ತುಮಕೂರು ಜಿಲ್ಲಾಸ್ಪತ್ರೆ ನಿರ್ಲಕ್ಷ್ಯ; ಮೂವರು ಬಲಿ
Tumkurnews
ತುಮಕೂರು; ಅವಳು ಅನಾಥ ಮಹಿಳೆ. ಹೆರಿಗೆ ನೋವಿನಿಂದ ಬಳಲುತ್ತಾ ಇದ್ಳು. ನನಗೆ ಹೆರಿಗೆ ಮಾಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಜಿಲ್ಲಾಸ್ಪತ್ರೆ ಸಿಬ್ಬಂದಿಯನ್ನು ಅಂಗಲಾಚುತಿದ್ದಳು. ಆದರೆ ನಿಷ್ಕರುಣಿ ಸಿಬ್ಬಂದಿಗಳು ಡಾಕ್ಯುಮೆಂಟ್ ಇಲ್ಲದ ನೆಪದಲ್ಲಿ ಆಕೆಯನ್ನು ದಾಖಲಾತಿ ಮಾಡಿಕೊಳ್ಳದೇ ಬಾಣಂತಿ ಜೊತೆ ಅವಳಿ ಶಿಶುಗಳ ಸಾವಿಗೆ ಕಾರಣರಾಗಿದ್ದಾರೆ. ತುಮಕೂರಿನಲ್ಲಿ ನಡೆದ ಹೃದಯ ವಿದ್ರಾವಕ ಘಟನೆ ಇದು.
ತುಮಕೂರು ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯತನದ ಪರಮಾವಧಿ ಇದಾಗಿದೆ. ಇವತ್ತು ಒಂದಲ್ಲ, ಎರಡಲ್ಲ ಬರೊಬ್ಬರಿ ಮೂರು ಸಾವಿಗೆ ಜಿಲ್ಲಾಸ್ಪತ್ರೆ ನಿರ್ಲಕ್ಷ್ಯ ಕಾರಣವಾಗಿದೆ. ಗರ್ಭಿಣಿಯೊಂದಿಗೆ ಯಮ ಕಿಂಕರರಂತೆ ವರ್ತಿಸಿದ ಜಿಲ್ಲಾಸ್ಪತ್ರೆ ಸಿಬ್ಬಂದಿಗಳು ಬಾಣಂತಿ ಹಾಗೂ ಅವಳಿ ನವಜಾತ ಶಿಶುಗಳ ಸಾವಿಗೆ ಕಾರಣರಾಗಿದ್ದಾರೆ. ಹೌದು, ಬುಧವಾರ ಸಂಜೆ ತುಮಕೂರು ನಗರದ ಭಾರತಿನಗರ ವಾಸಿ ತುಂಬು ಗರ್ಭಿಣಿ ಕಸ್ತೂರಿ ಎಂಬಾಕೆ ಹೆರಿಗೆ ನೋವಿನಿಂದ ಜಿಲ್ಲಾಸ್ಪತ್ರೆಗೆ ಹೋಗಿದ್ದಳು. ತಮಿಳುನಾಡು ಮೂಲದ ಈಕೆ ಅನಾಥೆ ಮಹಿಳೆಯಾಗಿದ್ದು, ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ದಾಖಲಾತಿಗಳು ಇರಲಿಲ್ಲ. ಆದರೆ ಆಸ್ಪತ್ರೆ ಸಿಬ್ಬಂದಿ, ತಾಯಿ ಕಾರ್ಡ್, ಆಧಾರ್ ಕಾರ್ಡ್ ಕೇಳಿದ್ದಾರೆ. ಕೊಡದೇ ಇದ್ದಾಗ ಅಡ್ಮಿಷನ್ ಮಾಡಿಕೊಳ್ಳಲು ಸಾಧ್ಯ ಇಲ್ಲ ಎಂದು ನಿಷ್ಕರುಣಿಯಾಗಿ ವಾಪಸು ಕಳುಹಿಸಿದ್ದಾರೆ. ಇದರಿಂದ ವಿಧಿ ಇಲ್ಲದೇ ವಾಪಸ್ ಮನೆಗೆ ಬಂದ ಕಸ್ತೂರಿ ಗುರುವಾರ ಬೆಳಗಿನ ಜಾವ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ನಿತ್ರಾಣಗೊಂಡ ಬಾಣಂತಿ ಹಾಗೂ ಎರಡೂ ಶಿಶು ಸಾವನಪ್ಪಿವೆ. ಕಸ್ತೂರಿಯ ಗಂಡ ಕೂಡ ಈ ಹಿಂದೆಯೇ ತೀರಿಹೋಗಿದ್ದಾರೆ. ಅಪ್ಪ, ಅಮ್ಮ ಕುಟುಂಬದ ಯಾರೂ ಇಲ್ಲದೇ ಅನಾಥೆಯಾಗಿ ಕಸ್ತೂರಿ ಅಸುನೀಗಿದ್ದಾಳೆ. ಇಹಲೋಕ ನೋಡುವ ಮೊದಲೇ ನವಜಾತ ಶಿಶುಗಳು ಕೂಡ ಅಸುನೀಗಿವೆ.
ಒಂದೊತ್ತಿನ ಊಟಕ್ಕೂ ಪರಿತಪಿಸುತ್ತಾ ಇದ್ದ ಕಸ್ತೂರಿಗೆ ಈಗಾಗಲೇ 7 ವರ್ಷದ ಹೆಣ್ಣು ಮಗು ಇದೆ. ಹೆರಿಗೆ ಖರ್ಚಿಗೂ ಹಣ ಇರಲಿಲ್ಲ. ಹಾಗಾಗಿ ವಠಾರದ ಜನರು ವಂತಿಗೆ ಸಂಗ್ರಹ ಮಾಡಿ ಆಟೋದಲ್ಲಿ ಆಸ್ಪತ್ರೆಗೆ ಕಳುಹಿಸಿದ್ರು. ಆದರೆ ಜನಸಾಮಾನ್ಯರಿಗೆ ಇದ್ದ ಮಾನವೀಯತೆಯು ಆಸ್ಪತ್ರೆ ಸಿಬ್ಬಂದಿಗೆ ಇರಲಿಲ್ಲ, ಅವರು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದಾರೆ. ಘಟನೆ ನಡೆಯುತಿದ್ದಂತೆ ಡಿ.ಎಚ್.ಒ ಡಾ.ಮಂಜುನಾಥ್ ಹಾಗೂ ಡಿ.ಎಸ್. ಡಾ.ವೀಣಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಆಕ್ರೋಶಗೊಂಡ ಸ್ಥಳೀಯರು ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದರು. ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸದೇ ಇದ್ರೆ ಶವ ಎತ್ತಲು ಬಿಡೋದಿಲ್ಲ ಎಂದು ಪಟ್ಟು ಹಿಡಿದ್ರು. ಸ್ಥಳೀಯರ ಒತ್ತಡಕ್ಕೆ ಮಣಿದ ಡಿ.ಎಚ್.ಒ ಡಾ.ಮಂಜುನಾಥ್ ಅವರು ನಿನ್ನೆ ರಾತ್ರಿ ಕರ್ತವ್ಯದಲ್ಲಿ ಇದ್ದ ವೈದ್ಯೆ ಡಾ.ಉಷಾ ಹಾಗೂ ನರ್ಸ್’ಗಳನ್ನು ಅಮಾನತುಗೊಳಿಸೋದಾಗಿ ತಿಳಿಸಿದರು. ಅಲ್ಲದೇ ತಮ್ಮ ಸಿಬ್ಬಂದಿಯಿಂದ ಕರ್ತವ್ಯ ಲೋಪ ಆಗಿರುವುದನ್ನು ಒಪ್ಪಿಕೊಂಡರು.
ತುಮಕೂರು ಜಿಲ್ಲಾಸ್ಪತ್ರೆ ವಿರುದ್ಧ ತನಿಖೆಗೆ ಆದೇಶ
ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜೀವ ರಕ್ಷಣಾ ತಾಣ ಆಗಬೇಕಿದ್ದ ಜಿಲ್ಲಾಸ್ಪತ್ರೆ ಸಾವಿನ ಮನೆಯಾಗಿರೋದು ದುರಾದೃಷ್ಟದ ಸಂಗತಿ.
ತಾಯಿ, ಅವಳಿ ಮಕ್ಕಳ ಸಾವಿನ ಬಗ್ಗೆ DHO ಡಾ.ಮಂಜುನಾಥ್ ಹೇಳಿಕೆ
+ There are no comments
Add yours