76ನೇ ಸ್ವಾತಂತ್ರ್ಯ ದಿನ; ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಭಾಷಣ; ಸಮಗ್ರ ವರದಿ

1 min read

 

Tumkurnews
ತುಮಕೂರು; ವಿಶ್ವದ ಬಲಾಡ್ಯ ರಾಷ್ಟ್ರಗಳ ಪೈಕಿ ಭಾರತವು ಸಹ ಒಂದಾಗಿದ್ದು, ಜಿ-20 ರಾಷ್ಟ್ರಗಳ ಗುಂಪಿನಲ್ಲಿ ‘ಭಾರತ ನಾಯಕ ರಾಷ್ಟ್ರ’ವೆನಿಸಿದೆ. ಇಂದು ಇಡೀ ಜಗತ್ತೇ ನಮ್ಮ ದೇಶವನ್ನು ಗೌರವಿಸುವಂತಹ ನಾಯಕತ್ವ ನಮ್ಮ ದೇಶಕ್ಕಿದ್ದು, ಇದು ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಷಯವಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಬಾಹ್ಯಕಾಶ ತಂತ್ರಜ್ಞಾನದಲ್ಲಿ ನಾವು ಸ್ವಾವಲಂಭನೆಯನ್ನು ಸಾಧಿಸಿದ್ದು, ಮಾಹಿತಿ ತಂತ್ರಜ್ಞಾನದಲ್ಲಿ ನಮ್ಮ ದೇಶ ಮುಂಚೂಣಿಯಲ್ಲಿದೆ. ಅತ್ಯಾಧುನಿಕ ಸಬ್‍ಮೆರಿನ್‍ಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿದ್ದೇವೆ. ಅಂತೆಯೇ ವಿಶ್ವದಲ್ಲಿಯೇ ನಾಲ್ಕನೇ ಅತಿದೊಡ್ಡ ಸೈನ್ಯ ನಮ್ಮದಾಗಿದ್ದು, ಇದು ಸಹ ನಾವೆಲ್ಲರೂ ಹೆಮ್ಮೆ ಪಡುವ ಸಂಗತಿಯಾಗಿದೆ ಎಂದರು.

KSRTC; ತುಮಕೂರು ವಿಭಾಗಕ್ಕೆ ಒಂದೇ ದಿನ 1 ಕೋಟಿ ಆದಾಯ!
ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ 76ನೇ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದ ನಂತರ, ಜಿಲ್ಲೆಯ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಣ್ಣಿಗೆ ಕಾಣದ ವೈರಾಣು ಕೋವಿಡ್-19ನಿಂದ ಇಡೀ ಜಗತ್ತೇ ತತ್ತರಿಸಿದ್ದು, ಈ ಸಂದರ್ಭ ಭಾರತದ ಎರಡು ಕಂಪನಿಗಳು ಕೋವಿಡ್ ವೈರಾಣು ವಿರುದ್ಧ ಲಸಿಕೆಯನ್ನು ಕಂಡುಹಿಡಿದು ನಮ್ಮ ದೇಶದ ಜನರನ್ನು ಕೋವಿಡ್‍ನಿಂದ ರಕ್ಷಿಸಿದ್ದಲ್ಲದೆ, ಲಸಿಕೆಯನ್ನು ವಿದೇಶಗಳಿಗೂ ಕಳುಹಿಸಿಕೊಡಲಾದ ವಿಷಯ ನಾವು ಗರ್ವ ಪಡುವಂತಹದ್ದು.
ಕೋವಿಡ್ ವಿಷಮ ಪರಿಸ್ಥಿತಿಯಲ್ಲಿ ವೈದ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸಿ ಜನರನ್ನು ಕೋವಿಡ್‍ನಿಂದ ರಕ್ಷಿಸಿದ್ದಾರೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ದೇಶದ ಜನತೆಗೆ ಉಚಿತ ಆಹಾರ ಪಡಿತರಗಳನ್ನು ಸಹ ನಮ್ಮ ಸರ್ಕಾರ ನೀಡಿರುತ್ತದೆ ಎಂದರು.

ಸ್ವಾತಂತ್ರೋತ್ಸವ; ತುಮಕೂರಿನ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ತಾಲೀಮು
ಸ್ವಾತಂತ್ರ್ಯ ಗಳಿಸುವಲ್ಲಿ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟ ಬ್ರಿಟಿಷರಲ್ಲಿ ನಡುಕವನ್ನುಂಟು ಮಾಡಿತ್ತು. ಮಹಾನ್ ವೀರ ಸೇನಾನಿಗಳು, ಹೋರಾಟಗಾರರ ತ್ಯಾಗ-ಬಲಿದಾನಗಳ ಪ್ರತೀಕವೇ ಸ್ವಾತಂತ್ರ್ಯ ಎಂದ ಅವರು, ನಮಗೆ ಸ್ವಾತಂತ್ರ್ಯ ಸಿಗಲು ಹೋರಾಡಿದ ಆತ್ಮಗಳು ಕಣ್ಣೀರಾಗಬಾರದು ಅಂತಹ ವ್ಯಕ್ತಿತ್ವವನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕಿದೆಯಲ್ಲದೇ, ಸ್ವಾತಂತ್ರ್ಯಕ್ಕಾಗಿ ಮಡಿದವರ ಕನಸಿನ ಭಾರತಕ್ಕೆ ನಮ್ಮ ಕೊಡುಗೆಯೇನು ಎಂಬುದನ್ನು ನಾವಿಂದು ಆತ್ಮವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಭಾರತ ಇಬ್ಭಾಗವಾದಾಗ ಗಾಂಧೀಜಿಯವರ “ನಮ್ಮ ದೇಹವನ್ನು ತುಂಡು ಮಾಡಿ ದೇಶವನ್ನಲ್ಲ” ಎಂಬ ಮಾತನ್ನು ಸಚಿವರು ಸ್ಮರಿಸಿದರು.
ಬ್ರಿಟಿಷರು ಭಾರತ ಬಿಟ್ಟು ತೊಲಗಿದಾಗ 540ಕ್ಕೂ ಅಧಿಕ ಸಂಸ್ಥಾನಗಳು ಭಾರತದಲ್ಲಿದ್ದವು. ಒಕ್ಕೂಟ ವ್ಯವಸ್ಥೆಗೆ ಸೇರಲೊಪ್ಪದ ಹೈದರಾಬಾದ್ ನಿಜಾಮನ ಸಂಸ್ಥಾನಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸೈನ್ಯವನ್ನು ಕಳುಹಿಸಿ ಭಾರತದ ಒಕ್ಕೂಟಕ್ಕೆ ಸೇರಿಸುವಲ್ಲಿ ಸಫಲರಾದರು. ಈ ಮೂಲಕ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಾಂಸ್ಕೃತಿಕವಾಗಿ ಏಕತೆಯನ್ನು ಹೊಂದಿರುವ ದೇಶವಾಗಿದೆ ಎಂದು ತಿಳಿಸಿದರು.
ಹಸಿರು ಕ್ರಾಂತಿಯ ಮೂಲಕ ಆಹಾರ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿ ಮುಂದಿನ ಹತ್ತು ವರ್ಷಗಳಿಗಾಗುವಷ್ಟು ಆಹಾರ ಸಂಗ್ರಹಣಾ ಸಾಮರ್ಥ್ಯವನ್ನು ನಮ್ಮ ದೇಶ ಹೊಂದಿದೆ. ದೇಶದಾದ್ಯಂತ ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಕೃಷಿಗೆ ಆದ್ಯತೆಯನ್ನು ನೀಡಲಾಗಿದೆ. 1947ರ ಸುಮಾರಿಗೆ 549 ಇದ್ದ ತಲಾ ಆದಾಯ ಇಂದು 1.50 ಲಕ್ಷದಷ್ಟಾಗಿದೆ. ರಾಷ್ಟ್ರೀಯ ಹೆದ್ದಾರಿ ಕೇವಲ 21 ಸಾವಿರ ಕಿ.ಮೀ ಇತ್ತು, ಇಂದು 1.40 ಲಕ್ಷ ಸಾವಿರ ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಈ ರಾಷ್ಟ್ರ ಹೊಂದಿದೆ ಎಂದರು.
ರಾಷ್ಟ್ರಕ್ಕೆ ನಾವೇನು ಕೊಡುಗೆ ನೀಡಬಹುದು ಎಂಬುದಕ್ಕೆ ಸಿದ್ಧಗಂಗಾ ಮಠ ಉದಾಹರಣೆಯಾಗಿದೆ. ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರು ಸಿದ್ಧಗಂಗಾ ಮಠದಲ್ಲಿ ಸಾವಿರಾರು ಮಂದಿಗೆ ಅನ್ನ, ಅಕ್ಷರ, ಜ್ಞಾನ ನೀಡಿದರು. ಈ ಮಾದರಿಯಲ್ಲಿ ಅನೇಕರು ಸಾವಿರಾರು ಜನರಿಗೆ ವಿದ್ಯಾದಾನ ಮಾಡಿದ ಪರಿಣಾಮ ಸ್ವಾತಂತ್ರ್ಯ ಪೂರ್ವದಲ್ಲಿ ಶೇ.27ರಷ್ಟು ಇದ್ದ ಸಾಕ್ಷರತೆ ಇಂದು ಶೇ. 84ರಷ್ಟು ಸಾಕ್ಷರತೆಯನ್ನು ಸಾಧಿಸಿದೆ ಎಂದರು.
75ನೇ ಸ್ವಾತಂತ್ರ್ಯ ಸಂಭ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಮೃತ ಸರೋವರ ಕಾರ್ಯಕ್ರಮದಡಿ 15ಕ್ಕೂ ಹೆಚ್ಚಿನ ಕೆರೆಗಳನ್ನು ಪುನಶ್ಚೇತನ, ನಿರ್ಮಾಣಗೊಳಿಸಲಾಗಿದ್ದು, ಆಗಸ್ಟ್ 15ರಂದು ಅಂದರೆ ಇಂದು ಕೆರೆಗಳ ಅಂಗಳದಲ್ಲಿ ಅನೇಕ ಸ್ವಾತಂತ್ರ್ಯ ಯೋಧರನ್ನು ಕರೆದು ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದ್ದು, ಹೆಚ್ಚು ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿರುತ್ತದೆ. ಈ ಮಳೆಯಿಂದಾಗಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಬಹುತೇಕರು ಮನೆಗಳನ್ನು ಹಾಗೂ ಜಾನುವಾರುಗಳನ್ನೂ ಸಹ ಕಳೆದುಕೊಂಡಿರುತ್ತಾರೆ. ಈ ಕಠಿಣ ಪರಿಸ್ಥಿತಿಯನ್ನು ಜಿಲ್ಲಾಡಳಿತ ಯಶಸ್ವಿಯಾಗಿ ನಿಭಾಯಿಸಿದ್ದು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತರಾಗುವ ಮೂಲಕ ಸಕಾಲದಲ್ಲಿ ಅರ್ಹರಿಗೆ ಪರಿಹಾರ ನೀಡುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿರುತ್ತಾರೆ. ಇದಕ್ಕಾಗಿ ಜಿಲ್ಲಾಡಳಿತವನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ ಎಂದು ತಿಳಿಸಿದರು.

About The Author

You May Also Like

More From Author

+ There are no comments

Add yours