ಕೇವಲ 8 ವರ್ಷಕ್ಕೆ ಇನ್ಸ್‌ಪೆಕ್ಟರ್ ಹುದ್ದೆಗೇರಿದ ಬಾಲಕ!: ಶಿವಮೊಗ್ಗದ ಹೃದಯವಂತ ಪೊಲೀಸ್
Tumkurnews.in
ಶಿವಮೊಗ್ಗ; ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲೊಬ್ಬ ಹೃದಯವಂತ ಇನ್ಸ್‌ಪೆಕ್ಟರ್ ಅಧಿಕಾರ ಸ್ವೀಕರಿಸಿದ್ದು, ಕಳ್ಳಕಾಕರನ್ನು ಮನಪರಿವರ್ತನೆ ಮಾಡಿ ಸರಿದಾರಿಗೆ ತಂದಿದ್ದಾರೆ. ಸಿಬ್ಬಂದಿಗೆ ರಜೆಯ ಗಿಫ್ಟ್ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಇನ್ಸ್‌ಪೆಕ್ಟರ್ ಅಧಿಕಾರ ಸ್ವೀಕಾರಕ್ಕೆ ಖುದ್ದು ಎಸ್.ಪಿ ಮಿಥುನ್ ಕುಮಾರ್ ಅವರೇ ಸಾಕ್ಷಿಯಾಗಿ ಶುಭ ಕೋರಿದ್ದಾರೆ. ಅಂದಹಾಗೆ ಈ ಜನಮನ ಮೆಚ್ಚಿದ ಅಧಿಕಾರಿಯ ಹೆಸರು ಆಜಾನ್ ಖಾನ್, ವಯಸ್ಸು ಕೇವಲ 8 ವರ್ಷ!
ಅರೇ! ಇದೇನಿದು 8 ವರ್ಷದ ಬಾಲಕನಿಗೆ ಇನ್ಸ್‌ಪೆಕ್ಟರ್ ಹುದ್ದೆ ಲಭಿಸಿದೆಯೇ? ಅದೂ ನಮ್ಮ ಶಿವಮೊಗ್ಗದಲ್ಲಿ!? ಎಂದು ಅಚ್ಚರಿಯಾಯಿತೇ? ಹೌದು, ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಆಜಾನ್ ಖಾನ್ ಎಂಬುವವರು ಕೇವಲ ತಮ್ಮ 8 ವರ್ಷ ವಯಸ್ಸಿನಲ್ಲಿ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದರು. ಆಗಸ್ಟ್ 16ರ ಬುಧವಾರ ಇಂತಹದ್ದೊಂದು ಅಪರೂಪದ ಪ್ರಕರಣಕ್ಕೆ ದೊಡ್ಡಪೇಟೆ ಪೊಲೀಸ್ ಠಾಣೆ ಸಾಕ್ಷಿಯಾಯಿತು.
ಏನಿದು ಪೊಲೀಸ್ ಸ್ಟೋರಿ?: ಶಿವಮೊಗ್ಗ ಟೌನ್ ಸೂಳೆಬೈಲು ನಿವಾಸಿ ತಬ್ರೇಜ್ ಖಾನ್ ಎಂಬುವರ ಪುತ್ರ ಹಾಲಿ ಚಿಕ್ಕಮಗಳೂರು ಜಿಲ್ಲೆ, ಬಾಳೆಹೊನ್ನೂರು, ಎನ್.ಆರ್ ಪುರ ರಸ್ತೆಯಲ್ಲಿ ವಾಸವಿರುವ ಆಜಾನ್ ಖಾನ್ ಎಂಬ ಬಾಲಕ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾನೆ. ಈ ಬಾಲಕನಿಗೆ ತಾನು ಪೊಲೀಸ್ ಅಧಿಕಾರಿಯಾಗಬೇಕು ಎಂಬ ಆಸೆ ಇದೆ. ಅದನ್ನಾತ ತನ್ನ ಪೋಷಕರಿಗೆ ತಿಳಿಸಿದ್ದನು. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಗುವಿನ ಆಸೆಯ ಬಗ್ಗೆ ಎಸ್.ಪಿ ಜಿ.ಕೆ ಮಿಥುನ್ ಕುಮಾರ್ ಅವರ ಗಮನಕ್ಕೆ ತಂದು ಮನವಿ ಮಾಡಿದ್ದರು. ಮಗುವಿನ ಆಸೆ ಈಡೇರಿಸಲು ಮನಸು ಮಾಡಿದ ಎಸ್.ಪಿ, ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಬಾಲಕನಿಗೆ ಒಂದು ಗಂಟೆಗಳ ಕಾಲ ಇನ್ಸ್‌ಪೆಕ್ಟರ್ ಹುದ್ದೆ ಅಲಂಕರಿಸಲು ಅವಕಾಶ ಮಾಡಿಕೊಟ್ಟರು. ಅದರಂತೆ ಆಜಾನ್ ಖಾನ್ ತನ್ನ 8ನೇ ವಯಸ್ಸಿನಲ್ಲಿ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ಚಲಾಯಿಸಿದರು.
ಹೃದಯವಂತ ಪೊಲೀಸ್; ದೊಡ್ಡಪೇಟೆ ಠಾಣೆಯ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಆಜಾನ್ ಖಾನ್ ಎಲ್ಲರ ಮನಗೆಲ್ಲುವಂತೆ ಅಧಿಕಾರ ಚಲಾಯಿಸಿದರು. ಮೊದಲು ಕಾಲಿಂಗ್ ಬೆಲ್ ಮಾಡಿ ಸಿಬ್ಬಂದಿಯನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಅವರ ಯೋಗಕ್ಷೇಮ ವಿಚಾರಿಸಿದರು. ಆಗ ತಮಗೆ ಒಂದು ದಿನ ರಜೆ ಬೇಕು ಎಂದು ಕೇಳಿದ ಸಿಬ್ಬಂದಿಗೆ ಎರಡು ದಿನ ರಜೆ ಮಂಜೂರು ಮಾಡಿ ಸಿಬ್ಬಂದಿಯ ಹೃದಯ ಗೆದ್ದರು. ಇದೇ ವೇಳೆ ಮೊಬೈಲ್ ಕಳ್ಳನನ್ನು ವಿಚಾರಣೆ ನಡೆಸಿದ ಇನ್ಸ್‌ಪೆಕ್ಟರ್, ಇನ್ಮುಂದೆ ಕಳ್ಳತನ ಮಾಡದಂತೆ ಹಾಗೂ ಕೆಲಸ ಮಾಡಿ ಜೀವನ ನಡೆಸುವಂತೆ ಬುದ್ದಿವಾದ ಹೇಳಿ ಕಳ್ಳನ ಮನಪರಿವರ್ತನೆ ಮಾಡಿದರು. ಆಜಾನ್ ಖಾನ್ ಅವರ ಒಂದು ಗಂಟೆಯ ಅಧಿಕಾರವದಿಯು ಇಡೀ ಶಿವಮೊಗ್ಗದಲ್ಲಿ ಸಂಚಲನ ಸೃಷ್ಟಿಸಿತು. ಇದ್ದರೆ ಇಂತ ಅಧಿಕಾರಿಗಳು ಇರಬೇಕಪ್ಪ ಎಂದು ಜನ ಹಾಗೂ ಸಿಬ್ಬಂದಿ ಮೆಚ್ಚುವಂತೆ ಆಜಾನ್ ಖಾನ್ ತಮ್ಮ ಅಧಿಕಾರವದಿಯನ್ನು ಬಳಸಿಕೊಂಡರು. ಅಂದಹಾಗೆ ಆಜಾನ್ ಖಾನ್ ಅವರಿಗೆ ಒಂದು ದಿನದ ಇನ್ಸ್‌ಪೆಕ್ಟರ್ ಹುದ್ದೆಯನ್ನು ಸಾಂಕೇತಿಕವಾಗಿ ನೀಡಲಾಗಿದ್ದು, ಇದು ಮಗುವಿಗೆ ಸಂತೋಷಕ್ಕಾಗಿ ಮಾಡಿರುವಂತದ್ದಾಗಿರುತ್ತದೆ. ಒಟ್ಟಾರೆಯಾಗಿ ಶಿವಮೊಗ್ಗದ ಎಸ್.ಪಿ ಜಿ.ಕೆ ಮಿಥುನ್ ಕುಮಾರ್, ಎ.ಎಸ್.ಪಿ ಅನಿಲ್ ಕುಮಾರ್, ಭೂಮರೆಡ್ಡಿ, ದೊಡ್ಡಪೇಟೆ ಇನ್ಸ್‌ಪೆಕ್ಟರ್ ಅಂಜನ್ ಕುಮಾರ್ ಮತ್ತಿತರ ಹೃದಯವಂತ ಪೊಲೀಸರು ಮಗುವಿಗೆ ಸಂತೋಷಕ್ಕಾಗಿ ಇಷ್ಟೆಲ್ಲಾ ಮಾಡಿದ್ದು ಜನಮೆಚ್ಚುಗೆಗೆ ಪಾತ್ರವಾಗಿದೆ.
ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನರಾರಂಭಕ್ಕೆ ಕೇಂದ್ರ ಸಮ್ಮತಿ
+ There are no comments
Add yours