ಪಂಚರತ್ನ ಯಾತ್ರೆಗೆ ಕಲ್ಪತರು ನಾಡಿನಲ್ಲಿ ಅಭೂತಪೂರ್ವ ಸ್ವಾಗತ; HDK ನೀಡಿದ‌ ಭರವಸೆಗಳೇನು? ಇಲ್ಲಿದೆ ನೋಡಿ

1 min read

Tumkurnews
ತುಮಕೂರು; ಪಂಚ ಯೋಜನೆಗಳನ್ನು ಮುಂದಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಜೆಡಿಎಸ್ ಪಂಚರತ್ನ ಯಾತ್ರೆಗೆ ಕಲ್ಪತರು ನಾಡಿನಲ್ಲಿ ಗುರುವಾರ ಭವ್ಯ ಸ್ವಾಗತ ದೊರೆಯಿತು.
ಶಿಕ್ಷಣವೇ ಅಧುನಿಕ ಶಕ್ತಿ, ವಸತಿಯ ಆಸರೆ, ಆರೋಗ್ಯ ಸಂಪತ್ತು, ರೈತ ಚೈತನ್ಯ, ಯುವ ನವ ಮಾರ್ಗ ಹಾಗೂ ಮಹಿಳಾ ಸಬಲೀಕರಣ ಈ ಪಂಚ ಯೋಜನೆ ಜಾರಿಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡಿರುವ ಜೆಡಿಎಸ್ ಪಂಚರತ್ನ ಯಾತ್ರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಗಿಸಿ ಇಂದು ಕಲ್ಪತರುನಾಡು ಪ್ರವೇಶಿಸುತ್ತಿದ್ದಂತೆ ನಗರ ಹೊರವಲಯದ ಜಾಸ್‍ಟೋಲ್ ಬಳಿ ಜೆಡಿಎಸ್ ಕಾರ್ಯಕರ್ತರು ಅಭೂತ ಪೂರ್ವ ಸ್ವಾಗತ ನೀಡಿದರು.
ಜಾಸ್‍ಟೋಲ್‍ನಿಂದ ಸಿದ್ದಗಂಗಾ ಮಠಕ್ಕೆ ಪಂಚರತ್ನ ರಥಯಾತ್ರೆ ತೆರಳಿತು. ಸಿದ್ದಗಂಗಾ ಮಠದಲ್ಲಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕರುಗಳು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಶ್ರೀಗಳ ಗದ್ದುಗೆ ದರ್ಶನ ಪಡೆದ ಬಳಿಕ ಆರಂಭಗೊಂಡ ಪಂಚರತ್ನ ರಥಯಾತ್ರೆ ಕ್ಯಾತ್ಸಂದ್ರ, ಬಟವಾಡಿ, ಗಂಗೋತ್ರಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಪಕ್ಷ ಕೈಗೊಂಡಿರುವ ಪಂಚರತ್ನ ಯೋಜನೆಗಳನ್ನು ಜನರ ಮುಂದಿಟ್ಟು, ಈ ಯೋಜನೆಗಳ ಅನುಷ್ಠಾನವಾಗಬೇಕಾದರೆ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವಂತೆ ಮನವಿ ಮಾಡಲಾಯಿತು.
ಕ್ಯಾತ್ಸಂದ್ರದ ಸಂತೆಮೈದಾನಕ್ಕೆ ರಥಯಾತ್ರೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಯೋಜನೆ, ವಸತಿ ಇಲ್ಲದವರಿಗೆ ಸರ್ಕಾರದಿಂದಲೇ ವಸತಿ ಕಟ್ಟಿಸಿಕೊಂಡುವ ಯೋಜನೆ , ಪ್ರತಿಯೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 24×7 ಕಾರ್ಯನಿರ್ವಹಿಸುವ ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣದ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.
ಆಧುನಿಕ ತಂತ್ರಜ್ಞಾನದ ಕೃಷಿ ಪದ್ದತಿ ಅಳವಡಿಕೆ, ಸರಿಯಾದ ಬೆಳೆ ಶೇಖರಣಾ ವ್ಯವಸ್ಥೆ ಹಾಗೂ ಲಾಭದಾಯಕವಾದ ಮಾರ್ಗ ವ್ಯವಸ್ಥೆ, ಯುವಜನತೆ ಮತ್ತು ಮಹಿಳೆಯರಿಗೆ ಉದ್ಯೋಗ ಪಡೆಯಲು ಅಗತ್ಯ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಸಲುವಾಗಿ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತಂದರೆ ನಮ್ಮ ಪಂಚರತ್ನ ಯೋಜನೆಗಳು ಸಾಕಾರಗೊಳ್ಳಲಿವೆ ಎಂದರು.
ನಮ್ಮ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಹಲವಾರು ಹಳ್ಳಿಗಳಲ್ಲಿ ಬಸ್ ಸೌಲಭ್ಯವಿಲ್ಲ. ವಿದ್ಯಾರ್ಥಿಗಳಿಗಾಗಿ ಜಾರಿಗೊಳಿಸಿದ್ದ ಸೈಕಲ್ ವಿತರಣೆಯನ್ನು ನಿಲ್ಲಿಸಲಾಗಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಮತ್ತೆ ಸಾಲಗಾರರಾಗುತ್ತಿದ್ದಾರೆ. ರೈತರು ಸಾಲಗಾರರಾಗದಂತೆ ಕಾರ್ಯಕ್ರಮ ರೂಪಿಸುವ ಚಿಂತನೆ ಇದೆ. ಸರ್ಕಾರದಿಂದ ಕೃಷಿ ವೆಚ್ಚ ಭರಿಸುವುದು, ರೈತ ಬೆಳೆದ ಬೆಳೆಗಳ ಸಂರಕ್ಷಣೆಗಾಗಿ ಶೈತ್ಯಾಗಾರ ಸ್ಥಾಪನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ರೈತರಿಗಾಗಿ ಯೋಜಿಸಲಾಗಿದೆ ಎಂದು ಅವರು ಹೇಳಿದರು.
ಬಟವಾಡಿ ಸರ್ಕಲ್;
ಕ್ಯಾತ್ಸಂದ್ರ ಸಂತೆಮೈದಾನದಿಂದ ಬಟವಾಡಿ ಸರ್ಕಲ್‍ಗೆ ರಥಯಾತ್ರೆ ತೆರಳಿದ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುವುದು. ಮಹಿಳೆಯರ ಆರ್ಥಿಕ ಸಬಲತೆಗೂ ಒತ್ತು ನೀಡುವುದು ನಮ್ಮ ಪಕ್ಷದ ಗುರಿಯಾಗಿದೆ ಎಂದು ತಿಳಿಸಿದರು.
ನನ್ನ ಆರೋಗ್ಯಕ್ಕಿಂತ ನಾಡಿನ ಜನರ ಹಿತ ಮುಖ್ಯ. ಹಾಗಾಗಿ ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. 21ನೇ ಶತಮಾನದಲ್ಲೂ ಬಡತನ ನಿರ್ಮೂಲನೆಯಾಗಿಲ್ಲ. ಈಗ ನರೇಂದ್ರ ಮೋದಿ ಅವರು ಬಂದು ಅಚ್ಛೇದಿನ ಎಂದು ಹೇಳುತ್ತಲೇ 8 ವರ್ಷವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಂಚರತ್ನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ನಮ್ಮ ಮುಖ್ಯ ಧ್ಯೇಯವಾಗಿದೆ. ಇದಕ್ಕೆ ನಾಡಿನ ಜನರ ಆಶೀರ್ವಾದ ಬೇಕಾಗಿದೆ ಎಂದು ಮನವಿ ಮಾಡಿದರು.
ಪ್ರತಿ ದಿನ ನನ್ನ ಮನೆಯ ಬಳಿ ಶಾಲಾ ಮಕ್ಕಳನ್ನು ಓದಿಸಲು ಹಣದ ತೊಡಕಿದೆ, ಹಣದ ಸಹಾಯ ಮಾಡುವಂತೆ ಜನ ಬರುತ್ತಾರೆ. ಅಲ್ಲದೆ ದೊಡ್ಡ ದೊಡ್ಡ ಕಾಯಿಲೆಗಳಿಗೆ ಹಣ ಭರಿಸಲಾಗದೆ ಕಣ್ಣಲ್ಲಿ ನೀರು ಹಾಕಿಕೊಂಡು ಬರುತ್ತಾರೆ. ಇದನ್ನೆಲ್ಲ ದೂರ ಮಾಡುವುದೇ ಪಂಚರತ್ನ ಯೋಜನೆಯ ಉದ್ದೇಶವಾಗಿದೆ ಎಂದರು.
ನಾಡಿನ ಅತ್ಯಂತ ಬಡವರ ಬದುಕಿಗೆ ಪಂಚರತ್ನ ಕಾರ್ಯಕ್ರಮಗಳು ಆಸರೆಯಾಗಲಿವೆ. ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಓದಿಸಲು ಸಾವಿರಾರು ರೂ. ಹಣ ಕಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಗುಣಮಟ್ಟದ ಸರ್ಕಾರಿ ಶಾಲೆಗಳನ್ನು ನಿರ್ಮಿಸಬೇಕು ಎಂಬುದು ಪಂಚರತ್ನ ಯೋಜನೆಯ ಕಾರ್ಯಕ್ರಮದ ಪ್ರಮುಖ ಅಂಶವಾಗಿದೆ ಎಂದು ವಿವರಿಸಿದರು.
ರಾಜ್ಯದ 6 ಸಾವಿರ ಗ್ರಾಮ ಪಂಚಾಯ್ತಿಗಳಲ್ಲೂ ಸರ್ಕಾರಿ ಶಾಲೆಗಳು ನಿರ್ಮಾಣವಾಗಿ ಉಚಿತವಾಗಿ ತಾರತಮ್ಯವಿಲ್ಲದೆ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೋವಿಡ್ ಸಂದರ್ಭದಲ್ಲಿ ಹಾಸಿಗೆಯಿಲ್ಲ, ವೆಂಟಿಲೇಟರ್ ಇಲ್ಲ ಎಂದು ಜನರನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಯಿತು. ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ 3 ಮಂದಿ ತಜ್ಞ ವೈದ್ಯರು, 30 ಸಿಬ್ಬಂದಿಯೊಂದಿಗೆ 30 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣದ ಗುರಿ ಹೊಂದಲಾಗಿದೆ. ಅಲ್ಲದೆ ವೈದ್ಯರಿಗೆ ತಗುಲುವ ವೆಚ್ಚವನ್ನು ಸಹ ಭರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಬಿಪಿಎಲ್ ಕಾರ್ಡ್’ದಾರರ ಕುಟುಂಬಗಳ ಆರೋಗ್ಯ ಸೇವೆಗೆ ಸರ್ಕಾರದಿಂದಲೇ ಹಣ ಪಾವತಿಸಬೇಕು. ಯಾವುದೇ ಕಾರಣಕ್ಕೂ ಬಡವರು ಮನೆಮಠ, ಆಸ್ತಿಪಾಸ್ತಿ ಮಾರುವಂತಾಗಬಾರದು. ಇದು ನಮ್ಮ ಪಕ್ಷದ ಧ್ಯೇಯವಾಗಿದೆ ಎಂದ ಅವರು, ಬಿಜೆಪಿ ಪಕ್ಷಕ್ಕೆ ಮತ ಹಾಕುವವರು ಇದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರ ಆರೋಗ್ಯ ಸೇವೆಗೆ 40 ಲಕ್ಷ ರೂ.ಗಳ ವಿಮೆ ಮಾಡಿಸಿ ಸರ್ಕಾರದಿಂದಲೇ ಆರೋಗ್ಯ ಸೇವೆಗೆ ಹಣ ಭರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಯುವಕರು, ಹೆಣ್ಣು ಮಕ್ಕಳು ಉದ್ಯೋಗವಿಲ್ಲದ ನಿರುದ್ಯೋಗಿಗಳಾಗಿದ್ದಾರೆ. ಹಾಗಾಗಿ ಸ್ವಯಂ ಉದ್ಯೋಗಿಗಳಾಗಲು ಸರ್ಕಾರದಿಂದಲೇ ಆರ್ಥಿಕ ನೆರವು ನೀಡಿ ಉದ್ಯೋಗಿಗಳನ್ನಾಗಿ ಮಾಡುವುದು ಸಹ ನಮ್ಮ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ನಂತರ ನಗರದ ವಿವಿಧೆಡೆ ಸಂಚರಿಸಿದ ಪಂಚರತ್ನ ರಥಯಾತ್ರೆಯಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ. ಆಂಜಿನಪ್ಪ, ಮಾಜಿ ಸಚಿವ ಡಿ. ನಾಗರಾಜಯ್ಯ, ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ, ಸುರೇಶ್‍ಬಾಬು, ಜೆಡಿಎಸ್ ಮುಖಂಡರಾದ ಗೋವಿಂದರಾಜು, ಬೆಳ್ಳಿ ಲೋಕೇಶ್, ಉಪಮೇಯರ್ ನರಸಿಂಹಮೂರ್ತಿ, ಶಶಿಕಲಾ ಗಂಗಹನುಮಯ್ಯ, ಟಿ.ಆರ್. ನಾಗರಾಜು ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರುಗಳು ಭಾಗವಹಿಸಿದ್ದರು.

About The Author

You May Also Like

More From Author

+ There are no comments

Add yours