ಚುನಾವಣೆ ಕರಪತ್ರದಲ್ಲಿ ಈ ಮಾಹಿತಿ ಕಡ್ಡಾಯ; ತಪ್ಪಿದರೆ ಜೈಲು

1 min read

 

ಕರಪತ್ರದಲ್ಲಿ ಈ ಮಾಹಿತಿ ಕಡ್ಡಾಯ; ತಪ್ಪಿದರೆ ಸೆರೆವಾಸ

Tumkurnews
ತುಮಕೂರು; ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 127-ಎ ಪ್ರಕಾರ ಮುದ್ರಣ ಮಾಡುವ ಚುನಾವಣಾ ಕರಪತ್ರಗಳು, ಪೋಸ್ಟರ್’ಗಳ ಮೇಲೆ ಮುದ್ರಕನ ಹೆಸರು, ವಿಳಾಸ, ಪ್ರಕಾಶಕರ ಹೆಸರು ಮತ್ತು ವಿಳಾಸ ಹೊಂದಿರುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು.
ಚುನಾವಣೆಗೆ ಸಂಬಂಧಿಸಿದಂತೆ ಕೈಯಿಂದ ನಕಲು ಮಾಡುವುದನ್ನು ಹೊರತುಪಡಿಸಿ ಮುದ್ರಿಸುವ ಅಥವಾ ಯಾವುದೇ ಪ್ರಕ್ರಿಯೆಯಿಂದ ಬಹುಗ್ರಾಫ್ ಮಾಡಲಾದ ಚುನಾವಣಾ ಕರಪತ್ರ, ಕೈ-ಬಿಲ್, ಫಲಕ(ಪ್ಲಕಾರ್ಡ್), ಪೋಸ್ಟರ್’ಗಳ ಮುಂಭಾಗದಲ್ಲಿ ಮುದ್ರಕನ ಹೆಸರು ಮತ್ತು ವಿಳಾಸ, ಪ್ರಕಾಶಕನ ಹೆಸರು ಮತ್ತು ವಿಳಾಸ ಮುದ್ರಿಸುವುದು ಕಡ್ಡಾಯವೆಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಈ ನಿರ್ದೇಶನವನ್ನು ಉಲ್ಲಂಘಿಸಿದವರಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 2,000 ರೂ.ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಚುನಾವಣಾ ಕರಪತ್ರ, ಪೋಸ್ಟರ್’ಗಳನ್ನು ಮುದ್ರಿಸುವ ಮುದ್ರಕರು ಪ್ರಕಾಶಕರಿಂದ ಘೋಷಣಾ ಪತ್ರ(ಪ್ರಕಾಶಕರು ವೈಯಕ್ತಿಕವಾಗಿ ತಿಳಿದಿರುವ ಇಬ್ಬರು ವ್ಯಕ್ತಿಗಳಿಂದ ದೃಢೀಕರಿಸಿದ)ವನ್ನು ದ್ವಿಪ್ರತಿಯಲ್ಲಿ ಪಡೆದು ಘೋಷಣೆಯ ಒಂದು ಪ್ರತಿ ಹಾಗೂ ಉದ್ದೇಶಿತ ಮುದ್ರಣದ ಪ್ರತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು.
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಮುದ್ರಕರ ಸಭೆಯನ್ನು ಕರೆದು ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 127ಎ ಕುರಿತು ಮಾಹಿತಿ ತಿಳಿಸಬೇಕು. ಚುನಾವಣಾ ಕರಪತ್ರಗಳಲ್ಲಿ ಮುದ್ರಕರ ಹೆಸರು, ಪ್ರಕಾಶಕರ ಹೆಸರು ಮತ್ತು ವಿಳಾಸ ಮುದ್ರಿಸುವುದು ಕಡ್ಡಾಯ. ಉದ್ದೇಶಿತ ಮುದ್ರಣದ ನಾಲ್ಕು ಪ್ರತಿಗಳನ್ನು ಹಾಗೂ ಪ್ರಕಾಶಕರ ಡಿಕ್ಲರೇಷನ್(ಘೋಷಣೆ) ಅನ್ನು ಚುನಾಣಾಧಿಕಾರಿಗಳಿಗೆ ಸಲ್ಲಿಸಬೇಕು. ಇಲ್ಲವಾದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಎಂದು ಪರಿಗಣಿಸಲಾಗುವುದು. ನಿಯಮ ಉಲ್ಲಂಘಿಸಿದವರ ಪರವಾನಗಿಯನ್ನು ರದ್ದುಪಡಿಸಲು ಕ್ರಮವಿಡಲಾಗುವುದು ಎಂದು ಎಚ್ಚರಿಸಿದರು.
ಚುನಾವಣಾ ಆಯೋಗ ಸೂಚಿಸಿರುವ ನಮೂನೆಯಲ್ಲಿ ಮುದ್ರಕರು ಮುದ್ರಿತ ವಿಷಯದ ಪ್ರತಿ, ಘೋಷಣೆ, ಕರಪತ್ರಗಳ ಪ್ರತಿಗಳ ಸಂಖ್ಯೆ, ಮುದ್ರಿಸಲು ತಗಲುವ ವೆಚ್ಚ ಸೇರಿದಂತೆ ಮತ್ತಿತರ ವಿವರಗಳನ್ನು ಒದಗಿಸಬೇಕೆಂದು ಮುದ್ರಕರಿಗೆ ಮನವರಿಕೆ ಮಾಡಬೇಕು.
ಯಾವುದೇ ಚುನಾವಣಾ ಕರ ಪತ್ರ, ಕೈ ಚೀಲ, ಬ್ಯಾನರ್, ಬಂಟಿಂಗ್, ಫ್ಲೆಕ್ಸ್ ಅಥವಾ ಪೋಸ್ಟರ್ ಅನ್ನು ಮುದ್ರಿಸಿದ ಮುದ್ರಣಾಲಯದ ಹೆಸರು, ವಿಳಾಸ, ಮುದ್ರಿಸಿದ ದಿನಾಂಕ ಮತ್ತು ಪ್ರತಿಗಳ ಸಂಖ್ಯೆ ವಿವರಗಳಿಲ್ಲದೆ ಮುದ್ರಿಸಬಾರದು. ಯಾವುದೇ ಪ್ರಕಟಣೆಯನ್ನು 10 ದಿನಗಳೊಳಗಾಗಿ ಮುದ್ರಕರು ಅಥವಾ ಪ್ರಕಾಶಕರು ಮುದ್ರಿತ ವಸ್ತುಗಳ 4 ಪ್ರತಿ ಮತ್ತು ಪ್ರಕಾಶಕರ ಘೋಷಣೆಗಳನ್ನು ಭರ್ತಿ ಮಾಡಿದ ನಿಗಧಿತ ನಮೂನೆಯೊಂದಿಗೆ ಲಗತ್ತಿಸಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ತಪ್ಪಿದಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಮುದ್ರಣಾಲಯಗಳ ಮುದ್ರಕರಿಗೆ ತಿಳಿಸಬೇಕು.
ನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದರೆ ಸಂಬಂಧಿಸಿದವರ ವಿರುದ್ಧ ತ್ವರಿತ ಕ್ರಮ ಮತ್ತು ತನಿಖೆ ಕೈಗೊಳ್ಳಲಾಗುವುದು. ಅಪರಾಧ ಎಂದು ಸಾಬೀತಾದಲ್ಲಿ ಶೀಘ್ರವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

About The Author

You May Also Like

More From Author

+ There are no comments

Add yours