ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದ ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥ: ಓರ್ವ ಸಾವು

1 min read

 

 

 

 

 

ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದ ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥ: ಓರ್ವ ಸಾವು

Tumkurnews
ತುಮಕೂರು: ಜಿಲ್ಲೆಯಲ್ಲಿ ಸೋಮವಾರ ನಡೆದ ಎಸ್ಎಸ್ಎಲ್’ಸಿ ಪರೀಕ್ಷೆ ವೇಳೆ ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯೊಬ್ಬ ಅಸ್ವಸ್ಥಗೊಂಡಿದ್ದ. ಈ ವೇಳೆ ಆತನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.
ಮೃತ ವಿದ್ಯಾರ್ಥಿಯು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಚಿಕ್ಕರಾಂಪುರ ನಿವಾಸಿ ಸಿದ್ದೇಶ್ ಅವರ ಮಗ ಮೋಹನ್ ಕುಮಾರ್ ಸಿ.ಎಸ್ (16) ಎಂದು ಗುರುತಿಸಲಾಗಿದೆ. ಈ ವಿದ್ಯಾರ್ಥಿಯು ತುರುವೇಕೆರೆ ತಾಲ್ಲೂಕು ಲೋಕಮ್ಮನಹಳ್ಳಿ ಬಳಿಯ ಶ್ರೀ ಕಂಚಿರಾಯ ಸನಿವಾಸ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ತುರುವೇಕೆರೆ ದಬ್ಬೇಘಟ್ಟ ರಸ್ತೆಯಲ್ಲಿನ ಸರಸ್ವತಿ ಬಾಲಿಕಾ ಪ್ರೌಢ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಈತ ಸೋಮವಾರ ಬೆಳಗ್ಗೆ ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆ ಬರೆಯುತ್ತಿದ್ದನು. ಈ ವೇಳೆ ಅಸ್ವಸ್ಥಗೊಂಡಿದ್ದಾನೆ.
ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು, ಬಾಲಕ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ವೈದ್ಯರು ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಶಿಕ್ಷಕರಿಗೆ ತಿಳಿಸಿದ್ದಾರೆ. ತಕ್ಷಣ ಆಂಬ್ಯುಲೆನ್ಸ್‌ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಗುಬ್ಬಿ ಸಮೀಪ ಬಾಲಕ ಮೋಹನ್ ಕುಮಾರ್ ಸಾವನ್ನಪ್ಪಿದ್ದಾನೆ. ಬಳಿಕ ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಹುಲ್ಲೇಕೆರೆಯ ಬಸವೇಶ್ವರ ಸಂಯುಕ್ತ ಪದವಿಪೂರ್ವ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಮತ್ತೋರ್ವ ವಿದ್ಯಾರ್ಥಿ ರೋಹಿತ್ ಅಸ್ವಸ್ಥಗೊಂಡಿದ್ದು, ದಂಡಿನಶಿವರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಚೇತರಿಕೆ ಬಳಿಕ ಪುನಃ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ.

You May Also Like

More From Author

+ There are no comments

Add yours