Tumkurnews
ತುಮಕೂರು; ತಲೆ ಕೆಳಗಾಗಿ ಬಿದ್ದ ಸ್ಥಿತಿಯಲ್ಲಿದ್ದ ಓಮ್ನಿ ಕಾರಿನಲ್ಲಿ ವ್ಯಕ್ತಿಯೋರ್ವ ಸಜೀವವಾಗಿ ದಹನವಾಗಿರುವ ಘಟನೆ ನಡೆದಿದೆ.
ಗುಬ್ಬಿ ತಾಲ್ಲೂಕಿನ ನಂದಿಹಳ್ಳಿ ಬಳಿ ಸೋಮವಾರ ರಾತ್ರಿ ಘಟನೆ ಸಂಭವಿಸಿದ್ದು, ಹೊಸಕೆರೆ ನಿವಾಸಿ ರಂಗಯ್ಯ(47) ಮೃತ ದುರ್ದೈವಿ. ಓಮ್ನಿ ಕಾರಿನಲ್ಲಿ ಮೃತ ರಂಗಯ್ಯ ಸೇರಿದಂತೆ ಐವರು ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದು, ರಂಗಯ್ಯ ಕಾರಿನಲ್ಲೇ ಸಜೀವ ದಹನವಾಗಿದ್ದಾರೆ.
ಕಾರಿನಲ್ಲಿದ್ದ ಐವರ ಪೈಕಿ ಚಿತ್ತಯ್ಯ ಎಂಬುವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆ ಶಂಕೆ; ಅಪಘಾತ ನಡೆದ ಸಂದರ್ಭದಲ್ಲಿ ಕಾರಿನಲ್ಲಿದ್ದ ರಂಗಯ್ಯ ಸಜೀವವಾಗಿ ದಹನವಾಗಿದ್ದಾರೆ. ಮತ್ತೋರ್ವ ಚಿತ್ತಯ್ಯ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ಅನುಮಾನಸ್ಪದವಾಗಿರುವ ಕಾರಣ ಕಾರಿನಲ್ಲಿದ್ದ ಗಂಗಾಧರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವ ಇಬ್ಬರಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಗುಬ್ಬಿ ಸಿಪಿಐ ನಧಾಪ್, ಚೇಳೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹತ್ವದ ಸುಳಿವು ನೀಡಿದ ವಿಡಿಯೋ; ಅಪಘಾತ ನಡೆದಾಗ ಸ್ಥಳೀಯರು ಕೂಡಲೇ ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಸ್ಥಳದಲ್ಲಿ ಇದು ಪೂರ್ವ ನಿಯೋಜಿತ ಕೃತ್ಯ ಎಂಬಂತೆ ಭಾಸವಾಗಿದೆ. ವ್ಯಕ್ತಿಯನ್ನು ಹಗ್ಗದಿಂದ ಕಟ್ಟಿ ಕಾರಿನಲ್ಲಿ ಕೂಡಿ ಹಾಕಿ, ಕಾರನ್ನು ಪಲ್ಟಿ ಮಾಡಿ ಬೆಂಕಿ ಹಾಕಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಕಾರು ಹೊತ್ತಿ ಉರಿಯುವಾಗ ರಕ್ಷಣೆಗೆ ಧಾವಿಸಿದ್ದ ಸ್ಥಳೀಯರ ಮಾತುಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿರುವುದು ಪೊಲೀಸ್ ತನಿಖೆಗೆ ಸಹಕಾರಿಯಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಪೊಲೀಸ್ ತನಿಖೆ ಬಳಿಕ ಇದು ಕೊಲೆಯೋ ಅಥವಾ ಅಪಘಾಯವೋ ಎಂಬುದು ತಿಳಿಯಬೇಕಿದೆ.
(ಒಳಚಿತ್ರ; ಮೃತ ರಂಗಯ್ಯ)
(ಘಟನೆಯ ವಿಡಿಯೋ)
+ There are no comments
Add yours