ಮಹಿಳೆಯನ್ನು ಕೊಲೆ ಮಾಡಿ ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ
Tumkurnews
ತುಮಕೂರು; ಮಹಿಳೆಯೋರ್ವಳನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿ ಮನೆಯ ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿದ್ದ ಅಪರಾಧಿಗೆ ಜಿಲ್ಲಾ ಆರನೇ ಅಧಿಕ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಎ.ಕೆ ಕಾವಲು ಗ್ರಾಮದ ಹನುಮಂತೇಗೌಡ ಎಂಬಾತ ತಾಲೂಕಿನ ಉಳ್ಳೇನಹಳ್ಳಿ ಗ್ರಾಮದ ರಾಜಮ್ಮ ಎಂಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಸದರಿ ರಾಜಮ್ಮ ಬೇರೆ ಪುರುಷರೊಂದಿಗೆ ಒಡನಾಟ ಹೊಂದಿದ್ದಾಳೆಂದು ಕ್ಯಾತೆ ತೆಗೆದು ಹನುಮಂತೇಗೌಡ ಆಗಾಗ ಜಗಳ ಮಾಡುತ್ತಿದ್ದನು. 09.11.2017 ರಂದು ರಾಜಮ್ಮ ಹನುಮಂತೇಗೌಡನ ಮನೆಗೆ ಬಂದಿದ್ದ ವೇಳೆ ಪುನಃ ಜಗಳವಾಗಿದ್ದು, ಹನುಮಂತೇಗೌಡ ರಾಜಮ್ಮಳ ತಲೆಗೆ ಬಿದಿರು ದೊಣ್ಣೆಯಿಂದ ಹೊಡೆದು ಸಾಯಿಸಿದ್ದನು. ಬಳಿಕ ಮೃತ ದೇಹವನ್ನು ತನ್ನ ಮನೆಯ ಶೌಚ ಗುಂಡಿಯಲ್ಲಿ ಹೂತು ಹಾಕಿದ್ದನು.
ಪೊಲೀಸ್ ದೂರು; ಇತ್ತ ರಾಜಮ್ಮ ಕಾಣೆಯಾದ ಬಗ್ಗೆ ಆಕೆಯ ಸಹೋದರಿ ನಾಗವೇಣಿ ಎಂಬಾಕೆ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಅಂದಿನ ಸಿ.ಪಿ.ಐ ಸಿ.ಹೆಚ್ ರಾಮಕೃಷ್ಣ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದನು. ಪ್ರಕರಣದ ತನಿಖೆ ನಡೆಸಿದ ಸಿಪಿಐ ಸಿ.ಹೆಚ್. ರಾಮಕೃಷ್ಣ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ 6ನೇ ಅಧಿಕ ಮತ್ತು ಸತ್ರ ನ್ಯಾಯಾಲಯದ ನ್ಯಾಧೀಶ ನ್ಯಾ.ಚಂದ್ರಶೇಖರ್ ಅವರು ಆರೋಪ ಸಾಬೀತಾದ ಕಾರಣ ಅಪರಾಧಿಗೆ ಜೀವಾವಧಿ ಶಿಕ್ಷೆ ಒಂದು 1.10 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ತನಿಖೆಯನ್ನು ಸಿಪಿಐಗಳಾದ ಸಿ.ಹೆಚ್ ರಾಮಕೃಷ್ಣ, ರಾಧಾಕೃಷ್ಣ, ಹಾಗೂ ಸಹಾಯಕ ತನಿಖಾಧಿಕಾರಿ ಮುಖ್ಯಪೇದೆ ದೇವರಾಜು ಹಾಗೂ ಇನ್ನಿತರೇ ಪೊಲೀಸ್ ಸಿಬ್ಬಂದಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಆರ್.ಟಿ ಅರುಣ ವಾದ ಮಂಡಿಸಿದ್ದರು.
ತುಮಕೂರು- ಕುಣಿಗಲ್ ರಸ್ತೆಯಲ್ಲಿ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು; ವಿಡಿಯೋ
+ There are no comments
Add yours