ಬಹುಮುಖ ಪ್ರತಿಭೆ ಹುಲಿವಾನ ಗಂಗಾಧರಯ್ಯ ನಿಧನಕ್ಕೆ ಕಂಬನಿ ಮಿಡಿದ ಕಲ್ಪತರು ನಾಡು

1 min read

ತುಮಕೂರು ನ್ಯೂಸ್. ಇನ್

Tumkurnews.in (ಜು.18)

ಜಿಲ್ಲೆಯ ‌ಕುಣಿಗಲ್ ತಾಲ್ಲೂಕಿನ ಹುಲಿವಾನ ಮೂಲದ ಹಿರಿಯ
ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ನಟ ಹುಲಿವಾನ್ ಗಂಗಾಧರಯ್ಯ (70) ನಿಧನರಾಗಿದ್ದಾರೆ.
ಕೊರೋನಾ ವೈರಸ್ ಸೋಂಕು ದೃಢಪಟ್ಟಿದ್ದ‌ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಧುಮೇಹದಿಂದಲೂ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ
ಅವರ ಕುರಿತಾಗಿ ‘ಶಶಿಧರ್ ಚಿತ್ರದುರ್ಗ’ ಅವರು ತಮ್ಮ ಫೇಸ್ ಬುಕ್‌ನಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
‘ಸೇಡಿನ ಹಕ್ಕಿ’ (1985) ಚಿತ್ರದೊಂದಿಗೆ ಸಿನಿಮಾ ಕ್ಷೇತ್ರ ಪ್ರವೇಶಿಸಿದ ಅವರು ನೂರಾರು ಸಿನಿಮಾಗಳಲ್ಲಿ ಹಾಗೂ ಕಿರುತೆರೆಯ ಹಲವು ಧಾರಾವಾಹಿಗಳು, ಟೆಲಿಫಿಲ್ಮ್ ಗಳಲ್ಲಿ ನಟಿಸಿದ್ದಾರೆ.
ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ಹುಟ್ಟೂರಿನಲ್ಲಿ ತೆಂಗು ಕುರಿತಾದ ಕಂಪನಿ ಸ್ಥಾಪಿಸಿ ರೈತರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದರು.
ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಪದವಿ ಮುಗಿಸಿದ್ದರು. ಬಳಿಕ ಗಂಗಾಧರಯ್ಯ ಐಟಿಐ ಕಂಪನಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡಿದ್ದರು.
ಸೂತ್ರಧಾರ, ರಂಗಸಂಪದ, ಬೆನಕ ರಂಗತಂಡಗಳ ಹಲವಾರು ನಾಟಕಗಳಲ್ಲಿ ಅವರು ಪಾತ್ರ ನಿರ್ವಹಿಸಿದರು. ಅಲ್ಲದೇ, ತಾವೇ ‘ಗ್ಲೋಬ್ ಥಿಯೇಟರ್’ ತಂಡ ಕಟ್ಟಿ ನಾಟಕಗಳನ್ನು ಪ್ರದರ್ಶಿಸಿದರು.
ಆಸ್ಫೋಟ, ಸೂರ್ಯಶಿಕಾರಿ, ಕಾಮಗಾರಿ, ಈಡಿಪಸ್, ಕದಡಿದ ನೀರು, ಚೋಮ ಸೇರಿದಂತೆ ಹತ್ತಾರು ನಾಟಕಗಳಲ್ಲಿ ಪಾತ್ರ ಮಾಡಿದ್ದರು.
ಕಿರುತೆರೆ, ಸಿನಿಮಾದಲ್ಲಿ ಅವಕಾಶಗಳು ತಾನಾಗಿಯೇ ಹುಡುಕಿ ಬಂದವು. 1981ರ ನಂತರ ದೂರದರ್ಶನಕ್ಕೆ ನಾಟಕಗಳನ್ನು ಮಾಡತೊಡಗಿದರು. ಅದೇ ಸಮಯದಲ್ಲಿ ಸಿನಿಮಾ ಮತ್ತು ಕಿರುತೆರೆಯಲ್ಲಿ ಅವಕಾಶಗಳು ಇಮ್ಮುಡಿಕೊಂಡವು. ಹೆಚ್ಚಾದವು. ಇದರಿಂದಾಗಿ 1997ರಲ್ಲಿ ಐಟಿಐ ಕಂಪನಿಯ ಕೆಲಸಕ್ಕೆ ರಾಜೀನಾಮೆ ನೀಡಿ ನಟನೆ ಮತ್ತು ಕೃಷಿಯಲ್ಲಿ ನಿರತರಾದರು.
ಕಿರುತೆರೆಯಲ್ಲಿ ಸಂಕ್ರಾಂತಿ, ಮಹಾಯಜ್ಞ, ಮುಕ್ತ ಮುಕ್ತ, ಮಳೆಬಿಲ್ಲು ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ಅವರು ಉತ್ತಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕಿರುತೆರೆ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ‘ಅರ್ಧಸತ್ಯ’ ಸರಣಿ ಅವರಿಗೆ ಬಹುದೊಡ್ಡ ಜನಪ್ರಿಯತೆ ತಂದುಕೊಟ್ಟಿತ್ತು. ಜ್ವಾಲಾಮುಖಿ, ಅದೇ ಕಣ್ಣು, ಕುಲಪುತ್ರ, ನವತಾರೆ, ಚೈತ್ರದ ಚಿಗುರು, ಸ್ವಸ್ತಿಕ್, ಭೂಮಿ ತಾಯಿಯ ಚೊಚ್ಚಲ ಮಗ, ಉಲ್ಟಾ ಪಲ್ಟಾ, A, ಶಬ್ಧವೇಧಿ ಅವರ ನಟನೆಯ ಪ್ರಮುಖ ಸಿನಿಮಾಗಳಾಗಿವೆ.
ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿದ್ದ ಅವರು ಹುಲಿವಾನದ ತಮ್ಮ ಜಮೀನಿನಲ್ಲಿ ಸಮಗ್ರ ಕೃಷಿ ನಡೆಸುತ್ತಿದ್ದರು.
ನೀರಾ ಮಾರುಕಟ್ಟೆಗೆ ಬರಬೇಕೆನ್ನುವ ಹೋರಾಟದಲ್ಲಿ ಅವರ ಧ್ವನಿ ಜೋರಾಗಿತ್ತು.
ತೆಂಗಿನ ಮರಗಳಿಗೆ ತೋಟದ ತ್ಯಾಜ್ಯದಿಂದ ತಯಾರಿಸಿದ ಗೊಬ್ಬರ ಉತ್ಪಾದಿಸುವ ಅವರ ಯೋಜನೆಗೆ ಕಾಸರಗೋಡಿನ ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರೀಸರ್ಚ್ ಇನ್ಸ್ಟಿಟ್ಯೂಟ್ ನಿಂದ ‘ಔಟ್ ಸ್ಟ್ಯಾಂಡಿಂಗ್ ಅಂಡ್ ಇನ್ನೋವೇಟಿವ್ ಫಾರ್ಮರ್’ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಇಂದು ಹುಟ್ಟೂರು ಹುಲಿವಾನದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ.
ಬಹುತೇಕ ಪ್ರತಿಭೆ, ಜಿಲ್ಲೆಯ ‌ಹಿರಿಮೆಯಾಗಿದ್ದ ಗಂಗಾಧರಯ್ಯ ಅವರ ಅಗಲುವಿಕೆಗೆ ಮಾಜಿ ಸಚಿವ ಟಿ.ಬಿ ಜಯಚಂದ್ರ, ಕುಣಿಗಲ್ ಶಾಸಕ ಡಾ.ಆರ್ ರಂಗನಾಥ್ ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.

About The Author

You May Also Like

More From Author

+ There are no comments

Add yours