ತುಮಕೂರು; ಮಂದರಗಿರಿಯಲ್ಲಿ ಭಾರತದಲ್ಲೇ ಪ್ರಥಮ ವಾಸ್ತು ರಚನೆ! ಏನಿದು ವಿಶೇಷ?

1 min read

Tumkurnews
ತುಮಕೂರು; ನಗರ ಹೊರವಲಯದ ಶ್ರೀ ಅತಿಶಯ ಕ್ಷೇತ್ರ ಮಂದರಗಿರಿಯಲ್ಲಿ ಭಾರತದಲ್ಲೇ ಪ್ರಥಮವಾದ ವಿಶಿಷ್ಟ ವಾಸ್ತು ರಚನೆಯೊಂದಿಗೆ ಮಹಾವೀರ ತೀರ್ಥಂಕರರ ದಿವ್ಯಾ ಕಾಶ ಸಮವಶರಣವನ್ನು ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಸಮವಶರಣದ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭ ಮಾ. 8 ರಿಂದ 13 ರವರೆಗೆ 6 ದಿನಗಳ ಕಾಲ ನಡೆಯಲಿದೆ.
ಮಂದರಗಿರಿಯಲ್ಲಿ 6 ದಿನಗಳ ಕಾಲ ನಡೆಯುವ ಈ ಸಮಾರಂಭ ರಾಷ್ಟ್ರಮಟ್ಟದ್ದಾಗಿದ್ದು, ಸಹಸ್ರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜೈನ ಮುನಿಗಳು, ಮಾತಾಜಿಗಳು, ದಕ್ಷಿಣ ಭಾರತದ ವಿವಿಧ ಜೈನ ಮಠಗಳ ಪೀಠಾಧೀಶರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥಸ್ವಾಮಿ ಜಿನ ಮಂದಿರ ಸಮಿತಿಯ ಅಧ್ಯಕ್ಷ ನಾಗರಾಜು ಎಸ್.ಜೆ. ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
ಮಂದರಗಿರಿಯಲ್ಲಿ ದಿಗಂಬರ ಜೈನ ಮುನಿಗಳಾದ ಶ್ರೀ ಅಮೋಘ ಕೀರ್ತಿ ಮಹಾರಾಜ್ ಮತ್ತು ಅಮರಕೀರ್ತಿ ಮಹಾರಾಜ್ ಅವರ ನೇತೃತ್ವದಲ್ಲಿ ವಿಭಿನ್ನವಾದ ಶ್ರೀ ದಿವಾಕಾಶ ಸಮವಶರಣ ನಿರ್ಮಾಣಗೊಂಡಿದೆ. ಮೂರು ವರ್ಷಗಳಿಂದ ನಿರಂತರವಾಗಿ ಕಾಮಗಾರಿ ನಡೆಯುತ್ತಿದ್ದು, ನೂರಾರು ನುರಿತ ಕುಶಲಕರ್ಮಿಗಳು ಕೆಲಸ ಮಾಡುತ್ತಿದ್ದಾರೆ. ರಾಜಸ್ತಾನ, ತಮಿಳುನಾಡು, ಕೇರಳ ಕಾರ್ಕಳ, ಮಂಗಳೂರು ಭಾಗದಿಂದ ಬಂದಿರುವ ಕುಶಲಕರ್ಮಿಗಳು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಬಹುತೇಕ ಕರ್ನಾಟಕ ರಾಜ್ಯದ ಸ್ಥಳೀಯ ಶಿಲೆಯನ್ನ ಸಮವಶರಣ ನಿರ್ಮಿಸಲು ಬಳಸಿಕೊಳ್ಳಲಾಗಿದೆ. ಅದರಲ್ಲೂ ವಿಶೇಷವಾಗಿ ಒರಿಸ್ಸಾದಿಂದ ಬಂದ ನುರಿತ ಕುಶಲಕರ್ಮಿಗಳು ಸುಂದರವಾದ ಮಹಾವೀರ ತೀರ್ಥಂಕರ ಮೂರ್ತಿಗಳ ಕತ್ತನೆ ಮಾಡಿದ್ದಾರೆ. ಧ್ಯಾನಸ ಮುಖ ಹೊಂದಿರುವ ನಾಲ್ಕು ಮಹಾವೀರ ತೀರ್ಥಂಕರರ ಮೂರ್ತಿಗಳು ಬರೋಬ್ಬರಿ ಐದು ಟನ್ ತೂಕದಿಂದ ಕೂಡಿವೆ ಎಂದು ಅವರು ಮಾಹಿತಿ ನೀಡಿದರು.
ಮಾ.8 ರಿಂದ ಆರಂಭವಾಗಲಿರುವ ಪಂಚಕಲ್ಯಾಣ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಹಿಸುವರು. ಶ್ರೀ ಅಮೋಘ ಕೀರ್ತಿ ಮಹಾರಾಜ್ ಮತ್ತು ಅಮರಕೀರ್ತಿ ಅಮೋಘಮಹಾರಾಜ್ ಮತ್ತು ವಿವಿಧ ಮಠಗಳ ಭಟ್ಟಾರಕ ಪಟ್ಟಾಚಾರ್ಯರು ಸಾನ್ನಿಧ್ಯ ವಹಿಸುವರು. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸುರೇಂದ್ರ ಕುಮಾರ್, ಮುಂಬೈನ ರಾಕೇಶ್ ಜೈನ್, ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಸ್.ಜಿ. ನಾಗರಾಜ್ ಸೇರಿದಂತೆ ಸ್ಥಳೀಯ ಜನಪತಿನಿಧಿಗಳು ಭಾಗವಹಿಸುವರು.
ಮಾ.9 ರಂದು ಗರ್ಭಕಲ್ಯಾಣ ಮಹೋತ್ಸವ, ಮಾ.10 ರಂದು ಜನ್ಮ ಕಲ್ಯಾಣ ಮಹೋತ್ಸವ, ಮಾ.11 ರಂದು ದೀಕ್ಷಾ ಕಲ್ಯಾಣ ಮಹೋತ್ಸವ, ಮಾ.12 ರಂದು ಕೇವಲಜ್ಞಾನ ಕಲ್ಯಾಣ, ಮಾ.13 ರಂದು ಮೋಕ್ಷ ಕಲ್ಯಾಣ ಮಹೋತ್ಸವ ನಡೆಯಲಿದೆ. ಪ್ರತಿ ದಿನ ಸಂಜೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮ ಜರುಗಲಿವೆ ಎಂದು ಅವರು ವಿವರಿಸಿದರು.
ಸಮಾರೋಪ
ಮಾ. 13 ರಂದು ಸಮವಶರಣದ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. 6 ದಿನಗಳ ಕಾಲ ನಡೆಯಲಿರುವ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಜರುಗಲಿವೆ ಎಂದು ಅವರು ಹೇಳಿದರು.
ಕರ್ನಾಟಕ ಜೈನ ಅಸೋಸಿಯೇಷನ್ ನಿರ್ದೇಶಕ ಅಜಿತ್ ಮಾತನಾಡಿ, ಬಸದಿ ಬೆಟ್ಟದ ಇಳಿಜಾರಿನಲ್ಲಿ ನಿರ್ಮಿತವಾಗಿರುವ ಈ ಸಮವಶರಣವು 22500 ಚದರಡಿ ವಿಸ್ತೀರ್ಣ ಹೊಂದಿದೆ. ಬಿಳಿ ಬಣ್ಣದ ಗ್ರಾನೈಟ್ ಶಿಲೆಯಲ್ಲಿ ನಿರ್ಮಾಣಗೊಂಡಿರುವ ಮೊದಲ ಸಮವಶರಣ ಇದಾಗಿದೆ. ಇದರ ಮಧ್ಯದಲ್ಲಿ ಆಶೋಕ ವೃತ್ತದ ಮೂಲಕಾಂಡವನ್ನು ಮೊದಲು ಸಿಮೆಂಟ್‍ನಲ್ಲಿ ನಿರ್ಮಿಸಿ, ಆ ನಂತರ ಇದರ ಕೊಂಬೆ ರೆಂಬೆಗಳನ್ನು ಉಕ್ಕಿನ ಪೈಪ್ ಮತ್ತು ತಗಡುಗಳನ್ನು ಬಳಸಿ ನಿರ್ಮಿಸಲಾಗಿದೆ. ಆಶೋಕ ವೃಕ್ಷದ ಪ್ರತಿ ಎಲೆಯ ದಪ್ಪ ಸುಮಾರು 2 ಮಿಲಿ ಮೀಟರ್, ಇದು, ಸೇ ಪೇಯಂಟ್ ಮಾಡಿ, ಅದರ ಮೇಲೆ ಅರಗಿನ ಕೋಟಿಂಗ್ ಮಾಡಲಾಗಿದೆ. ಇದರಿಂದಾಗಿ ಈ ಎಲೆಗಳ ಬಣ್ಣ, ಸಾಕಷ್ಟು ವರ್ಷಗಳ ಕಾಲ ಹಾಗೆಯೇ ಇರುತ್ತದೆ ಎಂದು ತಿಳಿಸಿದರು.
ಪ್ರತಿ ಮಾನಸ್ತಂಭದ ಎತ್ತರ ಇಪ್ಪತ್ತೊಂದು ಅಡಿ, ಇದರ ಮೇಲೆ ಸುಂದರ ಕೆತ್ತನೆಗಳಿವೆ. ಅಶೋಕ ವೃಕ್ಷದ ಬುಡದಲ್ಲಿರುವ ನಾಲು ಮಹಾವೀರ ತೀರ್ಥಂಕರರ ಪ್ರತಿಮೆಗಳು ಪ್ರತಿಯೊಂದು ಏಳು ಅಡಿ ಎತ್ತರವಿದೆ. ಈ ಸಮವಶರಣದ ಆವರಣದ ವ್ಯತ್ತಾಕಾರದ ಭಾಗದಲ್ಲಿ 250, ಇಂದ್ರ, ಇಂದ್ರಾಣಿ, 20 ವನ್ನು ಪ್ರಾಣಿಗಳ ಪ್ರತಿಮೆಗಳು ಜೋಗಳ ರೂಪದಲ್ಲಿವೆ ಎಂದು ಹೇಳಿದರು.
ಎಂಟು ಭೂಮಿಗಳೆಂದು ಪರಿಗಣಿಸಲಾಗಿದ್ದು, ಅದರಲ್ಲಿ ಚೈತ್ಯ ಭೂಮಿ ದೇವಸ್ಥಾನಗಳು, ಜಲ ಭೂಮಿ- ಕೆರೆಗಳು, ಲತಾ, ಭೂಮಿ, ಬಳ್ಳಿಗಳು, ಧ್ವಜ ಭೂಮಿ ಧ್ವಜಗಳು, ಮಂಟಪ ಭೂಮಿ- ಮಂಟಪಗಳು, ಕಲ್ಪವೃಕ್ಷ ಭೂಮಿ ವ್ಯಕ್ತಿಗಳು, ಭವನ ಭೂಮಿ-ಭವನಗಳು ಒಳಗೊಂಡಿವೆ. ಸಮವಶರಣದಲ್ಲಿ 12 ಸಭೆಗಳನ್ನು ಸ್ಥಾಪಿಸಲಾಗಿದ್ದು, ಅದಲ್ಲಿ ನಾಲ್ಕು ಇಂದ್ರರ ಸಭೆ, ನಾಲ್ಕು ಇಂದ್ರಾಣಿ, ಒಂದು ಮುನಿಗಳ ಸಭೆ, 1 ಪ್ರಾಣಿಗಳ ಸಭೆ, 1 ಅರ್ಯಿಕಾ ಮಾತಾಜಿಗಳ ಸಭೆ ಒಳಗೊಂಡಿರುತ್ತದೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನಮಂದಿರ ಸಮಿತಿಯ ಸುರೇಶ್‍ಕುಮಾರ್, ಬಾಹುಬಲಿ, ಪಾರ್ಶ್ವನಾಥ್, ಚಂದ್ರಕೀರ್ತಿ, ಜಿನೇಶ್, ಶೀತಲ್, ಕರ್ನಾಟಕ ಜೈನ ಅಸೋಸಿಯೇಷನ್ ನಿರ್ದೇಶಕ ಆರ್.ಜೆ. ಸುರೇಶ್, ಮತ್ತಿತರರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours