Tumkurnews
ತುಮಕೂರು; ರಂಗಭೂಮಿ ಅನ್ನುವುದು ಎಲ್ಲರನ್ನು ಒಳಗೊಳ್ಳುವಂತಹದ್ದು, ಹಾಗಾಗಿಯೇ ನಾಟಕಗಳ ಮೂಲಕ ಬಹುಬೇಗ ಜನರನ್ನು ತಲುಪಲು ಸಾಧ್ಯ ಎಂದು ಪಾವನ ಆಸ್ಪತ್ರೆಯ ವೈದ್ಯ ಡಾ.ಮುರುಳೀಧರ್ ಬೆಲ್ಲದಮಡು ತಿಳಿಸಿದರು.
ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ) ತುಮಕೂರು ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಆಯೋಜಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ್ ಕಂಬಾರರ ಸಾಂಬಶಿವ ಪ್ರಹಸನ ನಾಟಕದ ಪ್ರಯೋಗದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಎಲ್ಲಾ ಮನಸ್ಸುಗಳನ್ನು ಬೆಸೆಯುವಂತಹ ಸಂದೇಶವುಳ್ಳು ಮೊರಂ ಹಬ್ಬದ ದಿನ ಕಳೆದ 15 ವರ್ಷಗಳಿಂದ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿರುವ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ನಾಟಕ ಪ್ರದರ್ಶನ ಆಯೋಜಿಸಿರುವುದು ಅತ್ಯಂತ ಅರ್ಥಪೂರ್ಣವಾದ ವಿಚಾರ ಎಂದರು.
ಬುಡಕಟ್ಟು ಹಾಗೂ ಜಾನಪದ ಗಾಯಕ ಮೋಹನ್‍ಕುಮಾರ್ ಮಾತನಾಡಿ, ಸಮಾಜದ ಓರೆಕೋರೆಗಳನ್ನ ತಿದ್ದುವ ಮಾಧ್ಯಮಗಳಲ್ಲಿಯೇ ರಂಗಭೂಮಿ ಅತ್ಯಂತ ಪ್ರಬಲವಾದುದ್ದು, ಇದನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ನಿರಂತರವಾಗಿ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದೆ. ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರಿ ಮುನ್ನೆಡೆಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ. ಇದನ್ನು ಪ್ರೋತ್ಸಾಹಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಜಾನಪದ, ರಂಗಭೂಮಿ ಒಂದಕ್ಕೊಂದು ಪೂರಕವಾದವು. ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಬಳಸುವ ಸಂಗೀತ, ಸಾಹಿತ್ಯ, ಸಂಭಾಷಣೆ ಎಲ್ಲದರಲ್ಲಿಯೂ ಜಾನಪದ ಸೊಗಡು ಅಡಗಿರುವುದನ್ನು ಕಾಣಬಹುದಾಗಿದೆ. ಯುವಮನಸ್ಸುಗಳು ಇತ್ತ ಕಡೆ ಗಮನಹರಿಸಬೇಕಿದೆ. ಇದನ್ನು ಮುನ್ನೆಡೆಸಲು ನಾವೆಲ್ಲರು ಶಕ್ತಿ ಮೀರಿ ಪ್ರಯತ್ನಿಸಬೇಕಿದೆ ಎಂದು ತಿಳಿಸಿದರು
ಪತ್ರಕರ್ತ ಭೈರೇಶ್ ಮಾತನಾಡಿ, ರಂಗಭೂಮಿ ಎಂಬುದು ವಾಸ್ತವಕ್ಕೆ ಹಿಡಿದ ಕನ್ನಡಿ. ಬೀದಿ ನಾಟಕಗಳು ಸಾಮಾಜದಲ್ಲಿ ಹಲವಾರು ಬದಲಾವಣೆಗಳನ್ನು ತಂದಿರುವುದನ್ನು ನಾವು ಕಾಣಬಹುದಾಗಿದೆ. ಶಿವಕುಮಾರ್ ತಿಮ್ಮಲಾಪುರ ತಮ್ಮೊಂದಿಗೆ ಹಲವಾರು ಯುವಕರನ್ನು ಜೊತೆಗೂಡಿಸಿಕೊಂಡು ಇಂತಹ ಸೃಜನಶೀಲ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅಂಗ್ಲಭಾಷಾ ಉಪನ್ಯಾಸಕಿ ಡಾ.ಪೂರ್ಣಿಮ ಮಾತನಾಡಿ, ಬೇರೆ ರಂಗದಲ್ಲಿ ದುಡಿಯುತ್ತಿರುವ ಯುವಜನರನ್ನು ಒಗ್ಗೂಡಿಸಿ, ಅವರಿಗೆ ರಂಗ ತರಬೇತಿ ನೀಡಿ, ಅವರ ಮೂಲಕ ನಾಟಕ ಪ್ರಯೋಗ ಮಾಡಿಸುತ್ತಿರುವುದು ನಿಜಕ್ಕೂ ಮೆಚ್ಚುವಂತಹ ಕೆಲಸ. ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಈ ಕೆಲಸವನ್ನು ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿದೆ. ಅವರ ಕಾರ್ಯಕ್ಕೆ ನಾವೆಲ್ಲರೂ ಸಹಕಾರ ನೀಡಿ, ಮತಷ್ಟು ಉತ್ತುಂಗಕ್ಕೆ ಬೆಳೆಯಲು ಹಾರೈಸೋಣ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಶಿವಕುಮಾರ್ ತಿಮ್ಮಲಾಪುರ, ಕಾಂತರಾಜು ಕೌತುಮಾರನಹಳ್ಳಿ, ಅನುರಾಗ್ ಭೀಮಸಂದ್ರ, ಸ್ವಾಂದೇನಹಳ್ಳಿ ಸಿದ್ದರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರ ಸಾಂಬಶಿವ ಪ್ರಹಸನ ನಾಟಕವನ್ನು ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಕಲಾವಿದರು ಅನುರಾಗ್ ಭೀಮಸಂದ್ರ ಅವರ ನಿರ್ದೇಶನದಲ್ಲಿ, ಡಾ.ಅನುಷ್ಕು ಅವರ ಹಿನ್ನೆಲೆ ಸಂಗೀತ, ಗಿರೀಶ್ ಓ.ಪಿ ಮತ್ತು ಅನುಜ್ ಎಂ., ರಂಗಸಜ್ಜಿಕೆ, ಕಾಂತರಾಜು ಕೌತುಮಾರನಹಳ್ಳಿ ಅವರ ಬೆಳಕಿನ ವಿನ್ಯಾಸ ಮತ್ತು ಶಿವಕುಮಾರ್ ತಿಮ್ಮಲಾಪುರ ಅವರ ನಿರ್ವಹಣೆಗೆ ಪ್ರಸ್ತುತ ಪಡಿಸಿದರು.
+ There are no comments
Add yours