ತುಂಬಿರುವ ಕೆರೆಗಳು ಒಡೆಯುವ ಭೀತಿ; ಅಧಿಕಾರಿಗಳನ್ನು ಅಲರ್ಟ್ ಮಾಡಿದ ಡಿಸಿ

1 min read

 

Tumkurnews
ತುಮಕೂರು; ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಹುತೇಕ ಕೆರೆಗಳು ತುಂಬಿದ್ದು, ನೀರು ಭರ್ತಿಯಾಗಿ ಒಡೆದು ಹೋಗುವಂತಹ ಅಪಾಯಕಾರಿ ಪರಿಸ್ಥಿತಿ ಇರುವಂತಹ ಕೆರೆಗಳ ಬಗ್ಗೆ ಪಿಡಿಓಗಳು ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಂತಹ ಅಪಾಯಕಾರಿ ಪ್ರಕರಣಗಳಿದ್ದಲ್ಲಿ ತಕ್ಷಣವೇ ಸಣ್ಣ ನೀರಾವರಿ, ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಆಥವಾ ತಮಗೆ ಅಥವಾ ಸಿಇಓ ಅವರಿಗೆ ತಿಳಿಸಬೇಕು ಎಂದರು.
ಸ್ಮಶಾನ ಭೂಮಿಯನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ತಹಶೀಲ್ದಾರರು ಈ ನಿಟ್ಟಿನಲ್ಲಿ ಗ್ರಾಮ ಸಹಾಯಕರು, ಪಿಡಿಓ, ಆರ್. ಐ ಅವರುಗಳಿಗೆ ಜವಾಬ್ದಾರಿಯನ್ನು ವಿಧಿಸಿ ಪ್ರಕ್ರಿಯೆ ಪೂರ್ಣಗೊಳಿಸಿ, ಸಹಿ ಮಾಡುವ ಮೂಲಕ ವರದಿಯನ್ನು ಕೊಡಬೇಕೆಂದು ಸೂಚಿಸಿದರು.
ಎಸ್‍ಡಬ್ಲ್ಯೂಎಂ ನಿವೇಶನ ಗುರುತಿಸುವಿಕೆ ಇನ್ನೂ ಬಾಕಿ ಇದ್ದು, ಇಓಗಳು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು. ಅಂಗನವಾಡಿಗಳಿಗೆ ನಿವೇಶನ ಗುರುತಿಸುವ ಸಂಬಂಧ ಸರ್ಕಾರಿ ಹಾಸ್ಟೆಲ್ ಅಥವಾ ಸಮುದಾಯ ಭವನಗಳ ಬಳಿ ನಿವೇಶನ ಗುರುತಿಸಬೇಕು ಮತ್ತು ವಾರಕ್ಕೆ 2-3 ನಿವೇಶನಗಳ ಖಾತೆ ಮಾಡುವ ಗುರಿಯನ್ನು ಅಧಿಕಾರಿಗಳು ಇಟ್ಟುಕೊಳ್ಳಬೇಕು ಎಂದು ಅವರು ತಿಳಿಸಿದರು.
13-01-2022 ರಿಂದ 08-11-2022ರವರೆಗೆ ಕರಡು ಮತದಾರರ ವಿಶೇಷ ಸಂಕ್ಷಿಪ್ತ ಪಟ್ಟಿ ಪ್ರಕಟಣೆಗೂ ಮುನ್ನ ಇದ್ದಂತಹ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಾಕಿ ಪ್ರಕರಣಗಳು ಯಾವುದೂ ಇರಬಾರದು. ಉಪವಿಭಾಗಾಧಿಕಾರಿಗಳು ಮತದಾರರ ಪಟ್ಟಿಯನ್ನು ಅಪ್‍ಡೇಟ್ ಮಾಡಬೇಕು. ಮತದಾರರ ಪಟ್ಟಿಯ ಸಂಪೂರ್ಣ ಹೊಣೆಗಾರಿಕೆ ಇಆರ್’ಓ ಜವಾಬ್ದಾರಿಯಾಗಿರುತ್ತದೆ. ಮನೆ-ಮನೆ ಭೇಟಿ ಶೇ. 100ರಷ್ಟು ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು. ಕಂದಾಯ ಗ್ರಾಮಕ್ಕೆ ಸಂಬಂಧಿಸಿದಂತೆ 175 ಪ್ರಸ್ತಾವನೆಗಳು ಬಾಕಿ ಇದ್ದು, ಉಪವಿಭಾಗಾಧಿಕಾರಿಗಳು ಅಂತಿಮ ಅಧಿಸೂಚನೆ ಮಾಡಿದ್ದಲ್ಲಿ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಗತ್ಯ ವಸ್ತುಗಳ ದಾಸ್ತಾನು ಕಾಯ್ದೆಯಡಿ ದಾಖಲಾಗುವ 1 ಲಕ್ಷಕ್ಕಿಂತ ಕಡಿಮೆ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳು ಮಧ್ಯಂತರ ಆದೇಶವನ್ನು ಹೊರಡಿಸಬೇಕುಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹೋರ್ಡಿಂಗ್ಸ್ ಮತ್ತು ಬ್ಯಾನರ್’ಗಳನ್ನು ಕಾರ್ಯಕ್ರಮ ಮುಗಿದ ಮರುದಿನವೇ ತೆರವುಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮತ್ತು ಆರ್‍ಟಿಐ ಮೇಲ್ಮನವಿ ಪ್ರಕರಣಗಳಲ್ಲಿ ಮೇಲ್ಮನವಿ ಪ್ರಾಧಿಕಾರಿಯಾದಂತಹ ಜಿಲ್ಲಾಧಿಕಾರಿಗಳು ಹೊರಡಿಸುವ ಆದೇಶಗಳನ್ನು ಯಥಾವತ್ತಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಭೂಮಿ, ಆರ್.ಆರ್‌.ಟಿ ಕರಕ್ಷನ್ಸ್, ಜೆಇ ಸ್ಲಿಪ್, ವಾಜಪೇಯಿ ವಸತಿ, ಅಂಬೇಡ್ಕರ್ ಅವಾಸ್ ಯೋಜನೆ ಹಾಗೂ ನಗರೋತ್ಥಾನ ಯೋಜನೆಗಳ ಕುರಿತು ಜಿಲ್ಲಾಧಿಕಾರಿಗಳು ಪ್ರಗತಿ ಪರಿಶೀಲನೆಯನ್ನು ನಡೆಸಿದರು.
ಸಭೆಯಲ್ಲಿ ಜಿಪಂ ಸಿಇಒ ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಡಿಡಿಎಲ್‍ಆರ್ ಸುಜಯ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours