77ನೇ ಸ್ವಾತಂತ್ರ್ಯ ದಿನಾಚರಣೆ; ಸರ್ಕಾರ, ಜಿಲ್ಲೆಯ ಪ್ರಗತಿ ವರದಿ ತೆರೆದಿಟ್ಟ ಸಚಿವ ಪರಮೇಶ್ವರ್; ಸಮಗ್ರ ವರದಿ

1 min read

 

ಸ್ವಾತಂತ್ರ್ಯ ದಿನಾಚರಣೆ; ಸರ್ಕಾರ, ಜಿಲ್ಲೆಯ ಪ್ರಗತಿ ವರದಿ ತೆರೆದಿಟ್ಟ ಸಚಿವ ಪರಮೇಶ್ವರ್

Tumkurnews.in
ತುಮಕೂರು; ನಮ್ಮ ಸಂವಿಧಾನದ ಮೂಲಾಧಾರವಾಗಿರುವ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಎತ್ತಿಹಿಡಿಯುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು, ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡುತ್ತಾ ಮಾತನಾಡಿದ ಅವರು, ದೇಶದ ರಕ್ಷಣೆಗೆ ಹಗಲಿರುಳು ದುಡಿಯುತ್ತಿರುವ ಸೈನಿಕರ ಸೇವೆಯನ್ನು ಸ್ಮರಿಸುತ್ತಾ, ಶಾಂತಿ-ಸಹನೆ, ಸಹಿಷ್ಣುತೆಯ ಮಹತ್ವವನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.
ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ನಂತರ ಭಾರತ ದೇಶವು ಹಲವು ಮೈಲಿಗಲ್ಲುಗಳನ್ನು ಕಂಡಿದೆ. ಆರ್ಥಿಕತೆ, ರಾಜಕೀಯ, ತಂತ್ರಜ್ಞಾನ, ವಿಜ್ಞಾನ, ಮೂಲಸೌಕರ್ಯಗಳು ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸಹ ಅನೇಕ ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಸಾಧನೆ, ಅಭಿವೃದ್ಧಿಗಳ ಸಂಖ್ಯೆ ಸ್ವಾತಂತ್ರ್ಯ ಭಾರತದಲ್ಲಿ ಹೆಚ್ಚುತ್ತಲೇ ಇರುತ್ತದೆ ಹೊರತು, ಎಂದಿಗೂ ಇದಕ್ಕೆ ಅಂತ್ಯ ಎನ್ನುವುದಿಲ್ಲ. ಎಲ್ಲಿ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ, ಯಾವ ದೇಶದ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ, ಎಲ್ಲಿಯವರೆಗೆ ಪ್ರಜೆಗಳು ಸ್ವಾತಂತ್ರ್ಯರಾಗಿರುತ್ತಾರೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ, ಒಂದು ಕುಟುಂಬದ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ. ಅದಕ್ಕೆ ಕೊನೆ ಎಂಬುದು ಇಲ್ಲ. ಅದಕ್ಕೆ ಇಂದಿನ ಭಾರತವೇ ಸಾಕ್ಷಿ ಎಂದು ತಿಳಿಸಿದರು.
ದೇಶ ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯುತ್ತಿರುವ ಈ ಹೊತ್ತಿನಲ್ಲಿ ರಾಜ್ಯ ಸರ್ಕಾರವು ಕಳೆದ ಎರಡು ತಿಂಗಳಿನಿಂದ ಜನಪರ ಆಡಳಿತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿದ್ದು, ಚುನಾವಣಾ ಪೂರ್ವದ ಪ್ರಣಾಳಿಕೆಯ ಘೋಷಣೆಗಳನ್ನು ಹಂತ ಹಂತವಾಗಿ ಕರ್ನಾಟಕದ ಜನತೆಗೆ ಅನುಷ್ಠಾನಗೊಳಿಸುತ್ತಿರುವುದು ದೇಶದ ಇತಿಹಾಸದಲ್ಲಿಯೇ ಪ್ರಥಮ ಎನ್ನುವುದನ್ನು ಮರೆಯುವಂತಿಲ್ಲ ಎಂದು ತಿಳಿಸಿದರು.
ಹೊತ್ತನಾಡು ಹಾಗೂ ಹೆತ್ತತಾಯಿ ಇವರ ಋಣವನ್ನು ತೀರಿಸುವುದು ಯಾರೊಬ್ಬರಿಗೂ ಸಾಧ್ಯವಿಲ್ಲ. ಆದುದರಿಂದ ಕುಟುಂಬದ ಯಜಮಾನಿ ಮಹಿಳೆಗೆ ಮಾಸಿಕ 2000 ರೂ.ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆ, ಮಹಿಳಾ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗಿದೆ. ನಾಡಿನ ಅರ್ಹ ಗೃಹ ಬಳಕೆದಾರರಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ‘ಗೃಹಜ್ಯೋತಿ’ ಯೋಜನೆಯಿಂದಾಗಿ ಇಂದು ಲಕ್ಷಾಂತರ ಮನೆಗಳಲ್ಲಿ ಬದಲಾವಣೆಯ ಬೆಳಕು ಬೆಳಗುತ್ತಿದೆ. ‘ಅನ್ನಭಾಗ್ಯ’ ಯೋಜನೆಯ ಲಾಭವನ್ನು ರಾಜ್ಯದ ಹಲವಾರು ಕುಟುಂಬಗಳು ಪಡೆದು ನೆಮ್ಮದಿಯ ಜೀವನ ನಡೆಸುತ್ತಿವೆ. ನಿರುದ್ಯೋಗಿ ಪದವೀಧರ ಹಾಗೂ ಡಿಪ್ಲೋಮಾ ಪದವಿಧರರಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಯೂ ಸಹ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ. ಈ ಎಲ್ಲ ಜನಕಲ್ಯಾಣ ಯೋಜನೆಗಳನ್ನು ನಿಗದಿತ ಕಾಲದಲ್ಲಿ ಅನುಷ್ಠಾನಗೊಳಿಸುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
‘ಗೃಹಲಕ್ಷ್ಮಿ’ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000 ಗಳನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ 5.50 ಲಕ್ಷ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕಡು ಬಡ ಕುಟುಂಬಗಳು ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ‘ಅನ್ನಭಾಗ್ಯ’ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಫಲಾನುಭವಿಗೆ 10 ಕೆ.ಜಿ. ಅಕ್ಕಿ ಪೈಕಿ 5 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ಪ್ರತಿ ಮಾಹೆ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಪ್ರತಿ ಮಾಹೆ 10,789 ಮೆಟ್ರಿಕ್ ಟನ್ (ಅಕ್ಕಿ) ಆಹಾರಧಾನ್ಯಗಳನ್ನು ವಿತರಿಸಲಾಗುತ್ತಿದೆ. ಇನ್ನುಳಿದ 5 ಕೆ.ಜಿ. ಅಕ್ಕಿಯ ಬದಲಿಗೆ ಪ್ರತಿ ಫಲಾನುಭವಿಗೆ ಮಾಹೆಯಾನ 170 ರೂ.ಹಣವನ್ನು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ಮುಖಾಂತರ ವರ್ಗಾವಣೆ ಮಾಡಲಾಗಿದೆ. ಜುಲೈ 2023ನೇ ಮಾಹೆಯಲ್ಲಿ ಜಿಲ್ಲೆಯ 5,29,515 ಅರ್ಹ ಪಡಿತರ ಚೀಟಿದಾರರಿಗೆ 30,43,28,220 ರೂ.ಗಳನ್ನು ಜಮೆ ಮಾಡಲಾಗಿದೆ ಎಂದು ತಿಳಿಸಿದರು.
“ಗೃಹಜ್ಯೋತಿ ಯೋಜನೆ”ಯಡಿ ಮೂಲಭೂತ ಸೌಕರ್ಯಗಳಲ್ಲಿ ಅತ್ಯಂತ ಪ್ರಮುಖವಾದ ವಿದ್ಯುತ್ ಶಕ್ತಿ ಸೌಲಭ್ಯವನ್ನು ರಾಜ್ಯದ ಅರ್ಹ ಗೃಹಬಳಕೆ ನಾಗರೀಕರಿಗೆ ಒದಗಿಸಲು ನೋಂದಣಿ ಪ್ರಕ್ರಿಯೆಯನ್ನು ಜೂನ್ 18, 2023 ರಿಂದ ರಾಜ್ಯಾದ್ಯಂತ ಚಾಲನೆಗೊಳಿಸಲಾಗಿದೆ. ಪ್ರತಿ ಮನೆಯ ಪ್ರತಿ ತಿಂಗಳಿನ ಗರಿಷ್ಠ 200 ಯೂನಿಟ್‍ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ವಿದ್ಯುತ್ ಬಳಕೆಯ ಯೂನಿಟ್‍ಗಳ ಮೇಲೆ ಶೇಕಡಾ 10 ಹೆಚ್ಚಿನ ಬಳಕೆಯ ಮಿತಿಗೆ ಅರ್ಹರಿರುವ ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಅವರು, ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 7,82,542 ಗೃಹ ಬಳಕೆ ಗ್ರಾಹಕರ ಪೈಕಿ 5,54,333 ಗ್ರಾಹಕರು ನೊಂದಣಿ ಮಾಡಿಕೊಂಡಿದ್ದು, ಆಗಸ್ಟ್ 01 ರಿಂದ ಸೌಲಭ್ಯವನ್ನು ಪಡೆದಿರುತ್ತಾರೆ ಎಂದು ತಿಳಿಸಿದರು.
ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರು ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಲು ಜೂನ್ 11 ರಿಂದ ‘ಶಕ್ತಿ’ ಯೋಜನೆಯನ್ನು ಜಾರಿಗೆ ತಂದಿದ್ದು, ತುಮಕೂರು ಜಿಲ್ಲೆಯಾದ್ಯಂತ ತುಮಕೂರು ವಿಭಾಗದ ಸಾರಿಗೆ ಬಸ್‍ಗಳಲ್ಲಿ 90.33 ಲಕ್ಷ ಮಹಿಳೆಯರು ಬಸ್ಸುಗಳಲ್ಲಿ ಪ್ರಯಾಣಿಸಿರುತ್ತಾರೆ ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ 384 ಗ್ರಾಮ ಒನ್ ಕೇಂದ್ರಗಳಿದ್ದು, ಸಾರ್ವಜನಿಕರು 1565467 ಸಂಖ್ಯೆಯ ಸೇವೆಯನ್ನು ಅವರ ಗ್ರಾಮದಲ್ಲಿ ಪಡೆದಿರುತ್ತಾರೆ. ತುಮಕೂರು ಜಿಲ್ಲೆಯಲ್ಲಿ ವೃದ್ಧಾಪ್ಯ ವೇತನದಡಿ 1,01,707, ಸಂಧ್ಯಾ ಸುರಕ್ಷಾ ಯೋಜನೆಯಡಿ 2,65,724, ವಿಧವಾ ವೇತನದಡಿ 1,05,273, ವಿಕಲಚೇತರ ಮಾಶಾಸನ ಯೋಜನೆಯಡಿ 57,422, ಮೈತ್ರಿ ಯೋಜನೆಯಡಿ 99, ಮನಸ್ವಿನಿ ಯೋಜನೆಯಡಿ 12,575, ಆಸಿಡ್ ದಾಳಿಗೆ ತುತ್ತಾದವರು 06, ರೈತ ವಿಧವಾ ವೇತನ 252 ಜನ ಫಲಾನುಭವಿಗಳನ್ನು ಸೇರಿ ಒಟ್ಟು 5,44,270 ಫಲಾನುಭವಿಗಳಿದ್ದು, ಮಾಹೆಯಾನ ಒಟ್ಟು ರೂ.46.75 ಕೋಟಿ ಮಾಶಾಸನವನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿಸಲು 542 ಪ್ರದೇಶಗಳನ್ನು ಗುರುತಿಸಲಾಗಿದ್ದು, ಹೊಸ ಗ್ರಾಮಗಳಾಗಿ 253 ಪ್ರದೇಶಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿರುತ್ತದೆ ಹಾಗೂ 5870 ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಗುರುತಿಸಿರುವ 542 ಪ್ರದೇಶಗಳಲ್ಲಿ 95 ಗೊಲ್ಲರಹಟ್ಟಿಗಳನ್ನು 27 ಲಂಬಾಣಿ ತಾಂಡಗಳನ್ನು ಹೊಸ ಗ್ರಾಮರಚನೆ ಮಾಡಲು ಉದ್ದೇಶಿಸಿ ಕ್ರಮವಹಿಸಿದ್ದು ಈಗಾಗಲೇ ಗೊಲ್ಲರಹಟ್ಟಿಗಳಲ್ಲಿ 48 ಗ್ರಾಮಗಳನ್ನು ಹೊಸ ಗ್ರಾಮಗಳಾಗಿ ಪರಿವರ್ತಿಸಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಜಿಲ್ಲೆಯಲ್ಲಿ ಒಟ್ಟು 542 ಗ್ರಾಮಗಳ ಪೈಕಿ 268 ಗ್ರಾಮಗಳಿಗೆ 2ಇ ಅಧಿಸೂಚನೆ ಹಾಗೂ 453 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದರು.
ಜೆಜೆಎಂ ಯೋಜನೆಯಡಿ ಪ್ರಥಮ ಹಂತದಲ್ಲಿ 84 ಜನವಸತಿ ಪೈಕಿ 14,596 ಮನೆಗಳಿಗೆ ಗೃಹ ನಳ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. 2ನೇ ಹಂತದಲ್ಲಿ 82 ಜನವಸತಿಗಳ 11,730 ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ 33 ಕಾಮಗಾರಿಗಳು ಪೂರ್ಣಗೊಂಡಿರುತ್ತದೆ. 3ನೇ ಹಂತದಲ್ಲಿ 3012 ಜನವಸತಿಗಳ ಪೈಕಿ 1787 ಕಾಮಗಾರಿಗಳಲ್ಲಿ 2,19,035 ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ 1,787 ಕಾಮಗಾರಿಗಳಿಗೆ ಟೆಂಡರ್ ಕರೆದಿದ್ದು, ಇದರಲ್ಲಿ 1,216 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿ 624 ಕಾಮಗಾರಿಗಳು ಪ್ರಗತಿಯಲ್ಲಿದ್ದು, 166 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. 4ನೇ ಹಂತದಲ್ಲಿ 2155 ಜನವಸತಿಗಳ ಪೈಕಿ 1,751 ಕಾಮಗಾರಿಗಳಲ್ಲಿ 1,27,746 ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ 1751 ಕಾಮಗಾರಿಗಳನ್ನು ಟೆಂಡರ್ ಕರೆದಿದ್ದು, ಇದರಲ್ಲಿ 238 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿ 50 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 2023-24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4,02,235 ಕುಟುಂಬಗಳಿಗೆ ಉದ್ಯೋಗ ಚೀಟಿ ನೀಡಲಾಗಿದ್ದು, ಪ್ರಸ್ತುತ ಆರ್ಥಿಕ ವರ್ಷದಲ್ಲಿ 42.00 ಲಕ್ಷ ಮಾನವ ದಿನಗಳ ಗುರಿ ನೀಡಿದ್ದು, ಅದರಲ್ಲಿ 14.87 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿ ಒಟ್ಟು 79.78 ಕೋಟಿ ಕೂಲಿ ಮತ್ತು ಸಾಮಗ್ರಿ ಮೊತ್ತ ಪಾವತಿಸಲಾಗಿರುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ಕೈಗಾರಿಕಾ ಬೆಳವಣಿಗೆ ಹಾಗೂ ಬೇಡಿಕೆಗಳ ಪೂರೈಕೆಗನುಗುಣವಾಗಿ ಹಾಲಿ ಅಭಿವೃದ್ಧಿಯಾಗಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ, ವಸಂತನರಸಾಪುರ 4ನೇ ಹಂತದ ಕೈಗಾರಿಕಾ ಪ್ರದೇಶ ರಚನೆಗೆ ತೀರ್ಮಾನಿಸಲಾಗಿದೆ. ಈ ಕೈಗಾರಿಕಾ ಪ್ರದೇಶವನ್ನು ವಿಭಿನ್ನವಾಗಿ ಹಾಗೂ ಕೈಗಾರಿಕಾ ಸ್ನೇಹಿ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿಪಡಿಸುವ ದೂರದೃಷ್ಟಿಯಿಂದ “ತುಮಕೂರು ಇಂಡಸ್ಟ್ರೀಯಲ್ ಟೌನ್‍ಶಿಪ್ ಲಿಮಿಟೆಡ್” ಶಿರೋನಾಮೆಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಅಂತೆಯೇ 16ನೇ ಸೆಪ್ಟೆಂಬರ್-2023 ರಂದು ಜಿಲ್ಲಾ ಮಟ್ಟದ ಪ್ರತಿಷ್ಠಿತ ಕೈಗಾರಿಕೆಗಳ, ಕೈಗಾರಿಕಾ ಮಾಲೀಕರ ಸಮಾವೇಶವನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಈ ಸಮಾವೇಶದಲ್ಲಿ ರಾಜ್ಯ ಪ್ರತಿಷ್ಠಿತ ಕೈಗಾರಿಕೆಗಳ ಮುಖ್ಯಸ್ಥರು, ಜಿಲ್ಲೆಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಮುಖ್ಯಸ್ಥರನ್ನು ಆಹ್ವಾನಿಸಲು ತೀರ್ಮಾನಿಸಲಾಗಿರುತ್ತದೆ ಎಂದು ತಿಳಿಸಿದರು.
ತುಮಕೂರು ಮಹಾನಗರಪಾಲಿಕೆ ಸೇರಿದಂತೆ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ, ಸಮಾನ ವೇತನ, ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸಿದಂತಹ ಒಟ್ಟು 275 ಸಂಖ್ಯೆಯ ಪೌರ ಕಾರ್ಮಿಕರು ಹಾಗೂ ಲೋಡರ್ಸ್’ಗಳ ಸೇವೆಯನ್ನು ಖಾಯಂಗೊಳಿಸಲಾಗಿರುತ್ತದೆ ಎಂದು ಹರ್ಷ ವ್ಯಕ್ತಿಪಡಿಸಿದರು.
ತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು. ರಾಜ್ಯವನ್ನು ಪ್ರಗತಿಯತ್ತ ಮುನ್ನಡೆಸಲು ತಮ್ಮಗಳ ಅಗತ್ಯ ಸಹಾಯ ಹಾಗೂ ಸಹಕಾರವನ್ನು ಕೋರಿದ ಅವರು, ಜಿಲ್ಲೆಯ ಎಲ್ಲಾ ಇಲಾಖೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಶ್ರಮವಹಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಮೇಯರ್ ಪ್ರಭಾವತಿ ಸುಧೀಶ್ವರ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಪಾಲಿಕೆ ಆಯುಕ್ತೆ ಆಶ್ವಿಜ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ವಿವಿಧ ಶಾಲಾ-ಕಾಲೇಜು ಮಕ್ಕಳು ಭಾಗವಹಿಸಿದ್ದರು.

About The Author

You May Also Like

More From Author

+ There are no comments

Add yours