ನ.4ರಿಂದ ಚಿಕ್ಕತೊಟ್ಲುಕೆರೆ ಶ್ರೀ ಅಟವಿ ಜಂಗಮ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

Tumkurnews
ತುಮಕೂರು; ಚಿಕ್ಕತೊಟ್ಲುಕೆರೆಯ ಶ್ರೀ ಅಟವಿ ಜಂಗಮ ಸುಕ್ಷೇತ್ರದಲ್ಲಿ ನವೆಂಬರ್ 4 ರಿಂದ 6ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಟವಿ ಜಂಗಮ ಸುಕ್ಷೇತ್ರದ ಪೀಠಾಧ್ಯಕ್ಷ ಶ್ರೀಅಟವಿ ಶಿವಲಿಂಗಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.4 ರಂದು ಕೃಷಿ ಮೇಳ, ನ.5 ರಂದು ಧರ್ಮಸಮ್ಮೇಳನ ಮತ್ತು ನ.6 ರಂದು ಗೋಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳ ಮಹಾಪೋಷಕರಾಗಿ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ ಪರಮೇಶ್ವರ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಶ್ರೀಅಟವಿ ಶಿವಲಿಂಗಸ್ವಾಮೀಜಿ ನುಡಿದರು.
ಧಾರ್ಮಿಕ ಕಾರ್ಯಕ್ರಮಗಳ ಮಹಾಪೋಷಕ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ನ.4 ರಂದು ಶ್ರೀಮಠದ ಆವರಣದಲ್ಲಿ ಕೃಷಿ ಮೇಳ ಮತ್ತು ಕೃಷಿಗೆ ಸಂಬಂಧಿಸಿದ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಇದರಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಹಾಗೂ ಪಶು ಸಂಗೋಪನಾ ಇಲಾಖೆಗಳ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು, ಆಯಾಯ ಕ್ಷೇತ್ರದಲ್ಲಿ ಆಗಿರುವ ಹೊಸ ಅವಿಷ್ಕಾರಗಳನ್ನು ರೈತರಿಗೆ ಪರಿಚಯ ಮಾಡಿಕೊಡಲಿದ್ದಾರೆ. ಕೃಷಿ ಮೇಳದ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಅಟವಿ ಜಂಗಮ ಸುಕ್ಷೇತ್ರದ ಶ್ರೀಅವಟಿ ಶಿವಲಿಂಗಸ್ವಾಮೀಜಿ, ಸಿದ್ದಗಂಗೆಯ ಶ್ರೀಸಿದ್ದಲಿಂಗ ಸ್ವಾಮೀಜಿ ವಹಿಸುವರು. ಕರ್ನಾಟಕ ಸರಕಾರದ ಕೃಷಿ ಸಚಿವ ಬಿ.ಸಿ.ಪಾಟೀಲ್ ಉದ್ಘಾಟಿಸಲಿದ್ದು, ವಸ್ತುಪ್ರದರ್ಶನ ಮಳಿಗೆಗಳನ್ನು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಉದ್ಘಾಟಿಸಲಿದ್ದಾರೆ. 2001ರಲ್ಲಿ ಅಟವಿ ಸುಕ್ಷೇತ್ರದಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿ ಕ್ಷೇತ್ರದ ಅಭಿವೃದ್ದಿಗೆ ಕಾರಣರಾದ ಸಂಸದ ಜಿ.ಎಸ್.ಬಸವರಾಜು ಮತ್ತು ಅಂದಿನ ಶಾಸಕ ಆರ್.ನಾರಾಯಣ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ನ.5ರ ಶನಿವಾರ ಮಂಡರಗಿಯ ಶ್ರೀಅನ್ನದಾನೇಶ್ವರ ಸ್ವಾಮೀಜಿ ಹಾಗೂ ದುಂಡಸಿಯ ಶ್ರೀಕುಮಾರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಹಲವು ಹರಗುರು ಚರಮೂರ್ತಿಗಳ ಬೃಹತ್ ಧರ್ಮಸಭೆಯನ್ನು ಆಯೋಜಿಸಲಾಗಿದೆ. ಸುತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮಹಿಳಾ ಘೋಷ್ಠಿ ಏರ್ಪಡಿಸಿದ್ದು, ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಮಹಿಳಾ ಗೋಷ್ಠಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಶ್ರೀಮತಿ ಕನ್ನಿಕಾ ಪರಮೇಶ್ವರ್ ವಹಿಸುವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವರಾದ ಶ್ರೀಮತಿ ರಾಣಿ ಸತೀಶ್, ಎಂ.ಬಿ ಪಾಟೀಲ್, ಶಾಸಕ ಲಕ್ಷ್ಮಿಹೆಬ್ಬಾಳಕರ್, ಅಖಿಲ ಭಾರತ ವೀರಶೈವ ಮಹಾಸಭಾದ ಸದಸ್ಯರುಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಗೋಮಾತೆಗೆ ಪೂಜ್ಯನೀಯ ಸ್ಥಾನವಿದೆ. ಹಾಗಾಗಿ ನ.6ರ ಭಾನುವಾರ ಗೋಪೂಜಾ ಕಾರ್ಯಕ್ರಮವನ್ನು ಶ್ರೀಅಟವಿ ಶಿವಲಿಂಗಸ್ವಾಮೀಜಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. 1108 ದಂಪತಿಗಳು ಗೋಪೂಜಾ ನೆರವೇರಿಸಲಿದ್ದಾರೆ. ಗೋಮಾತೆಯಲ್ಲಿ 33 ಕೋಟಿ ದೇವರುಗಳು ನೆಲೆಸಿದ್ದಾರೆ ಎಂಬ ಪ್ರತೀತಿ ಇದೆ. ಹಾಗಾಗಿಯೇ ಅಟವಿ ಜಂಗಮ ಸುಕ್ಷೇತ್ರದಲ್ಲಿ ಗೋಶಾಲೆ ತೆರೆದು ನೂರಾರು ಗೋವುಗಳಿಗೆ ಆಶ್ರಯ ನೀಡಲಾಗಿದೆ. ಇದರ ಜೊತೆಗೆ ಲಿಂಗೈಕ್ಯ ಶ್ರೀ ಅಟವಿ ಶಿವಯೋಗಿಗಳ 122ನೇ ಪುಣ್ಯ ಸ್ಮರಣೆ ಹಾಗೂ ಕಾರ್ತಿಕ ದೀಪೋತ್ಸವ, ರೊಟ್ಟಿ ಪೂಜೆ, ಅಕ್ಕಿ ಪೂಜೆ ನಡೆಯಲಿದೆ. ಶ್ರೀಕನ್ನಿಕಾ ಪರಮೇಶ್ವರ್ ಮತ್ತು ಡಾ.ಜಿ.ಪರಮೇಶ್ವರ್ ಗೋಪೂಜೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಣಿಗಲ್ ಎಂದು ಶ್ರೀಅಟವಿ ಶಿವಲಿಂಗಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಗೂ ಮುನ್ನ ಧಾರ್ಮಿಕ ಕಾರ್ಯಕ್ರಮದ ವೇದಿಕೆ ಸಿದ್ದತೆ ಹಾಗೂ ದಾಸೋಹದ ಸಿದ್ದತೆಗಳನ್ನು ಡಾ.ಜಿ.ಪರಮೇಶ್ವರ್ ವೀಕ್ಷಿಸಿದರು. ಸುದ್ದಿಗೋಷ್ಠಿಯಲ್ಲಿ ತುಮಕೂರು ನಗರ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಮುರುಳೀಧರ ಹಾಲಪ್ಪ, ಜಗದೀಶ್, ಮಹದೇವಪ್ಪ, ಅನುಸೂಯಮ್ಮ, ಚಂದ್ರಶೇಖರಗೌಡ, ಅಶ್ವಥನಾರಾಯಣ್, ಅರಕೆರೆ ಶಂಕರ್, ಕೆಸ್ತೂರ್ ನಂಜುಂಡಪ್ಪ ಮತ್ತಿತರರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours