ಆಟೋ ಚಾಲಕ ಅಮ್ಜದ್ ಮೃತ ದೇಹ ಪತ್ತೆ; ಮೂರು ಬಗೆಯ ಪರಿಹಾರ ಘೋಷಣೆ

1 min read

 

Tumkurnews

ತುಮಕೂರು; ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕ ಅಮ್ಜದ್ ಮೃತದೇಹ ಮೂರು ದಿನಗಳ ಸತತ ಕಾರ್ಯಾಚರಣೆಯ ಬಳಿಕ ಸೋಮವಾರ ಪತ್ತೆಯಾಗಿದೆ.
ಭೀಮಸಂದ್ರದ ಬಳಿ ಮಣ್ಣಿನ ಕಸದ ರಾಶಿಯಲ್ಲಿ ಶವ ಪತ್ತೆಯಾಗಿದ್ದು, ಶವ ಪರೀಕ್ಷೆ ಬಳಿಕ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು.

ಕಾಲುವೆಯಲ್ಲಿ ಕೊಚ್ಚಿ ಹೋದ ಆಟೋ ಚಾಲಕ; ಮಳೆ ಫೋಟೋ ತೆಗೆಯುವಾಗ ಘಟನೆ
ಕಳೆದ ಮೂರು ದಿನಗಳ ಹಿಂದೆ ಶನಿವಾರ ನಗರದಲ್ಲಿ ಸುರಿದ ಭಾರೀ ಮಳೆಗೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕ ಅಮ್ಜದ್ ಖಾನ್ ಅವರ ಮೃತದೇಹ ಶೋಧ ಕಾರ್ಯವನ್ನು ಎನ್‍.ಡಿ.ಆರ್.ಎಫ್ ತಂಡ, ಮಹಾನಗರ ಪಾಲಿಕೆ ಸಿಬ್ಬಂದಿ, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಪೊಲೀಸರು ನಡೆಸಿದ್ದು, ಸೋಮವಾರ ಮಧ್ಯಾಹ್ನ 2.30 ರ ವೇಳೆಗೆ ಮಣ್ಣಿನಲ್ಲಿ ಹೂತಿಕೊಂಡಿದ್ದ ಶವವನ್ನು ಹಿಟಾಚಿ ಯಂತ್ರದ ಮೂಲಕ ಕಾರ್ಯಾಚರಣೆ ನಡೆಸಿ ಹೊರ ತೆಗೆಯಲಾಯಿತು.

ಮಳೆ ನೀರಿನಲ್ಲಿ ಕೊಚ್ಚಿ ಹೋದ ಆಟೋ ಚಾಲಕನ ಪತ್ತೆಗೆ NDRF ಆಗಮನ; ಮುಂದುವರೆದ ಶೋಧ ಕಾರ್ಯಾಚರಣೆ
ಕುಟುಂಬಕ್ಕೆ ಸಾಂತ್ವನ; ಆಟೋ ಚಾಲಕ ಶವ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿದ ಶಾಸಕ ಜ್ಯೋತಿಗಣೇಶ್ ಕುಟುಂಬದವರಿಗೆ ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಅವರು, ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕನ ಮೃತದೇಹ ಎನ್‍ಡಿಆರ್ ಎಫ್ ತಂಡ, ಅಗ್ನಿಶಾಮಕ ದಳ ಸಿಬ್ಬಂದಿಯ ಸತತ ಕಾರ್ಯಾಚರಣೆಯಿಂದಾಗಿ ಪತ್ತೆಯಾಗಿದೆ. ಆಟೋ ಚಾಲಕ ಕೊಚ್ಚಿ ಹೋಗಿದ್ದ ಸ್ಥಳದಿಂದ ಸುಮಾರು 1.05 ಕಿ.ಮೀ. ದೂರದಲ್ಲಿ ಶವ ಪತ್ತೆಯಾಗಿದೆ ಎಂದರು.

ಆಪರೇಷನ್ ಅಮ್ಜದ್; NDRF ಕಾರ್ಯತಂತ್ರ ಬದಲು, ಡ್ರೋಣ್ ಮೊರೆ; video ಇಲ್ಲಿದೆ
ಮೃತ ವ್ಯಕ್ತಿಯ ಕುಟುಂಬಕ್ಕೆ ಎನ್‍ಡಿಆರ್ ಎಫ್ ಮತ್ತು ಜಿಲ್ಲಾಡಳಿತದ ವತಿಯಿಂದ 5 ಲಕ್ಷ ರೂ. ಪರಿಹಾರ, ಪಾಲಿಕೆ ವತಿಯಿಂದ 1 ಲಕ್ಷ ರೂ. ಹಾಗೂ ಕಾರ್ಮಿಕ ಇಲಾಖೆಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಜತೆಗೆ ಆ ಕುಟುಂಬಕ್ಕೆ ಮನೆ ಸೇರಿದಂತೆ ಇತರೆ ಸೌಲಭ್ಯ ಹಾಗೂ ಸಾಮಾಜಿಕ ಭದ್ರತೆ ಒದಗಿಸುವ ಕೆಲಸವನ್ನು ಮಾಡಲಾಗುವುದು ಎಂದು ಮೂರು ಬಗೆಯ ಪರಿಹಾರದ‌ ಮೊತ್ತ ಒದಗಿಸುವುದಾಗಿ ತಿಳಿಸಿದರು.
ಜತೆಗೆ ವೈಯುಕ್ತಿಕವಾಗಿ ಹಾಗೂ ಸಂಘ ಸಂಸ್ಥೆಗಳೆಲ್ಲ ಸೇರಿ ಕುಟುಂಬದವರಿಗೆ ಹೆಚ್ಚಿನ ಸಹಾಯ ಮಾಡಲಾಗುವುದು ಎಂದರು.
ಮಾಜಿ ಶಾಸಕ ಡಾ. ರಫೀಕ್‍ಅಹಮದ್ ಮಾತನಾಡಿ, ಮೃತ ಆಟೋ ಚಾಲಕನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡಬೇಕು ಹಾಗೂ ಈ ಕುಟುಂಬದ ಯಾರಾದರೂ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಡಳಿತ, ಎನ್‍ಡಿಆರ್ ಎಫ್ ತಂಡ ಹಾಗೂ ಮಹಾನಗರ ಪಾಲಿಕೆಯ ಸತತ ಶ್ರಮದ ಕಾರ್ಯದಿಂದಾಗಿ ಮೃತದೇಹ ಪತ್ತೆಯಾಗಿದೆ ಎಂದರು.

About The Author

You May Also Like

More From Author

+ There are no comments

Add yours