಒಳ್ಳೆಯ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ನಮ್ಮ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಮೂಲ ಆಶಯ ನಾವು ಯಾವುದಾದರೂ ಒಂದು ಹಂತಕ್ಕೆ ಹೋಗಬೇಕೆನ್ನುವುದು ಇರುತ್ತದೆ. ಆದರೆ ಅಂಬೇಡ್ಕರ್ ಅವರು ಅತ್ಯಂತ ತಳಮಟ್ಟದಿಂದ ಮೇಲ್ಮಟ್ಟಕ್ಕೆ ಹೋದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ರಾಜ್ಯದ 195 ತಾಲ್ಲೂಕುಗಳಲ್ಲಿ ಬರ: ಇಲ್ಲಿದೆ ತುಮಕೂರು ಜಿಲ್ಲೆಯ ಲಿಸ್ಟ್
ವಿಶ್ವದಲ್ಲಿ ಪ್ರತಿಶತ ಶೇ.50ರಷ್ಟು ರಾಷ್ಟ್ರಗಳಲ್ಲಿ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆ ಇದೆ ಉಳಿದ ದೇಶಗಳಲ್ಲಿ ಕಮ್ಯುನಿಸಂ, ಡಿಕ್ಟೇಟರ್ಶಿಪ್ ನಂತಹ ಆಡಳಿತ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆಶಯ ಎಂದರೆ ಜನರಿಂದ ಜನರಿಗಾಗಿ ಜನರಿಗೋಸ್ಕರ ಆಡಳಿತ ನಡೆಸುವುದು ಆಗಿದೆ. ಪ್ರತಿಯೊಬ್ಬ ನಾಗರಿಕನು ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಲಾಗಿದೆ. ಎಲ್ಲರೂ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳಿಕೊಳ್ಳುವುದಕ್ಕೆ ಅವಕಾಶವಿದೆ ಎಂದು ತಿಳಿಸಿದರು.
ಸಂವಿಧಾನದ ಆಶಯವಾದ ರಾಜಕೀಯ ಸಮಾನತೆಯನ್ನು ಚುನಾವಣೆಯ ಮತದಾನದ ಮೂಲಕ ತಂದಿದ್ದೇವೆ. ಎಲ್ಲರಿಗೂ ಒಂದೇ ಮತದಾನದ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ತಬಸುಮ್ ಜಹೇರಾ KAS ಜೈಲಿಗೆ ಹೋಗುತ್ತಿರುವ ದೃಶ್ಯ: ಎಕ್ಸ್’ಕ್ಲೂಸಿವ್ ವಿಡಿಯೋ
ಸಮಾಜದಲ್ಲಿ ಎಲ್ಲ ಜಾತಿ ಧರ್ಮಗಳನ್ನು ಮೀರಿ ನಾವೆಲ್ಲರೂ ಒಂದು ಎಂಬ ಸಮಾನತೆಯಿಂದ ಬದುಕುವುದರ ಮೂಲಕ ಸಾಮಾಜಿಕ ಸಮಾನತೆಯನ್ನು ಕಾಣಬೇಕೆಂಬುವುದೇ ನಮ್ಮ ಸಂವಿಧಾನದ ಮೂಲ ಆಶಯವಾಗಿದೆ ಎಂದು ತಿಳಿಸಿದರು.
ಬಡವರು ಬಡವರಾಗಿಯೇ ಉಳಿದಿದ್ದಾರೆ ಶ್ರೀಮಂತರು ದಿನೇ ದಿನೇ ಶ್ರೀಮಂತರಾಗುತ್ತಿದ್ದಾರೆ. ಈ ಅಸಮಾನತೆಯನ್ನು ಹೋಗಲಾಡಿಸುವುದಕ್ಕಾಗಿ ರಿಸರ್ವೇಶನ್ ಪಾಲಿಸಿಗಳ ಮೂಲಕ ಆರ್ಥಿಕ ಸಮಾನತೆಗೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ತುಮಕೂರು ಜನತೆಗೆ ಪಾಲಿಕೆಯಿಂದ ವಿಶೇಷ ಸೂಚನೆ: ಗಮನಿಸಿ
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ತುಮಕೂರು ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಹಿಂದುಳಿದ ಕಲ್ಯಾಣ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಗಂಗಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಶಂಘ ಸಂಸ್ಥೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ತುಮಕೂರು: ಉಚಿತ ಲ್ಯಾಪ್‍ಟಾಪ್‍ಗಾಗಿ ಅರ್ಜಿ ಆಹ್ವಾನ

About The Author

You May Also Like

More From Author

+ There are no comments

Add yours