ತುಮಕೂರು; ಅನ್ನಭಾಗ್ಯ ಫಲಾನುಭವಿಗಳೆಷ್ಟು? ಎಷ್ಟು ಹಣ ಬೇಕು? ಪಾವತಿ ಹೇಗೆ? ಇಲ್ಲಿದೆ ಸಮಗ್ರ ವರದಿ

1 min read

 

ಅನ್ನಭಾಗ್ಯ ಯೋಜನೆಗೆ ಚಾಲನೆ; ಎಷ್ಟು ಹಣ ಬೇಕು ಗೊತ್ತೇ?

Tumkurnews
ತುಮಕೂರು; ಜಿಲ್ಲೆಯಲ್ಲಿ ಒಟ್ಟು 6,61,625 ಅಂತ್ಯೋದಯ ಮತ್ತು ಬಿಪಿಎಲ್ (ಎಎವೈ ಮತ್ತು ಪಿಹೆಚ್‍ಹೆಚ್) ಪಡಿತರ ಚೀಟಿಗಳು ಚಾಲ್ತಿಯಲ್ಲಿದ್ದು, ಈ ಪೈಕಿ ಸಕ್ರಿಯವಾಗಿರುವ ಮತ್ತು ಆಧಾರ್ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿರುವ ಒಟ್ಟು 5,29,331 ಪಡಿತರ ಚೀಟಿದಾರರ ಖಾತೆಗೆ ಒಟ್ಟು 30,42,17,210 ಕೋಟಿ ರೂ. ಗಳನ್ನು ಡಿಬಿಟಿ (ನೇರ ನಗದು ವರ್ಗಾವಣೆ) ಮೂಲಕ ವರ್ಗಾಯಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಅನ್ನಭಾಗ್ಯ” ಯೋಜನೆಯಡಿ ಜಿಲ್ಲೆಯಲ್ಲಿರುವ ಅಂತ್ಯೋದಯ(ಎಎವೈ) ಮತ್ತು ಆದ್ಯತಾ (ಬಿಪಿಎಲ್) ಪಡಿತರ ಫಲಾನುಭವಿಗಳಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ ವಿತರಿಸಲಾಗುವ 5 ಕೆ.ಜಿ. ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿ.ಗೆ ರೂ. 34ರಂತೆ ಪಡಿತರ ಚೀಟಿಯಲ್ಲಿನ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬಿಪಿಎಲ್ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ 5 ಕೆ.ಜಿ. ಅಕ್ಕಿಯ ಬದಲಾಗಿ ಪ್ರತಿ ಕೆ.ಜಿ.ಗೆ ರೂ.34*5=170 ಗಳನ್ನು ನೀಡಲಾಗುವುದು. ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದಲ್ಲಿ 3 ಅಥವಾ 3ಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬವು ಈಗಾಗಲೇ ಪ್ರತಿ ತಿಂಗಳು 35 ಕೆ.ಜಿ ಆಹಾರ ಧಾನ್ಯವನ್ನು ಪಡೆಯುತ್ತಿರುವುದರಿಂದ ಅಂತಹ ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿ ಕುಟುಂಬಗಳಿಗೆ ನಗದು ಸೌಲಭ್ಯವನ್ನು ನೀಡಲಾಗುವುದಿಲ್ಲ ಹಾಗೂ ಕಳೆದ ಮೂರು ತಿಂಗಳುಗಳಲ್ಲಿ ಆಹಾರ ಧಾನ್ಯ ಪಡೆಯದೇ ಇರುವ ಕುಟುಂಬಗಳಿಗೆ ನಗದು ವರ್ಗಾವಣೆ ಸೌಲಭ್ಯ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಂತ್ಯೋದಯ ಪಡಿತರ ಚೀಟಿಯ ಕುಟುಂಬದಲ್ಲಿ 4 ಸದಸ್ಯರಿದ್ದರೆ ಸದರಿ ಕುಟುಂಬಕ್ಕೆ ರೂ. 170(34*5*1)ಗಳನ್ನು, 5 ಸದಸ್ಯರನ್ನು ಹೊಂದಿರುವ ಕುಟುಂಬಕ್ಕೆ ರೂ.510(34*5*3)ಗಳನ್ನು, 6 ಸದಸ್ಯರನ್ನು ಹೊಂದಿರುವ ಕುಟುಂಬಕ್ಕೆ ರೂ.850(34*5*5)ಗಳನ್ನು ನೀಡಲಾಗುತ್ತದೆ. ಹೆಚ್ಚಿನ ಸದಸ್ಯರಿದ್ದಲ್ಲಿ ಇದೇ ರೀತಿಯ ಅನುಪಾತವು ಮುಂದುವರೆಯುತ್ತದೆ ಎಂದು ಅವರು ತಿಳಿಸಿದ್ದಾರೆ.
ಪಡಿತರ ಚೀಟಿಯಲ್ಲಿ ಕುಟುಂಬ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿಗಳನ್ನು ನಗದು ವರ್ಗಾವಣೆ ಸೌಲಭ್ಯದಿಂದ ಹೊರಗಿಡಲಾಗಿದೆ. ಈ ಸಮಸ್ಯೆಯನ್ನು ಸಂಬಂಧಿಸಿದ ತಾಲ್ಲೂಕಿನ ತಹಶೀಲ್ದಾರ್ ಕಾರ್ಯಾಲಯಕ್ಕೆ ಭೇಟಿ ನೀಡಿ ಸರಿಪಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
70831 ಪಡಿತರ ಚೀಟಿಗಳ ಬ್ಯಾಂಕ್ ಖಾತೆ ಸಮಸ್ಯೆ ಇರುತ್ತದೆ. ಪಡಿತರ ಚೀಟಿದಾರರಿಗೆ ಹಣ ಜಮೆಯಾಗದೇ ಇರುವುದರಿಂದ ಸದರಿಯವರು ಬ್ಯಾಂಕಿಗೆ ಭೇಟಿ ನೀಡಿ ತಮ್ಮ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಈ ತಿಂಗಳಿನ 20ನೇ ತಾರೀಖಿನ ಒಳಗಾಗಿ ಲಿಂಕ್ ಮಾಡಿಸಿ, ಖಾತೆಯನ್ನು ಸಕ್ರಿಯಗೊಳಿಸಿದ್ದಲ್ಲಿ ಮಾತ್ರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅರ್ಹ ಪಡಿತರ ಚೀಟಿದಾರರು ಡಿಬಿಟಿ(ನೇರ ನಗದು ವರ್ಗಾವಣೆ) ಮೂಲಕ ಹಣ ವರ್ಗಾವಣೆಯಾದ ಬಗ್ಗೆ ಹಾಗೂ ಇತರೆ ವಿವರಗಳಿಗೆ https://ahara.kar.nic.in/status2/statusofdbt.aspx ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours