ಜಗದ್ಗುರು ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜಯಂತೋತ್ಸವ; ಶಾಸಕ ಕುಮಾರ್ ಬಂಗಾರಪ್ಪ ಭಾಗಿ

1 min read

Tumkurnews
ತುಮಕೂರು; ಬಿಲ್ಲವ, ನಾಮಧಾರಿ, ಈಡಿಗ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ಈಡಿಗ ಸಮುದಾಯದಲ್ಲಿ ಸಂಕಷ್ಟಗಳ ನಡುವೆಯೂ ಸಾಧನೆ ಮಾಡಿದ ಅನೇಕ ಸಾಧಕರಿದ್ದಾರೆ. ಹಾಗಾಗಿ ನಮ್ಮದು ಹಿಂದುಳಿದ ಸಮಾಜ ಎಂಬ ಕೀಳಿರಿಮೆಯನ್ನು ನಾವೆಲ್ಲರೂ ಮರೆತು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದುವರೆಯಲು ಪ್ರಯತ್ನಿಸಬೇಕಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದರು.

ಪುರೋಹಿತರು ಜನರ ನಿರೀಕ್ಷೆಗೆ ತಕ್ಕಂತೆ, ಆಚಾರ, ವಿಚಾರ ಹೊಂದಬೇಕು; ಹಿರೇಮಠ ಶ್ರೀ
ನಗರದ ಡಾ.ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ತುಮಕೂರು ಜಿಲ್ಲಾ ಆರ್ಯ ಈಡಿಗರ ಸಂಘ, ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ, ಜಗದ್ಗುರು ಶ್ರೀನಾರಾಯಣಗುರು ಸಮಾಜಟ್ರಸ್ಟ್ ಹಾಗೂ ಬ್ರಹ್ಮಶ್ರೀನಾರಾಯಣಗುರು ಜಿಲ್ಲಾ ಜಯತೋತ್ಸವ ಸಮಿತಿ ಮಂಗಳವಾರ ಆಯೋಜಿಸಿದ್ದ ಜಗದ್ಗುರು ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಮಾಡುವ ಕೆಲಸದಲ್ಲಿ ಯಶಸ್ಸು ಸಿಕ್ಕಾಗ ಸಮಾಜದ ಕಡೆಗೂ ಗಮನಹರಿಸುವ ಕೆಲಸವನ್ನು ಮಾಡಬೇಕು.
ಒಂದು ಸಮಾಜ ಬೆಳವಣಿಗೆ ಹೊಂದಬೇಕಾದರೆ, ಕೆಲ ಸಮುದಾಯಗಳ ಸಹಕಾರವೂ ಇರುತ್ತದೆ. ಅದರಲ್ಲಿಯೂ ತಳ ಸಮುದಾಯಗಳ ಬೆಳವಣಿಗೆಯಲ್ಲಿ, ಇತರೆ ಸಮುದಾಯಗಳ ಪಾತ್ರವನ್ನು ನಾವು ಕಡೆಗಣಿಸುವಂತಿಲ್ಲ. ಕಲಾವಿದರಾಗಿ ಡಾ.ರಾಜ್‍ಕುಮಾರ್, ಪುನಿತ್ ರಾಜಕುಮಾರ್, ರಾಜಕಾರಣಿಗಳಾಗಿ ಬಂಗಾರಪ್ಪ, ಆರ್.ಎಲ್.ಜಾಲಪ್ಪ, ಕಾಗೋಡುತಿಮ್ಮಪ್ಪ ಸೇರಿದಂತೆ ನಮ್ಮ ಸಮುದಾಯದ ಹಲವರು ತಮ್ಮ ಜಾತಿ, ಭಾಷೆ ಎಲ್ಲವನ್ನು ಮೀರಿ ಬೆಳೆದವರು. ಅತಿ ಚಿಕ್ಕವಯಸ್ಸಿನಲ್ಲಿಯೇ ಅಪ್ಪು ಮಾಡಿದ ಸಾಧನೆ ನಾವ್ಯಾರು ಮರೆಯುವಂತಿಲ್ಲ ಎಂದರು.
ಕುಲಕಸುಬಿಗೆ ಅಂಟಿಕೊಂಡಿದ್ದ ಸಮುದಾಯದಲ್ಲಿ ಉದ್ದಿಮೆದಾರರು, ಶಿಕ್ಷಣ ತಜ್ಞರುಗಳನ್ನು ನಾವು ಕಾಣುತ್ತಿದ್ದೇವೆ. ಬಂಗಾರಪ್ಪ ಅವರ 20 ಅಂಶಗಳ ಕಾರ್ಯಕ್ರಮ ಇಡೀ ದೇಶದಲ್ಲಿಯೇ ಅತ್ಯುತ್ತಮ ಕಾರ್ಯಕ್ರಮಗಳು ಎಂಬುದನ್ನು ನಾವ್ಯಾರು ಮರೆಯುವಂತಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿ ರೈತ ವಿದ್ಯಾನಿಧಿಗೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ
ಸಂಸದ ಜಿ.ಎಸ್ ಬಸವರಾಜು ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳು, ದೇವರ ನಾಡು ಎಂದು ಕರೆಯಿಸಿಕೊಳ್ಳುತಿದ್ದ ಕೇರಳದಲ್ಲಿ ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ತತ್ವದ ಮೂಲಕ ಹಲವಾರು ಸಾಮಾಜಿಕ ಪರಿವರ್ತನೆಗಳನ್ನು ಮಾಡಿದರು. ಶಿಕ್ಷಣ ಮತ್ತು ಧಾರ್ಮಿಕ ಕ್ರಾಂತಿಯ ಮೂಲಕ ದೇವರ ನಾಡಿನಲ್ಲಿ ನಡೆಯುತ್ತಿದ್ದ ಮೌಢ್ಯ, ಕಂದಾಚಾರ, ಆನಾಚಾರಗಳಿಗೆ ಕಡಿವಾಣ ಹಾಕಿ, ಅಲ್ಲಿನ ಜನರನ್ನು ಜಾಗೃತಗೊಳಿಸಿ, ಸಾಕ್ಷರರ ನಾಡಾಗಿಸಿದ ಕೀರ್ತಿ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ಮಾತನಾಡಿ, ಒಬ್ಬ ವ್ಯಕ್ತಿಗೆ ಸ್ವಾಭಿಮಾನ ಮತ್ತು ಗೌರವಯುತ ಬದುಕು ಸಿಗಬೇಕೆಂದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಅಸ್ಪಷ್ಯತೆಯನ್ನು ತೊಲಗಿಸಿ, ತಾರತಮ್ಯ ರಹಿತ ಸಮಾಜ ನಿರ್ಮಾಣಕ್ಕೆ ನಾರಾಯಣಗುರುಗಳ ಪಾತ್ರ ದೊಡ್ಡದು, ಹಿಂದುಳಿದ ಸಮುದಾಯದ ಮಹಿಳೆಯರು ಎದೆ ಮುಚ್ಚುವಂತೆ ಸೆರಗು ಹೊದಿಯುವುದು ಅಪರಾಧವಾಗಿದ್ದ ಕಾಲದಲ್ಲಿ, ನಂಬೂದರಿಗಳ ಇಂತಹ ಅನಿಷ್ಠಗಳಿಗೆ ಕಡಿವಾಣ ಹಾಕಿದರು. ಎಲ್ಲಿಯವರೆಗೆ ಅವಕಾಶ ವಂಚಿತ ಸಮುದಾಯಗಳು ರಾಜಕೀಯ ಅಧಿಕಾರ ಹಿಡಿಯುವುದಿಲ್ಲವೋ, ಅಲ್ಲಿಯವರೆಗೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದು ಕನ್ನಡಿಯೊಳಗಿನ ಗಂಟಾಗಲಿದೆ ಎಂದ ಎಚ್ಚರಿಸಿದರು.
ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ತುಮಕೂರು ವಿವಿ ಸಂಶೋಧನಾ ನಿರ್ದೇಶಕ ಡಾ.ರಮೇಶ್ ಸಾಲಿಯಾನ, ವಿದ್ಯೆಯಿಂದ ಬುದ್ದಿವಂತರಾಗಿ, ಸಂಘಟನೆಯಿಂದ ಬಲಯುತರಾಗಿ ಎಂಬ ತತ್ವದ ಮೂಲಕ ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಆಪಾರ ಸುಧಾರಣೆಗಳನ್ನು ಜಾರಿಗೆ ತಂದ ನಾರಾಯಣಗುರುಗಳು, ಹುಟ್ಟಿನಲ್ಲಿ ಬ್ರಾಹ್ಮಣರಾಗುವುದಕ್ಕಿಂತ, ವ್ಯಕ್ತಿತ್ವದಲ್ಲಿ ಬ್ರಾಹ್ಮಣರಾಗುವಂತೆ ಪ್ರೇರೆಪಿಸಿದವರು. ಮಹಿಳಾ ಸಬಲೀಕರಣ, ಶಿಶುಪಾಲನೆ ಸೇರಿದಂತೆ ಹಲವಾರು ಕ್ಷೇತ್ರಗಳ ಬಗ್ಗೆ ಆಪಾರವಾಗಿ ದುಡಿದಿದ್ದಾರೆ. ಡಾ.ರವೀಂದ್ರನಾಥ ಟ್ಯಾಗೋರ್, ಮಹಾತ್ಮಗಾಂಧಿ ಅವರುಗಳ ನಾರಾಯಣಗುರುಗಳನ್ನು ಭೇಟಿಯಾಗಿ, ಅವರ ಮಾಡಿದ ಸಮಾಜಸೇವೆಯನ್ನು ಗುರುತಿಸಿ, ಗೌರವಿಸಿ, ಬ್ರಹ್ಮಶ್ರೀ ಎಂದು ಬಿರುದು ನೀಡಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಅಜಯಕುಮಾರ್ ವಹಿಸಿದ್ದರು. ಸಾನಿಧ್ಯವನ್ನು ಸೋಲೂರಿನ ಶ್ರೀವಿಖ್ಯಾತನಂದಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ, ಬಿಲ್ಲವ ಅಸೋಸಿಯೇಷನ್‍ನ ವೇದಕುಮಾರ್, ಜೆಪಿ ಪ್ರತಿಷ್ಠಾನದ ಉಪಾಧ್ಯಕ್ಷ ಡಾ.ಲಕ್ಷ್ಮಿನರಸಿಂಹಯ್ಯ, ಜಿಲ್ಲಾ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಎಂ.ಕೆ.ವೆಂಕಟಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ, ಮೈಸೂರು ಡೈಯರ್ ಟೆಕ್‍ನ ಎಂ.ಡಿ.ಸದಾಶಿವ ಆರ್.ಅಮೀನ್, ಮಾಜಿ ಸಚಿವ ಸೊಗಡು ಶಿವಣ್ಣ, ಜೆಡಿಎಸ್ ಮುಖಂಡ ಎನ್.ಗೋವಿಂದರಾಜು, ಪಾಲಿಕೆ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಕನ್ನಡ ಸೇನೆಯ ಧನಿಯಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಟೌನ್‍ಹಾಲ್ ವೃತ್ತದಿಂದ ಡಾ.ಗುಬ್ಬಿವೀರಣ್ಣ ಕಲಾಕ್ಷೇತ್ರದವರೆಗೆ ಬ್ರಹ್ಮಶ್ರೀ ನಾರಾಯಣಗುರುಗಳ ಪಂಚಲೋಹದ ಪುತ್ಥಳಿಯನ್ನು ಬೆಳ್ಳಿಯ ಸಾರೋಟಿನಲ್ಲಿಟ್ಟು, ವಿವಿಧ ಜನಪದ ಕಲಾಪ್ರಕಾರಗಳ ಪ್ರದರ್ಶನದ ಮೂಲಕ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ತುಮಕೂರು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕ ಜಿ.ಬಿ ಜ್ಯೋತಿಗಣೇಶ್, ನಾರಾಯಣಗುರುಗಳು ಶೋಷಿತ ಸಮುದಾಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಕ್ರಾಂತಿಯನ್ನು ಉಂಟು ಮಾಡಿದವರು. ಅವರು ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತಂದ ಅನೇಕ ಸುಧಾರಣೆಗಳು ಹಲವು ಸಮುದಾಯಗಳ ಏಳಿಗೆಗೆ ಪೂರಕವಾಗಿವೆ ಎಂದರು.

About The Author

You May Also Like

More From Author

+ There are no comments

Add yours