Tumkurnews
ತುಮಕೂರು; ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರ ಕಾರ್ಯಕ್ರಮಗಳಿಂದ ಬಿಜೆಪಿ ಕಾರ್ಯಕರ್ತರು ಅಂತರ ಕಾಯ್ದುಕೊಳ್ಳುತ್ತಿದ್ದು, ಮಾಧುಸ್ವಾಮಿ ಅವರಿಗೆ ಮುಖಭಂಗವುಂಟಾಗುತ್ತಿದೆ. ಶನಿವಾರ ಪಾವಗಡ ತಾಲ್ಲೂಕಿನಲ್ಲಿ ನಡೆದ ಬಾಗಿನ ಅರ್ಪಿಸುವ ಕಾರ್ಯಕ್ರಮದಿಂದ ಕೂಡ ಬಿಜೆಪಿ ಕಾರ್ಯಕರ್ತರು ದೂರ ಉಳಿದಿದ್ದಾರೆ.
ಸಚಿವ ಜೆ.ಸಿ ಮಾಧುಸ್ವಾಮಿ ಬಿಜೆಪಿ ತೊರೆಯುತ್ತಾರೆ ಎಂಬ ವದಂತಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಅವರು ಭಾಗವಹಿಸುವ ಕಾರ್ಯಕ್ರಮಗಳತ್ತ ಬಿಜೆಪಿ ಕಾರ್ಯಕರ್ತರು ಸುಳಿಯುತ್ತಿಲ್ಲ. ಕೇವಲ ಮಾಧುಸ್ವಾಮಿ ಅವರ ಕಟ್ಟಾ ಬೆಂಬಲಿಗರು, ಅಭಿಮಾನಿಗಳು ಮಾತ್ರ ಅವರಿಗೆ ಜೊತೆಯಾಗುತ್ತಿದ್ದಾರೆ.
ಬಾಗಿನಕ್ಕೂ ಬರಲಿಲ್ಲ; ಶನಿವಾರ ಪಾವಗಡ ತಾಲ್ಲೂಕಿನ ನಾಗಲಮಡಿಕೆಯ ಉತ್ತರ ಪಿನಾಕಿನಿ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವಿತ್ತು. ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಬಾಗಿನ ಅರ್ಪಿಸಲು ಆಗಮಿಸಿದ್ದರು. ಆದರೆ ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿ ಅಲ್ಲಿನ ಶಾಸಕರುಗಳಿಗೆ ಪಕ್ಷದ ಕಾರ್ಯಕರ್ತರು ಜೊತೆಯಾಗುವಂತೆ ಸಚಿವ ಮಾಧುಸ್ವಾಮಿ ಅವರಿಗೆ ಯಾವೊಬ್ಬ ಬಿಜೆಪಿ ಕಾರ್ಯಕರ್ತರು ಕೂಡ ಜೊತೆಯಾಗಲಿಲ್ಲ. ಈ ಹಿಂದೆ ಹಲವು ಬಾರಿ ಮಾಧುಸ್ವಾಮಿ ಪಾವಗಡ ತಾಲ್ಲೂಕಿಗೆ ಭೇಟಿ ನೀಡಿದ್ದಾರೆ. ಆಗೆಲ್ಲಾ ಬಿಜೆಪಿ ಕಾರ್ಯಕರ್ತರು ಹಾಜರಿದ್ದು, ಅದ್ಧೂರಿಯಾಗಿ ಬರ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಯಾರೊಬ್ಬರೂ ಇರಲಿಲ್ಲ. ಇದು ಸಚಿವ ಜೆ.ಸಿ ಮಾಧುಸ್ವಾಮಿ ಅವರಿಗೆ ಮುಜುಗರವನ್ನುಂಟು ಮಾಡಿತು.
ಉಳಿದಂತೆ ಸ್ಥಳೀಯ ಶಾಸಕ ವೆಂಕಟರಮಣಪ್ಪ, ತಹಸೀಲ್ದಾರ್ ವರದರಾಜ್, ಪುರಸಭೆ ಮಾಜಿ ಅಧ್ಯಕ್ಷ ಎ.ಶಂಕರರೆಡ್ಡಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು. ಉಳಿದಂತೆ ಶಾಸಕ ವೆಂಕಟರಮಣಪ್ಪ ಅವರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ವರದಿ; ಇಮ್ರಾನ್ ಉಲ್ಲಾ, ಪಾವಗಡ
+ There are no comments
Add yours