ಅಧಿಕಾರಿಗಳೊಂದಿಗೆ ಡಿಸಿ ವಿಡಿಯೋ ಕಾನ್ಫರೆನ್ಸ್; ಇಲ್ಲಿದೆ ಸಮಗ್ರ ಸುದ್ದಿ

1 min read

 

6 ತಿಂಗಳೊಳಗಾಗಿ ಜನನ-ಮರಣಗಳ ಡಿಜಿಟೈಜೇಶನ್‍ಗೆ ಡೀಸಿ ನಿರ್ದೇಶನ

Tumkurnews
ತುಮಕೂರು: ಜಿಲ್ಲೆಯಲ್ಲಿ 2015(ಇ-ಜನ್ಮ ತಂತ್ರಾಂಶ)ಕ್ಕಿಂತ ಮುಂಚೆ ಘಟಿಸಿರುವ ಜನನ-ಮರಣಗಳ ನೋಂದಣಿಯನ್ನು ಮುಂದಿನ 6 ತಿಂಗಳೊಳಗೆ ಸ್ಕ್ಯಾನಿಂಗ್ ಮತ್ತು ಡಿಜಿಟೈಜೇಶನ್ ಕಾರ್ಯ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿಂದು ತಾಲ್ಲೂಕು ಅಧಿಕಾರಿಗಳೊಂದಿಗೆ ಜನನ-ಮರಣ ನೋಂದಣಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾತನಾಡಿದ ಅವರು, “ನಾಗರಿಕ ನೋಂದಣಿ ಪದ್ಧತಿ”ಯನ್ನು ಉತ್ತಮಪಡಿಸುವ ಸಲುವಾಗಿ 2015ಕ್ಕಿಂತ ಮುಂಚಿನ ಜನನ-ಮರಣ ಘಟನೆಗಳನ್ನು ಡಿಜಿಟೈಜೇಶನ್ ಮಾಡಲಾಗುತ್ತಿದೆ ಎಂದರು.
ಎಲ್ಲಾ ತಾಲ್ಲೂಕು ತಹಶೀಲ್ದಾರರು ಆಯಾ ತಾಲ್ಲೂಕು ಕಚೇರಿಯ ಅಭಿಲೇಖಾಲಯದಲ್ಲಿರುವ ಜನನ-ಮರಣ ಘಟನೆಗಳ ಮಾಹಿತಿಯನ್ನು ಸರ್ಕಾರ ನಿಯೋಜಿಸಿರುವ ಕಿಯೋನಿಕ್ಸ್ ಸಂಸ್ಥೆಗೆ ಒದಗಿಸಬೇಕು.
ಸರ್ಕಾರವು 2023-24ನೇ ಸಾಲಿನಲ್ಲಿ ಮೊದಲ ಹಂತದಲ್ಲಿ ಜಿಲ್ಲೆಯ ಕೊರಟಗೆರೆ ತಾಲೂಕು ಗ್ರಾಮಾಂತರದಲ್ಲಿ 124192, ಮಧುಗಿರಿ-149684 ಹಾಗೂ ತುಮಕೂರು ತಾಲೂಕಿನ ಗ್ರಾಮಾಂತರ ಪ್ರದೇಶದ 105954 ಸೇರಿದಂತೆ ಒಟ್ಟು 379830 ಜನನ-ಮರಣ ಘಟನೆಗಳ ದಾಖಲೆಗಳನ್ನು ಸ್ಕ್ಯಾನಿಂಗ್ ಮತ್ತು ಡಿಜಿಟೈಜೇಶನ್ ಮಾಡಲು ಗುರಿ ನಿಗಧಿಪಡಿಸಿದೆ. ಜನನ-ಮರಣ ನೋಂದಣಾಧಿಕಾರಿಗಳು, ಉಪ ನೋಂದಣಾಧಿಕಾರಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ವರದಿಯಾಗುವ ಜನನ-ಮರಣ, ನಿರ್ಜೀವ ಜನನ ಘಟನೆಗಳನ್ನು ತಪ್ಪದೇ ಶೇ.100ರಷ್ಟು ನೋಂದಾಯಿಸಬೇಕೆಂದು ಎಚ್ಚರಿಕೆ ನೀಡಿದರು.
ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ಜಿಲ್ಲೆಯಲ್ಲಿ 5780 ಬೆಳೆ ಕಟಾವು ಪ್ರಯೋಗಗಳಿದ್ದು, ಎಲ್ಲ ಮೂಲ ಕಾರ್ಯಕರ್ತರು ನಿಯಮಾನುಸಾರ ಪ್ರಯೋಗ ಕೈಗೊಂಡು ನಿಖರವಾಗಿ ಇಳುವರಿ ಮಾಹಿತಿಯನ್ನು ಮೊಬೈಲ್ ಆಪ್ ತಂತ್ರಾಂಶದಲ್ಲಿ ದಾಖಲಿಸಬೇಕು. ಇಳುವರಿ ಮಾಹಿತಿ ದಾಖಲಿಸುವ ಬಗ್ಗೆ ಎಲ್ಲ ಮೂಲ ಕಾರ್ಯಕರ್ತರಿಗೆ ಸೂಚಿಸಬೇಕೆಂದು ಕಂದಾಯ, ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರಂಗಸ್ವಾಮಿ ಅವರು ಸಭೆಗೆ ಜನನ-ಮರಣ ನೋಂದಣಿ ಅಂಕಿ-ಅಂಶಗಳ ಮಾಹಿತಿಯನ್ನು ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಸಿದ್ದೇಶ್, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಮೋಹನ್ ಕುಮಾರ್, ಕಂದಾಯ ಇಲಾಖೆಯ ನರಸಿಂಹರಾಜು, ಕೃಷಿ ಇಲಾಖೆ ಅಧಿಕಾರಿಗಳು, ಸೇರಿದಂತೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು ಜಿಲ್ಲೆಯಲ್ಲಿ ಮಳೆಯಿಂದಾದ ಬೆಳೆ ಹಾನಿ, ಮನೆ ಹಾನಿ ಹಾಗೂ ಮಳೆಯ ಕೊರತೆಯಿಂದ ನಷ್ಟವುಂಟಾಗಿರುವ ಬೆಳೆ ಮಾಹಿತಿಯನ್ನು ಇನ್ನೆರಡು ದಿನಗಳಲ್ಲಿ ಮಾಹಿತಿ ನೀಡಬೇಕೆಂದು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಲ್ಲದೆ, ಪೈಕಿ ಪಹಣಿ ಒಗ್ಗೂಡಿಸುವಿಕೆ, 94ಸಿ ಹಾಗೂ 94ಸಿಸಿ ಅಡಿ ಹಕ್ಕುಪತ್ರ ವಿತರಣೆ, ಪಹಣಿ 3 ಮತ್ತು 9 ಮಿಸ್‍ಮ್ಯಾಚ್, ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಮನೆ-ಮನೆ ಭೇಟಿ, 50/53/57 ನಿಯಮದಡಿ ಸಾಗುವಳಿ ಚೀಟಿ ವಿತರಣೆ, ಭೂಮಿ ಪೆಂಡೆನ್ಸಿ, ಮೋಜಣಿ ತಿದ್ದುಪಡಿ, ಪೋಡಿ, ಕೆರೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ತಹಶೀಲ್ದಾರರ ಹಂತದಲ್ಲಿ ನ್ಯಾಯಾಲಯ ಪ್ರಕರಣಗಳು ಬಾಕಿಯಿದ್ದಲ್ಲಿ 90 ದಿನಗಳೊಳಗೆ ವಿಲೇವಾರಿ ಮಾಡಲು ಆದ್ಯತೆ ನೀಡಬೇಕು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಕಡತ ಹಾಗೂ ನ್ಯಾಯಾಲಯ ಪ್ರಕರಣಗಳನ್ನು ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಖಡಕ್ ಸೂಚನೆ ನೀಡಿದರು.
ಜಿಲ್ಲಾಡಳಿತದೊಂದಿಗೆ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಇಂದಿನಿಂದಲೇ ಇ-ಕಚೇರಿ ಮೂಲಕವೇ ಕಡತ, ಅರ್ಜಿ ಸಲ್ಲಿಸಬೇಕು ಎಂದರಲ್ಲದೆ ಮುಂದಿನ ವಿಡಿಯೋ ಕಾನ್ಫರೆನ್ಸ್ ಸಭೆಯೊಳಗಾಗಿ ಬಾಕಿ ಇರುವ ಪೈಕಿ ಪಹಣಿ ಪ್ರಕರಣಗಳನ್ನು ಶೂನ್ಯಕ್ಕೆ ತರಬೇಕು. ನಿಗಧಿಪಡಿಸಿರುವ ಗುರಿ ಸಾಧಿಸದೆ ಇರುವ, ಯಾವುದೇ ಪ್ರಕರಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸದೆ ಸಭೆಗೆ ಸಮರ್ಪಕ ಮಾಹಿತಿ ನೀಡದ ಶಿರಸ್ತೇದಾರರು, ತಹಶೀಲ್ದಾರರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ದೇಶಿಸಿದರು.
ಸ್ಮಶಾನ ಭೂಮಿ ಮಂಜೂರು ಮಾಡುವ ಸಂದರ್ಭದಲ್ಲಿ ಪ್ರತಿ 1000 ಜನಸಂಖ್ಯೆಗನುಗುಣವಾಗಿ 20 ಕುಂಟೆ ಮಾತ್ರ ಭೂಮಿಯನ್ನು ಮಂಜೂರು ಮಾಡಬೇಕು ಎಂದು ತಾಲ್ಲೂಕು ಅಧಿಕಾರಿಗಳಿಗೆ ನಿರ್ದೇಶಿಸಿದ ಅವರು, ಜಿಲ್ಲೆಯಲ್ಲಿರುವ ಕಾಡುಗೊಲ್ಲರ ಹಟ್ಟಿಗಳನ್ನು ಪತ್ತೆ ಮಾಡಿ ಹಟ್ಟಿಯಲ್ಲಿ ಶಾಲೆ/ಅಂಗನವಾಡಿ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದಿದ್ದಲ್ಲಿ ಮಾಹಿತಿ ನೀಡಬೇಕು. ಸಕಾಲದಲ್ಲಿ ವಿಲೇವಾರಿ ಮಾಡದೆ ಭೂಮಿ ಪೆಂಡೆನ್ಸಿ ಪ್ರಕರಣಗಳನ್ನು ಬಾಕಿ ಉಳಿಸಿಕೊಂಡ ತಹಶೀಲ್ದಾರರ ಮೇಲೆ ಕ್ರಮಕೈಗೊಳ್ಳಲು ಪ್ರಾದೇಶಿಕ ಆಯುಕ್ತರಿಗೆ ಶಿಫಾರಸ್ಸು ಮಾಡಲಾಗುವುದು. ಮುಂದಿನ 15 ದಿನಗಳೊಳಗಾಗಿ ಬಾಕಿ ಇರುವ ಕಂದಾಯ ಇಲಾಖೆಗೆ ಸಂಬಂಧಿಸಿರುವ ಎಲ್ಲಾ ಪ್ರಕರಣಗಳನ್ನು ಶೇ.50ರಷ್ಟು ವಿಲೇವಾರಿ ಮಾಡಬೇಕು ಎಂದು ತಾಕೀತು ಮಾಡಿದರು.

  1. ನಾಲ್ಕು ತಿಂಗಳಲ್ಲಿ 47 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಜಿಲ್ಲೆಯಲ್ಲಿ 174 ಪೋಕ್ಸೊ ಕೇಸ್ ದಾಖಲು

About The Author

You May Also Like

More From Author

+ There are no comments

Add yours