ಸಂತ ಶ್ರೇಷ್ಠ ಕನಕದಾಸರು ಹರಿದಾಸ ಸಾಹಿತ್ಯದ ಅಗ್ರಗಣ್ಯ ಸಮಾಜ ಸುಧಾರಕರು; ಶಾಸಕ ಜ್ಯೋತಿಗಣೇಶ್

1 min read

ಸಂತ ಶ್ರೇಷ್ಠ ಕನಕದಾಸರು ಹರಿದಾಸ ಸಾಹಿತ್ಯದ ಅಗ್ರಗಣ್ಯ ಸಮಾಜ ಸುಧಾರಕರು; ಶಾಸಕ ಜಿ.ಬಿ ಜ್ಯೋತಿಗಣೇಶ್

Tumkurnews
ತುಮಕೂರು; ಯಾವುದೇ ಅಡಂಬರವಿಲ್ಲದೆ ಸರಳವಾಗಿ ಜೀವಿಸಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಂತ ಶ್ರೇಷ್ಠ ಕನಕದಾಸರು ದಾಸ ಸಾಹಿತ್ಯದ ಅಗ್ರಗಣ್ಯ ಸುಧಾರಕರಾಗಿದ್ದಾರೆ ಎಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತುಮಕೂರು ಮಹಾನಗರ ಪಾಲಿಕೆ ಸಂಯುಕ್ತಾಶ್ರದಲ್ಲಿ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರ‍ದಲ್ಲಿ ಆಯೋಜಿಸಿದ್ದ ಸಂತ ಶ್ರೇಷ್ಠ ಕನಕದಾಸರ 535ನೇ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಮ್ಮ ಸಾಹಿತ್ಯದ ಮೂಲಕ ದಾಸಸಾಹಿತ್ಯಕ್ಕೆ ವೈಶಿಷ್ಟಪೂರ್ಣವಾದ ಮೆರುಗನ್ನು ಕೀರ್ತನೆಗಳ ಮೂಲಕ ತಂದಿತ್ತ ಸಂತಶ್ರೇಷ್ಠ ಕನಕದಾಸರು, ತತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ವೈಚಾರಿಕ ಪರಂಪರೆಗೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಕನಕದಾಸರು ದಂಡನಾಯಕರಾಗಿದ್ದು, ನಂತರ ಅವರಿಗೆ ವೈರಾಗ್ಯ ಉಂಟಾಗಿ ಹರಿದಾಸರಾದರು, ‘ಕುಲ ಕುಲವೆಂದು ಹೊಡೆದಾಡದಿರಿ ಎಂದು ಸಾರಿದ ದಾಸವರೇಣ್ಯರು, ಮಾಡಿದರೆ ಮಾಡಬೇಕು ಸತ್ಯವಂತರ ಸಂಗವನು’ ಎಂದು ಹೇಳಿದ್ದಾರೆ. ತಮ್ಮ ಚಿಂತನೆಯ ಮೂಲಕ ಮೇಲು-ಕೀಳು ಮತ್ತು ತಾರತಮ್ಯವನ್ನು ಹೋಗಲಾಡಿಸಲು ಪ್ರಯತ್ನಿಸಿದ ಮಹಾನುಭಾವರು ಎಂದು ತಿಳಿಸಿದರು.

ತಮ್ಮ ರಚನೆಗಳಲ್ಲಿ ಸಮಾಜದ ಓರೆಕೋರೆಗಳನ್ನು, ಪ್ರಚಲಿತ ಸಮಸ್ಯೆಗಳನ್ನು, ಮೂಢನಂಬಿಕೆಯ ತೊಂದರೆಗಳ ಕುರಿತು ಹೇಳಿ ಅಂದಿನ ಸಮಾಜದ ಸ್ಥಿತಿಗತಿಗಳನ್ನು ತಿದ್ದುವ ಪ್ರಯತ್ನ ಮಾಡಿರುವ ದಾಸರಿವರು, ಸಮಾಜ ಸುಧಾರಕರಾಗಿ, ದಾಸಶ್ರೇಷ್ಠರಾಗಿ ಮೆರೆದ ಸಂತಶ್ರೇಷ್ಠ ಕನಕದಾಸರು ಜೀವನದಲ್ಲಿ ಕಂಡುಕೊಂಡ ಸತ್ಯವನ್ನು ಕೀರ್ತನೆ ಮೂಲಕ ಆಧ್ಯಾತ್ಮಿಕ, ವ್ಯೆಚಾರಿಕ ಸಂದೇಶವನ್ನು ಜನಸಾಮಾನ್ಯನಿಗೆ ಮನಮುಟ್ಟುವಂತೆ ತಿಳಿಸಿ ಕರ್ನಾಟಕ ಸಂಗೀತ ಹಾಗು ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಆಧ್ಯಾತ್ಮದ ಅಂತಿಮ ಗುರಿ ಏನಿದ್ದರೂ ಅದು ಸರ್ವಸಮಾನತೆ ಎಂದು ಕನಕದಾಸರು ಪ್ರತಿಪಾದಿಸಿದರು, ಇಂತಹ ಮಹನೀಯರ ಜಯಂತಿಯನ್ನು ಇಡೀ ರಾಜ್ಯದಲ್ಲಿ ಹಾಗೂ ಹಳ್ಳಿಹಳ್ಳಿಗಳಲ್ಲಿ ಆಚರಣೆ ಮಾಡುತ್ತಿದ್ದಾರೆ. ಇವರು ಕೊಟ್ಟಿರುವ ಸಂದೇಶ ಇಂದಿಗೂ ಪ್ರಸ್ತುತವಾಗಿದ್ದು, ಅವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಮಾತನಾಡಿ, ಕನಕದಾಸರು 15-16 ನೇ (1508-1606) ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ತಾಯಿ ಬಚ್ಚಮ್ಮ ಮತ್ತು ತಂದೆ ಬೀರಪ್ಪ ಅವರ ಮಗನಾಗಿ ಜನಿಸಿದ ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ. ದಂಡನಾಯಕರ ಅಧಿಕಾರ ಹೆತ್ತವರಿಗಿದ್ದ ಕಾರಣ ಆಸ್ತಿ, ಹಣ ಯಾವುದಕ್ಕೂ ಕೊರತೆಯಿರಲಿಲ್ಲ. ತಿರುಪತಿ ತಿಮ್ಮಪ್ಪನ ವರಪ್ರಸಾದದಿಂದ ಜನಿಸಿದ ಬಾಲಕ ತಿಮ್ಮಪ್ಪನು ಸಕಲ ವಿದ್ಯೆ, ಸಾಹಿತ್ಯ, ಸಂಗೀತ, ಶಸ್ತ್ರ, ಶಾಸ್ತ್ರಾಭ್ಯಾಸ ಎಲ್ಲವನ್ನೂ ಕಲಿತಿದ್ದರು. ತಂದೆಯ ಆಕಸ್ಮಿಕ ಮರಣದಿಂದ ಬಾಲಕ ತಿಮ್ಮಪ್ಪ ತಂದೆಯ ದಂಡಾಯಕನ ಆಡಳಿತ ವಹಿಸಿ ತಿಮ್ಮಪ್ಪ ಹೋಗಿ ತಿಮ್ಮನಾಯಕನಾದನು. ಹಾಗೆ ಒಂದು ದಿನ ಯಾವುದಕ್ಕೋ ಭೂಮಿಯನ್ನು ಅಗೆಯುತ್ತಿರುವಾಗ ಅಪಾರ ಏಳು ಕೊಪ್ಪರಿಗೆ ಹೊನ್ನು ಸಿಗುತ್ತದೆ. ಈ ಎಲ್ಲಾ ಬಂಗಾರವನ್ನು ಪ್ರಜೆಗಳ ಹಿತರಕ್ಷಣೆ, ಧಾರ್ಮಿಕ ಕಾರ್ಯಗಳಿಗಾಗಿ ಬಳಸಿ, ಕನಕವನ್ನು ದಾನಮಾಡಿ ‘ಕನಕನಾಯಕ’ ಎಂಬ ಹೆಸರಿಗೆ ಪಾತ್ರನಾಗುತ್ತಾನೆ.

ಇಂದು ಇಡೀ ವ್ಯವಸ್ಥೆಯೇ ಗಳಿಕೆಯ ಹಿಂದೆ ಬಿದ್ದಿದ್ದು, ಗಳಿಸುವ ವ್ಯಾಮೋಹ ತುಂಬಾ ಇದೆ. ಬಂದದ್ದನ್ನು ಹಂಚಿಕೊಂಡು ಬದುಕುವ ಪರಿಯನ್ನು ಕನಕದಾಸರು ತಮಗೆ ದೊರೆತ ನಿಧಿಯನ್ನು ಹಂಚುವ ಮೂಲಕ ಸಾಮಾಜಿಕ ಕಳಕಳಿಯನ್ನು ತೋರಿಸಿದರು ಎಂದು ಹೇಳಿದರು.
ಕನಕದಾಸರು ದಂಡನಾಯಕರಾಗಿದ್ದು, ಯುದ್ದದಲ್ಲಿ ತೀವ್ರ ಗಾಯವಾದರೂ, ಬದುಕುಳಿದರಂತೆ. ಇದಾದ ನಂತರ ಅವರು ಯುದ್ದವನ್ನು ಬಿಟ್ಟು ವೈರಾಗ್ಯ ಉಂಟಾಗಿ ಹರಿಭಕ್ತ ದಾಸರಾದರು ಕುಲ ಕುಲ ಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಮಾರ್ಮಿಕವಾಗಿ ತಿಳಿಸಿದ ಅವರು ರಚಿಸಿರುವ ರಾಮಧಾನ್ಯಚರಿತಾ ಸೇರಿದಂತೆ ಹಲವಾರು ಸಾಹಿತ್ಯಗಳು ನಮಗೆ ದಾರಿದೀಪವಾಗಿವೆ ಎಂದರು.

ಕನಕದಾಸರ ತ್ರಿಪದಿಗಳು, ಸಾಹಿತ್ಯ, ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಮಾಡುವ ದಿನವಿದು. ಅವುಗಳ ಮೂಲಕ ಸಮಾಜದಲ್ಲಿ ಶಾಂತಿ ಸಮಾನತೆ, ಪ್ರಗತಿ ಸಾಧಿಸಲು ಸಾಧ್ಯವಿದೆ. ದಾಸ ಪರಂಪರೆಯಲ್ಲಿ ಬರುವ ಎಲ್ಲಾ ದಾಸರಲ್ಲಿ ಕನಕದಾಸರೊಬ್ಬರು ಪ್ರಸಿದ್ಧ ದಾಸರು. ಇವರ ಕೀರ್ತನೆಗಳು ಆ ಕಾಲದ ದಿನ ನಿತ್ಯ ಜೀವನದ ಸಂಗತಿಗಳನ್ನು ನಿರೂಪಿಸುತ್ತದೆ. ಜಾತಿಪದ್ಧತಿಯ ತಾರತಮ್ಯಗಳನ್ನು ಖಂಡಿಸಿದ್ದಾರೆ, ಬರೀ ಸಂಪ್ರದಾಯದ ಆಚರಣೆಗಳು ನಿಷ್ಪ್ರಯೋಜಕ, ನೈತಿಕ ಮೌಲ್ಯಗಳನ್ನು ಬೆಲೆಸಿಕೊಳ್ಳುವುದು ಮುಖ್ಯ ಎಂದು ಕನಕದಾಸರು ಹೇಳುತ್ತಾರೆ ಎಂದು ವಿವರಿಸಿದರು.
ಸಂಪನ್ಮೂಲ ವ್ಯಕ್ತಿ ಡಾ.ಎಂ.ಸಿ ನರಸಿಂಹಮೂರ್ತಿ ಕಾರ್ಯಕ್ರಮದಲ್ಲಿ ಸಂತ ಶ್ರೇಷ್ಠ ಕನಕದಾಸರ ಬಗ್ಗೆ ಉಪನ್ಯಾಸ ನೀಡಿದರು.
ಶಾಸಕ ಜಿ.ಬಿ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಅಜಯ್, ತುಮಕೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಮೊದಲಾದವರು ಸಂತ ಶ್ರೇಷ್ಠ ಕನಕದಾಸ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೌರವ ಸಲ್ಲಿಸಿದರು.

About The Author

You May Also Like

More From Author

+ There are no comments

Add yours