ಬಣ್ಣದ ರಾಜಕೀಯ ಮಾಡುವ ವಿದ್ಯೆ ನನಗೆ ಗೊತ್ತಿಲ್ಲ; ಗೌರಿಶಂಕರ್

1 min read

 

ತುಮಕೂರು ನ್ಯೂಸ್.ಇನ್,ಜೂ.14: ಬಣ್ಣದ ರಾಜಕೀಯ ಮಾಡುವ ವಿದ್ಯೆ ನನಗೆ ಗೊತ್ತಿಲ್ಲ, ಜಾತಿ ರಾಜಕಾರಣ ಮಾಡುವ ಕಲೆಯೂ ನನಗೆ ಗೊತ್ತಿಲ್ಲ, ನಾನೇನಿದ್ದರೂ ನೇರ, ದಿಟ್ಟ, ನಿರಂತರ ರಾಜಕಾರಣಿ ಎಂದು ಶಾಸಕರಾದ ಡಿ.ಸಿ.ಗೌರಿಶಂಕರ್ ಸ್ಪಷ್ಟಪಡಿಸಿದರು.
ಗ್ರಾಮಾಂತರದ ಬೆಳ್ಳಾವಿಯಲ್ಲಿ ಬಡ ಜನರಿಗೆ ಎರಡನೇ ಬಾರಿಗೆ ಆಹಾರದ ಕಿಟ್ ವಿತರಿಸಿ ಮಾತನಾಡಿದ ಅವರು, ಒಳಗೊಂದು, ಹೊರಗೊಂದು ಬಣ್ಣದ ರಾಜಕೀಯ ಮಾಡುವ ವಿದ್ಯೆ ನನಗೆ ಗೊತ್ತಿಲ್ಲ, ನಾನು ಎಂದೂ ಡಬಲ್ ಗೇಮ್ ಮಾಡುವ ರಾಜಕಾರಣಿಯಲ್ಲ, ಜಾತಿ ರಾಜಕೀಯ ಮಾಡುವ ಕಲೆಯೂ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಮತ್ತೆ ಆಹಾರ ಕಿಟ್ ವಿತರಣೆ: ಗ್ರಾಮಾಂತರದಲ್ಲಿ ಈಗಾಗಲೇ ಮೊದಲನೇ ಹಂತದಲ್ಲಿ 65 ಸಾವಿರ ಆಹಾರ ಕಿಟ್ ವಿತರಿಸಲಾಗಿದ್ದು, ಮತ್ತೆ ಎರಡನೇ ಹಂತದಲ್ಲಿ ಎಲ್ಲಾ 65 ಸಾವಿರ ಕುಟುಂಬಗಳಿಗೂ ಆಹಾರ ಕಿಟ್ ವಿತರಿಸಲು ಮುಂದಾಗಿದೆ. ಈಗಾಗಲೇ ಕೆಸರಮಡು ಮತ್ತು ಬುಗುಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಹಾರದ ಕಿಟ್ ವಿತರಿಸಲಾಗಿದೆ. ಇಂದು ಬೆಳ್ಳಾವಿ ಪಂಚಾಯ್ತಿ ವ್ಯಾಪ್ತಿಯಲ್ಲಿ 2000 ಆಹಾರ ಕಿಟ್ ವಿತರಿಸಲಾಗುತ್ತಿದೆ. ಲಾಕ್‍ಡೌನ್ ಹೊರತುಪಡಿಸಿ ಯಾರು ಹಸಿವಿನಿಂದ ಇದ್ದಾರೋ ಅಂತಹವರು ಆಹಾರ ಕಿಟ್ ಬೇಕೆಂದು ನಮ್ಮ ಗಮನಕ್ಕೆ ತಂದರೆ ಅವರಿಗೆ ಆಹಾರ ಕಿಟ್ ವಿತರಿಸಲು ನಾನು ಸಿದ್ದನಿದ್ದೇನೆ ಎಂದು ತಿಳಿಸಿದರು.
ಜಾತಿ, ಪಕ್ಷ ರಹಿತ ಸೇವೆ: ಗ್ರಾಮಾಂತರದಲ್ಲಿ ಜಾತಿ ರಹಿತವಾಗಿ, ಪಕ್ಷಾತೀತವಾಗಿ ಸ್ವಂತ ವೆಚ್ಚದಲ್ಲಿ ನಾನು ಆಹಾರ ಕಿಟ್ ವಿತರಿಸುತ್ತಿದ್ದೇನೆ. ನಾನು ಯಾರಿಂದಲೂ ಚಂದಾ ವಸೂಲಿ ಮಾಡಿ ಆಹಾರದ ಕಿಟ್ ವಿತರಿಸುತ್ತಿಲ್ಲ, ನಾನು ನನ್ನ ಕುಟುಂಬ ಸೇರಿ ನನ್ನ ಕಾರ್ಯಕರ್ತರೊಂದಿಗೆ ತೆರಳಿ ಬಡವರಿಗೆ ಆಹಾರದ ಕಿಟ್‍ಗಳನ್ನು ವಿತರಿಸುತ್ತಿದ್ದೇನೆ ಎಂದರು.
5 ಲಕ್ಷ ಔಷಧಿ ವಿತರಿಸಲಾಗಿದೆ: ಗ್ರಾಮಾಂತರದಲ್ಲಿ ಕೊರೋನ ಸಂಕಷ್ಟದಲ್ಲಿದ್ದು, ಔಷಧಿ ಕೊಳ್ಳಲಾಗದ ಬಡ ಜನತೆಗೆ ಸುಮಾರು 5 ಲಕ್ಷ ರೂ.ವೆಚ್ಚದಲ್ಲಿ ಔಷಧಿಗಳನ್ನು ಬಡವರ ಮನೆಗೆ ತಲುಪಿಸಿದ್ದೇನೆ. ಇನ್ನೂ ನಮಗೆ ಔಷಧಿ ಬೇಕು ಎಂದು ಯಾರೇ ಬಂದರೂ ವೈದ್ಯರ ಚೀಟಿ ಇದ್ದರೆ ಔಷಧಿ ಕೊಡಿಸಲು ನಾನು ಸಿದ್ದನಿದ್ದೇನೆ ಎಂದು ಹೇಳಿದರು.
ನಾನು ನಿಮ್ಮ ಮನೆ ಮಗ: ಶಾಸಕರು ಜನಸಾಮಾನ್ಯರಿಗೆ ಸ್ಪಂದಿಸುತ್ತಾರೋ ಇಲ್ಲವೋ ಎಂದು ಭಾವಿಸಿದ್ದರೆ ಅದನ್ನು ಬಿಟ್ಟುಬಿಡಿ, ಶಾಸಕರೆಂದು ತಿಳಿದುಕೊಳ್ಳಬೇಡಿ, ನಿಮ್ಮ ಮನೆ ಮಗಎಂದು ತಿಳಿದುಕೊಳ್ಳಿ. ರಾಜಕೀಯ ಬೇಡ, ಕಷ್ಟಕ್ಕೆ ಸ್ಪಂದಿಸುತ್ತಾರೆ ಎಂಬುದನ್ನು ಮಾತ್ರ ಇಟ್ಟುಕೊಳ್ಳಿ ಎಂದು ವಿಶ್ವಾಸ ಮೂಡಿಸಿದರು.
ಜೀವ ಅತ್ಯಮೂಲ್ಯ: ಕುಟುಂಬದಲ್ಲಿ ಯಾರಿಗೋ ಒಬ್ಬರಿಗೆ ಕೊರೋನ ಬಂತೆಂದರೆ ಆ ಕುಟುಂಬದ ಬಂಧು ಬಳಗ ಯಾರೂ ಹತ್ತಿರ ಸುಳಿಯಲ್ಲ, ಜೀವ ಉಳಿಸಿಕೊಂಡರೆ ನಾಳೆ ಮನೆ ಕಟ್ಟಬಹುದು, ನಿವೇಶನ ತೆಗೆದುಕೊಳ್ಳಬಹುದು, ಮದುವೆ, ಗೃಹಪ್ರವೇಶ ಮಾಡಬಹುದು. ಆದುದರಿಂದ ಪ್ರತಿಯೊಬ್ಬರೂ ಎಚ್ಚರ ವಹಿಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಸರ್ಕಾರ ಕೊಟ್ಟ ಆದೇಶಗಳನ್ನು ಪಾಲಿಸುತ್ತಾ, ಸ್ವಚ್ಚತೆ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತ್, ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಮುಖಂಡರಾದ ಬೆಳ್ಳಾವಿ ಉಮೇಶ್, ಊರುಕೆರೆ ಉಮೇಶ್, ಕೆಂಪನರಸಯ್ಯ, ಬೆಳಗುಂಬ ವೆಂಕಟೇಶ್, ಹರಳೂರು ಸುರೇಶ್, ಬೆಳ್ಳಾವಿ ಗ್ರಾಪಂ ಸದಸ್ಯರುಗಳು, ಮಾಜಿ ಸದಸ್ಯರುಗಳು, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

About The Author

You May Also Like

More From Author

+ There are no comments

Add yours