ಕೊಬ್ಬರಿಗೆ 20 ಸಾವಿರ ಬೆಲೆ ನಿಗದಿಗೆ ಒತ್ತಾಯ; ಡಿ.19ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆಗೆ ನಿರ್ಧಾರ

1 min read

 

ಕ್ವಿ.ಕೊಬ್ಬರಿಗೆ 20 ಸಾವಿರ ರೂ. ಬೆಲೆ ನಿಗದಿ ಪಡಿಸಲು ಒತ್ತಾಯ

Tumkurnews
ತುಮಕೂರು; ರೈತರು ಬಳಕೆ ಮಾಡುವ ಕೃಷಿ ಪರಿಕರಗಳನ್ನು ಜಿ.ಎಸ್.ಟಿಯಿಂದ ಹೊರಗಿಡಬೇಕು, ಕಿಸಾನ್ ಸಮ್ಮಾನ್ ನಿಧಿ ಮೊತ್ತವನ್ನು ದ್ವಿಗುಣಗೊಳಿಸುವುದು ಹಾಗೂ ಕೃಷಿ ಖರ್ಚನ್ನು ಗಣನೆಗೆ ತೆಗೆದುಕೊಂಡು, ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕು ಎಂದು ಒತ್ತಾಯಿಸಿ ಡಿ.19 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾರತೀಯ ಕಿಸಾನ್ ಸಂಘದಿಂದ ಬೃಹತ್ ರೈತರ ಘರ್ಜನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್ ತಿಳಿಸಿದರು.

ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಕಿಸಾನ್ ಸಂಘ 1979 ರಿಂದಲೂ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕೆಂದು ಆಗ್ರಹಿಸಿ, ಹೋರಾಟ ನಡೆಸುತ್ತಾ ಬಂದಿದ್ದೇವೆ. ಆದರೆ ಇದುವರೆಗೂ ಯಾವುದೇ ಸರಕಾರಗಳು ನಮ್ಮ ಮನವಿಗೆ ಸ್ಪಂದಿಸಿಲ್ಲ. ರೈತರು ಬೆಳೆಗೆ ವೆಚ್ಚದ ಆಧಾರದಲ್ಲಿ ಬೆಲೆ ನಿಗದಿ ಪಡಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಕೃಷಿ ಪರಿಕರಗಳಾದ ಗೊಬ್ಬರ, ಹನಿನೀರಾವರಿ ಪೈಪುಗಳು, ಬಿತ್ತನೆ ಬೀಜ, ಕೃಷಿ ಕಾರ್ಮಿಕರ ಕೂಲಿ, ಮೆಶಿನರಿಗಳ ಬಾಡಿಗೆ ಸೇರಿದಂತೆ ಎಲ್ಲವೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸರಕಾರಗಳು ಅವೈಜ್ಞಾನಿಕವಾದ ಎಂ.ಎಸ್‍ಪಿಗೆ ಜೋತು ಬಿದ್ದು, ಭಿಕ್ಷೆಯ ರೀತಿ, ಒಂದಿಷ್ಟು ರೂಪಾಯಿ ಹೆಚ್ಚಿಸಿ, ರೈತರಿಗೆ ಅಪಮಾನ ಮಾಡುತ್ತಿವೆ. ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ ರೈತರು ವೆಚ್ಚ ಮಾಡುವ ಬೆಳೆಯ ಅಧಾರದಲ್ಲಿ ಬೆಲೆ ನಿಗದಿಯಾದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಪಂಚರತ್ನ ಯಾತ್ರೆಗೆ ತೆರೆ ಎಳೆದ ಎಚ್.ಡಿ ಕುಮಾರಸ್ವಾಮಿ; HDK ಕೊಟ್ಟ ಕಾರಣಗಳೇನು?
ತುಮಕೂರು ಜಿಲ್ಲೆಯಲ್ಲಿ ಕೊಬ್ಬರಿ ಪ್ರಮುಖ ಬೆಳೆಯಾಗಿದ್ದು, ಇಂದು ಕ್ವಿಂಟಾಲ್ ಕೊಬ್ಬರಿ 11 ಸಾವಿರಕ್ಕೆ ಕುಸಿದಿದೆ. ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು ಸುಮಾರು 15000 ರೂಗಳ ಖರ್ಚು ಬರುತ್ತದೆ. ಹಾಗಾಗಿ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 20000 ಸಾವಿರ ರೂ ನಿಗದಿಪಡಿಸಬೇಕು. 2018ರ ರೈತರ 2 ಲಕ್ಷ ರೂಗಳವರೆಗಿನ ಸಾಲ ಮನ್ನಾ ಮಾಡಿದ್ದು, ಈ ಅವಧಿಯಲ್ಲಿ ಉಳಿಕೆ ರೈತರ ಸಾಲವನ್ನು ಮಾನ್ನಾ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿಗಳ ಫಸಲ್ ಭೀಮಾ ಯೋಜನೆಯನ್ನು ಎಲ್ಲಾ ಋತುಮಾನಗಳಲ್ಲಿಯೂ ಬೆಳೆಯುವ ಬೆಳೆಗಳಿಗೆ ವಿಸ್ತರಿಸಬೇಕು, ಹತ್ತಾರು ವರ್ಷಗಳಿಂದ ಸರಕಾರಿ ಭೂಮಿ ಉಳುಮೆ ಮಾಡುತ್ತಾ ಸರಕಾರದಿಂದ ಜಮೀನು ಮಂಜೂರಾಗಿರುವ ಕುಟುಂಬಗಳ ಹೆಸರಿಗೆ ಖಾತೆ ಮಾಡಿಕೊಡುವ ಜೊತೆಗೆ, ಪಹಣಿ ಮತ್ತು ಪೋಡಿ ಮಾಡಿಕೊಡಬೇಕೆಂಬುದು ನಮ್ಮ ಆಗ್ರಹವಾಗಿದೆ. ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿ.19ರಂದು ಬೃಹತ್ ರೈತ ಘರ್ಜನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಸುಮಾರು 25 ಲಕ್ಷಕ್ಕೂ ಅಧಿಕ ರೈತರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ತುಮಕೂರು ಜಿಲ್ಲೆಯಿಂದ 500ಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುವರು. ಈಗಾಗಲೇ ರೈಲ್ವೆ ಬುಕ್ಕಿಂಗ್ ಮಾಡಲಾಗಿದೆ ಎಂದು ವಿಜಯಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ಸುರೇಶ್, ಸದಸ್ಯ ಸಂತೋಷ ಹಾರೋಹಳ್ಳಿ, ಜಿಲ್ಲಾ ಕಾರ್ಯದರ್ಶಿ ಸಿ.ಎಸ್.ಗಂಗಾಧರಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಡಾ.ಮೋಹನ್, ಕೋಶಾಧ್ಯಕ್ಷ ಮಹಾಲಿಂಗಪ್ಪ, ಮಹಿಳಾ ಪ್ರಮುಖ ನವಿನಾ ಸದಾಶಿವಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours