ತುಮಕೂರಿನಲ್ಲಿ‌ ಮತ್ತೆ ಮುನ್ನೆಲೆಗೆ ಬಂದ ಅಹಿಂದ ನಾಯಕತ್ವ; ವೇದಿಕೆಯಾದ ಅಂಬೇಡ್ಕರ್ ಪರಿನಿಬ್ಬಾಣ ದಿನ

1 min read

 

ಸಂವಿಧಾನ ಬದಲಾಯಿಸುತ್ತೇವೆ ಎಂದವರ ಉಸಿರು ನಿಂತು ಹೋಗಿದೆ; ಧನಿಯಾ ಕುಮಾರ್

Tumkurnews
ತುಮಕೂರು; ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿಯು ನಗರದ ಟೌನ್ ಹಾಲ್ ಮುಂಭಾಗದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಆಯೋಜಿಸಿತ್ತು. ಈ ಆಚರಣೆಯಲ್ಲಿ ಅಹಿಂದ ನಾಯಕರು ಒಟ್ಟಾಗಿ ಕಾಣಿಸಿಕೊಂಡು ಹೊಸ ಸಂಘಟನಾತ್ಮಕ ಬದಲಾವಣೆಯ ಸಂದೇಶ ರವಾನಿಸಿದ್ದು ವಿಶೇಷವಾಗಿತ್ತು. ಅಹಿಂದ ನಾಯಕರು ಅಂಬೇಡ್ಕರ್ ಸ್ಮರಣೆಯಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡದ್ದು ಮುಂದಿನ ‌ದಿನಗಳಲ್ಲಿ ಅಹಿಂದ ನಾಯಕತ್ವ ಜಿಲ್ಲೆಯಲ್ಲಿ ಮತ್ತಷ್ಟು ಗಟ್ಟಿಯಾಗುವ ಮುನ್ಸೂಚನೆ ‌ಎಂದು ಹಲವರು ವ್ಯಾಖ್ಯಾನಿಸಿದ್ದಾರೆ. ಅಹಿಂದ ನಾಯಕರ ಈ ಒಗ್ಗಟ್ಟು ಪರಿನಿಬ್ಬಾಣ ದಿನಕ್ಕಷ್ಟೇ ಸೀಮಿತವಾಗುತ್ತದೆಯೇ ಅಥವಾ ಜಿಲ್ಲೆಯ ಹೊಸ ರಾಜಕೀಯ ಶಕ್ತಿಯಾಗಿ ಬದಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ ಪರಿನಿಬ್ಬಾಣ ದಿನ ಅಹಿಂದ ನಾಯಕತ್ವ ಮುನ್ನೆಲೆಗೆ ಬಂದಿರುವುದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಕಾರ್ಯಕ್ರಮ ವರದಿ;
ತುಮಕೂರು; ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎನ್ನುವ ಪರಿಕಲ್ಪನೆಯ ಮೂಲಕ ಇಡೀ ದೇಶದ ಜನರಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಿತ್ತಿದ್ದವರು ಡಾ.ಬಿ.ಆರ್ ಅಂಬೇಡ್ಕರ್ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆತೀಕ್ ಅಹಮದ್ ತಿಳಿಸಿದರು.
ನಗರದ ಟೌನ್‍ಹಾಲ್ ಮುಂಭಾಗದಲ್ಲಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ್ ಹಾಲಪ್ಪ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಗೂ ಹಕ್ಕುಗಳ ಜೊತೆಗೆ, ಕರ್ತವ್ಯವನ್ನು ನೀಡಿ, ಶ್ರೀಮಂತ, ಬಡವ ಎಂಬ ಭೇಧಭಾವವಿಲ್ಲದೆ ಬದುಕುವಂತಹ ಸಂವಿಧಾನ ಬದ್ದ ಹಕ್ಕು ನೀಡಿದ್ದು ಡಾ.ಬಿ.ಆರ್.ಅಂಬೇಡ್ಕರ್. ಅಂತಹ ವ್ಯಕ್ತಿಯನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳುವುದರ ಜೊತೆಗೆ, ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವುದರ ಮೂಲಕ ಅವರ ದಾರಿಯಲ್ಲಿ ನಡೆಯುವ ಮೂಲಕ ದೇಶದ ಪ್ರಗತಿಯಲ್ಲಿ ಹೆಜ್ಜೆ ಹಾಕೋಣ ಎಂದದರು.
ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ, ಬಾಬಾ ಸಾಹೇಬರು ಒಂದು ಜಾತಿಗೆ ಸಿಮೀತವಾಗಿ ಸಂವಿಧಾನವನ್ನು ಬರೆದಿಲ್ಲ. ಇಡೀ ದೇಶದ ಎಲ್ಲ ವರ್ಗಗಳ ಹಿತವನ್ನು ಕಾಪಾಡುವ ಅಂಶವನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಈ ಮೊದಲು ಅಂಬೇಡ್ಕರ್ ಎಂದರೆ ಮೂಗು ಮುರಿಯುತ್ತಿದ್ದ ಜನರು, ಇಂದು ಓಟಿಗಾಗಿ ವಿಧಿಯಿಲ್ಲದೆ ಅಂಬೇಡ್ಕರ್ ಫೋಟೋ ಹಿಡಿದು ಓಡಾಡುತ್ತಿದ್ದಾರೆ. ಸಂವಿಧಾನ ಬದಲಾಯಿಸಲೇ ಬಂದಿದ್ದೇವೆ ಎಂದು ಹೇಳುತಿದ್ದ ನಾಯಕರ ಉಸಿರು ನಿಂತು ಹೋಗಿದೆ. ನಿಜವಾಗಿಯೂ ಇವರು ದೇಶದ ಜನರಿಗೆ ಅನುಕೂಲ ಮಾಡಿದ್ದರೇ ಅಂಬೇಡ್ಕರ್ ಅವರ ಹೆಸರೆತ್ತದೆ ಮತ ಕೇಳಲಿ ಎಂದು ಸವಾಲು ಹಾಕಿದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, ಅಂಬೇಡ್ಕರ್ ಎಂಬುದು ಒಂದು ವ್ಯಕ್ತಿಯ ಹೆಸರಲ್ಲ. ಅದೊಂದು ಶಕ್ತಿ. ವಿವಿಧೆತೆಯಲ್ಲಿ ಏಕತೆಯನ್ನು ಹೊಂದಿರುವ ಬಹುತ್ವದ ಭಾರತಕ್ಕೆ ಸರಿ ಹೊಂದುವಂತಹ ಸಂವಿಧಾನವನ್ನು ತಮ್ಮ ಅಪಾರ ಬುದ್ದಿವಂತಿಕೆಯಿಂದ ನೀಡಿದ್ದಾರೆ. ಬಡವರು, ದೀನದಲಿತರು, ಹಿಂದುಳಿದವರು ಸಮಾನವಾಗಿ ಬದುಕುವ ಹಕ್ಕು ಕಲ್ಪಿಸಿರುವ ಸಂವಿಧಾನವನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, ಇಂದು ವಿವಿಧ ಸಂಘಟನೆಗಳು ಒಗ್ಗೂಡಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಮತ್ತು ದಸಂಸ ನೇತೃತ್ವದಲ್ಲಿ ಏರ್ಪಡಿಸಿರುವ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಆಚರಿಸುತ್ತಿರುವುದು ಒಂದು ಹೊಸ ಸಂದೇಶವನ್ನು ನಾಡಿನ ಜನತೆಗೆ ನೀಡಿದೆ. ನಿಧಾನವಾಗಿಯಾದರೂ ಹಿಂದುಳಿದವರ್ಗದವರಲ್ಲಿ ಅಂಬೇಡ್ಕರ್ ಅವರ ಬಗ್ಗೆ ಇದ್ದ ತಪ್ಪು ಭಾವನೆ ಹೋಗಿ, ಪೂಜ್ಯ ಭಾವನೆ ಮೂಡುತ್ತಿರುವುದು ಸಂತೋಷದ ಸಂಗತಿ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಂತಹ ಕಾರ್ಯಕ್ರಮಗಳು ಜರಗಲಿವೆ ಎಂದು ತಿಳಿಸಿದರು.
ಮಾಜಿ ಮೇಯರ್ ಗೀತಾ ರುದ್ರೇಶ್, ಮುಖಂಡರಾದ ಪ್ರಸನ್ನಕುಮಾರ್ ಗುಬ್ಬಿ, ಪ್ರತಾಪ ಮದಕರಿ, ಮರಿಚನ್ನಮ್ಮ, ಪುರುಷೋತ್ತಮ್, ಎಚ್.ಸಿ ಹನುಮಂತರಾಯಪ್ಪ, ರೇವಣ್ಣಸಿದ್ದಯ್ಯ, ಎನ್.ಶ್ರೀನಿವಾಸ್, ವಕೀಲ ನಾಗೇಶ್, ಎಂ.ರಾಜೇಂದ್ರ, ಟಿ.ಸಿ.ಸುರೇಶ್, ಎ.ರಂಜನ್, ಪಿ.ಶಿವಾಜಿ, ಗುರುಪ್ರಸಾದ್, ಜಯಲಕ್ಷ್ಮಮ್ಮ, ಎಸ್.ರಾಮಚಂದ್ರರಾವ್, ಲಕ್ಷ್ಮಿನಾರಾಯಣ್, ಮಾರುತಿ ಸಿ., ಸುನಿಲ್ ಏ., ಚಂದ್ರಶೇಖರ್, ಬಾಲರಾಜು, ಗಿರೀಶ್, ರಘಪ್ರಸಾದ್, ಮನೋಜ್ ಟಿ., ನಿತೀನ್, ಕುಶಾಲ್, ಗಂಗಾಧರ್, ಶಿವಣ್ಣ ರಂಗಸ್ವಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours