Tumkurnews
ತುಮಕೂರು; ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಮಾಜಿ ಶಾಸಕ ಸುರೇಶ್‍ಗೌಡ ಗೆದ್ದೇ ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ. ಸುರೇಶ್‍ಗೌಡ ನಿರ್ಮಿಸಿರುವ ಗ್ರಾಮಾಂತರ ಬಿಜೆಪಿ ಕಚೇರಿ ಶಕ್ತಿಸೌಧವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
2023ರ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ. ವಿಶಿಷ್ಟವಾದ ವ್ಯಕ್ತಿತ್ವ ಹೊಂದಿರುವ ಸುರೇಶ್‍ಗೌಡ ಅವರು ಶಾಶ್ವತವಾಗಿ ಶಾಸಕರಾಗುವಂತಹ ಕೆಲಸವನ್ನು ಈ ಕ್ಷೇತ್ರದಲ್ಲಿ ಮಾಡಿದ್ದಾರೆ ಎಂದರು.
ಸ್ವಚ್ಛವಾದ ಹೃದಯ, ಕೊಟ್ಟ ಮಾತಿನಂತೆ ನಡೆಯುವ ಧೀಮಂತಿಕೆ ಸುರೇಶ್‍ಗೌಡ ಅವರಲ್ಲಿದೆ. ಅವರು ಮಾಡಿರುವ ಕೆಲಸ ನೋಡಿದರೆ 2008 ರಿಂದ 13 ರವರೆಗೆ ಅವರು ಶಾಶ್ವತ ಶಾಸಕರಾಗುವ ಕೆಲಸ ಮಾಡಿದ್ದಾರೆ. ವಿದ್ಯುತ್ ಶಕ್ತಿ ಗ್ರಿಡ್, ಶಾಲೆಗಳು, ರೈತರಿಗೆ ಉಪಯುಕ್ತವಾಗುವ ಪಂಪ್ ಸೆಟ್‍ಗಳಿಗೆ ವಿದ್ಯುತ್ ಪರಿವರ್ತಕ ಅಳವಡಿಕೆ ಸೇರಿದಂತೆ ಸರ್ಕಾರದ ಕಾರ್ಯಕ್ರಮವನ್ನು ಜನರಿಗೆ ಮುಟ್ಟಿಸುವ ಹಂಬಲ ಅವರಿಗಿದೆ ಎಂದರು. ತಾತ್ಕಾಲಿಕವಾಗಿ ಅವರು ವಿಧಾನಸೌಧದಲ್ಲಿ ಇರದಿದ್ದರೂ ಕ್ಷೇತ್ರದ ಪ್ರತಿಯೊಬ್ಬ ಮತದಾರನ ಮನದಲ್ಲಿದ್ದಾರೆ. ಸೋತರೂ ಮನೆಯಲ್ಲಿ ಕುಳಿತಿಲ್ಲ ಎಂದು ಅವರು ಹೇಳಿದರು.
ಪಂಚರತ್ನ ಯಾತ್ರೆಗೆ ತೆರೆ ಎಳೆದ ಎಚ್.ಡಿ ಕುಮಾರಸ್ವಾಮಿ; HDK ಕೊಟ್ಟ ಕಾರಣಗಳೇನು?
ಇಪ್ಪತ್ತೈದು ಸಾವಿರ ಅಂತರದಲ್ಲಿ ಸುರೇಶ್‍ಗೌಡ ಗೆಲ್ಲುತ್ತಾರೆ. ಇದನ್ನು ತಡೆಯಲು ಯಾರಿಗೂ ಶಕ್ತಿ, ತಾಕತ್ ಇಲ್ಲ. ಅಭಿವೃದ್ಧಿ ಚಕ್ರ ನಿರಂತರವಾಗಿ ತಿರುಗಬೇಕು. ನಿಮ್ಮ ಬದುಕಿನ ಗುಣಮಟ್ಟ ಹೆಚ್ಚಾಗಬೇಕು. ಸರ್ಕಾರದ ಯೋಜನೆ ಕಟ್ಟಕಡೆಯ ವ್ಯಕ್ತಿಗೂ ಮುಟ್ಟಬೇಕೆಂದರೆ ಸುರೇಶ್‍ಗೌಡರ ಕೈ ಹಿಡಿಯಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಸುರೇಶ್‍ಗೌಡ ಮಾತನಾಡಿ, ಗ್ರಾಮಾಂತರ ಕ್ಷೇತ್ರದ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿಗೊಳಿಸಬೇಕು. ಹೆಬ್ಬೂರು-ಗೂಳೂರು ಹೋಬಳಿಗಳ ಕೆರೆಗಳಿಗೆ ನೀರು ತುಂಬಿಸಲು ಶಾಶ್ವತ ನೀರಾವರಿ ಯೋಜನೆ ಜಾರಿಗೆ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಬಿಲ್ ಕೌಂಟರ್ ಇಲ್ಲದ ರಾಜ್ಯದ ಮೊದಲ ಆಸ್ಪತ್ರೆ ಉದ್ಘಾಟನೆ; ನಯಾ ಪೈಸೆ ಪಡೆಯಲ್ಲ ಎಂದ ಸಿಎಂ!
ವೃಷಭಾವತಿಯಿಂದ ತುಮಕೂರು ಗ್ರಾಮಾಂತರ ಪ್ರದೇಶದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಈ ಎರಡು ಯೋಜನೆಗಳನ್ನು ಇನ್ನೊಂದು ತಿಂಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದು ಕೋರಿದರು.
ದಿನದ 24 ಗಂಟೆಯೂ ಗ್ರಾಮಾಂತರ ಕ್ಷೇತ್ರ ಜನರಿಗಾಗಿ ನಮ್ಮ ಕಚೇರಿ ತೆರೆದಿರುತ್ತದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಖಡ್ಗ ನೀಡಿ ಗೌರವಿಸಲಾಯಿತು. ನಂತರ ಮುಖ್ಯಮಂತ್ರಿಗಳು ಆ ಖಡ್ಗವನ್ನು ಗ್ರಾಮದೇವತೆಗೆ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಚಿವರಾದ ಗೋವಿಂದ ಕಾರಜೋಳ, ಗೋಪಾಲಯ್ಯ, ಬಿ.ಸಿ. ನಾಗೇಶ್, ಶಾಸಕರಾದ ಜ್ಯೋತಿಗಣೇಶ್, ಡಾ. ರಾಜೇಶ್‍ಗೌಡ ಮತ್ತಿತರರು ಉಪಸ್ಥಿತರಿದ್ದರು.
+ There are no comments
Add yours