ತೀತಾ ಜಲಾಶಯದ ಸೇತುವೆ ಸಂಪೂರ್ಣ ಕುಸಿತ; ಸಂಚಾರ ಸ್ಥಗಿತ

1 min read

 

Tumkurnews
ಕೊರಟಗೆರೆ; ತಾಲ್ಲೂಕಿನ ಗೊರವನಹಳ್ಳಿ- ತೀತಾ ಗ್ರಾಮಗಳ ಮಧ್ಯೆ ಹಾದು ಹೋಗುವ ತೀತಾ ಜಲಾಶಯದ ಕೋಡಿ ಹಳ್ಳಕ್ಕೆ ನಿರ್ಮಿಸಿರುವ ರಸ್ತೆಯ ಸೇತುವೆ ಸಂಪೂರ್ಣ ಕುಸಿದು ಬಿದ್ದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಕೊರಟಗೆರೆ- ದೊಡ್ಡಬಳ್ಳಾಪುರ ಸಂಪರ್ಕಿಸುವ ರಸ್ತೆ ಇದಾಗಿದ್ದು, ತಾಲ್ಲೂಕಿನಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ತೀತಾ ಜಲಾಶಯದ ಸೇತುವೆ ಕುಸಿದಿದೆ. ಇದರಿಂದಾಗಿ ಕೋಳಾಲ ಮಾರ್ಗವಾಗಿ ಗೊರವನಹಳ್ಳಿ ಲಕ್ಷ್ಮಿ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಹಾಗೂ ಮಾವತ್ತೂರು ದೊಡ್ಡಸಾಗ್ಗೆರೆ ಸುತ್ತಮುತ್ತಲ ಭಾಗದ ಜನರು ಕೊರಟಗೆರೆಗೆ ಬರಲು ತೊಂದರೆ ಉಂಟಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಿದೆ. ಕೂಡಲೇ ಕುಸಿದಿರುವ ಸೇತುವೆಯನ್ನು ದುರಸ್ಥಿಗೊಳಿಸಿ ಈ ಭಾಗದ ಜನರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕಿಸುವ ಈ ರಸ್ತೆಯ ಸೇತುವೆ ಕುಸಿದಿರುವ ಸುದ್ದಿ ತಿಳಿದ ಲೋಕೋಪಯೋಗಿ ಇಲಾಖೆಯ ಎಇಇ ಮಲ್ಲಿಕಾರ್ಜುನಯ್ಯ ಭೇಟಿ ನೀಡಿ ಪರಿಶೀಲಿಸಿದ್ದು, ಆದಷ್ಟು ಬೇಗ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ತಿಳಿಸಿದ್ದಾರೆ.
ಕಳೆದ ತಿಂಗಳಲ್ಲಿ ತೀತಾ ಜಲಾಶಯ ಕೋಡಿ ಬಿದ್ದು, ಸದರಿ ಸೇತುವೆಯ ಮೇಲೆ ನೀರು ಹರಿದಿತ್ತು. ಆದರೆ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಸೇತುವೆ ಸಂಪೂರ್ಣ ಕುಸಿದಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ನಿರ್ವಹಣೆ ವೈಫಲ್ಯ; ಕೇಂದ್ರ ಮಾಜಿ ಸಚಿವ ಆರ್.ಎಲ್ ಜಾಲಪ್ಪ ಅವರ ಕಾಲದಲ್ಲಿ ನಿರ್ಮಾಣಗೊಂಡ ತೀತಾ ಜಲಾಶಯ ಇದಾಗಿದ್ದು, 20 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಸೇತುವೆಯಾಗಿದೆ. ಸರಿಯಾದ ನಿರ್ವಹಣೆ ಇಲ್ಲದೆ ಸೇತುವೆ ಕುಸಿದಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಶಾಸಕ ಡಾ.ಜಿ ಪರಮೇಶ್ವರ್, ಮಾಜಿ ಶಾಸಕ ಪಿ.ಆರ್ ಸುಧಾಕರ್ ಲಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

About The Author

You May Also Like

More From Author

+ There are no comments

Add yours