ತುಮಕೂರು: ಕಾರಿನಲ್ಲಿ ಮೂವರ ಶವ ಪತ್ತೆ ಪ್ರಕರಣ: 6 ಮಂದಿ ಬಂಧನ: ಸಂಪೂರ್ಣ ಮಾಹಿತಿ ನೀಡಿದ ಎಸ್.ಪಿ

1 min read

 

 

 

 

 

ಕಾರಿನಲ್ಲಿ ಮೂವರ ಶವ ಪತ್ತೆ ಪ್ರಕರಣ: 6 ಮಂದಿ ಬಂಧನ: ಸಂಪೂರ್ಣ ವಿವರ ನೀಡಿದ ಎಸ್.ಪಿ

Tumkurnews
ತುಮಕೂರು: ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ಒಂದು ಕಾರಿನಲ್ಲಿ ಮೂವರು ಮನುಷ್ಯರ ದೇಹಗಳು ಸುಟ್ಟ ಸ್ಥಿತಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯ ವಿವರ: ದಿನಾಂಕ:22-03-2024 ರಂದು ಮಧ್ಯಾಹ್ನ ಸುಮಾರು 1.15 ಗಂಟೆಗೆ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ಒಂದು ಕಾರಿನಲ್ಲಿ 3 ಮನುಷ್ಯರ ದೇಹಗಳು ಸುಟ್ಟ ಸ್ಥಿತಿಯಲ್ಲಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಕೋರಾ ಪೊಲೀಸ್ ಠಾಣೆಯ ಪಿಎಸ್‌ಐ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಮಾಹಿತಿಯು ನಿಜವಾಗಿದ್ದು, ಒಂದು ಮಾರುತಿ ಸುಜುಕಿ S-PRESSO ಕಾರಿನ ಹಿಂಭಾಗದ ಸೀಟಿನಲ್ಲಿ ಒಂದು ಮತ್ತು ಡಿಕ್ಕಿಯಲ್ಲಿ ಎರಡು ದೇಹಗಳು ಸುಟ್ಟು ಕರಕಲಾಗಿದ್ದು, ಯಾರೋ ದುಷ್ಕರ್ಮಿಗಳು ಯಾರೋ 3 ಜನರನ್ನು ಯಾವುದೋ ಕಾರಣಕ್ಕೆ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಾರಿನಲ್ಲಿ ಹಾಕಿ ಪೆಟ್ರೋಲ್ ಅಥವಾ ಬೇರಾವುದೋ ಇಂಧನ ಸುರಿದು ಬೆಂಕಿ ಹಚ್ಚಿ ಸುಟ್ಟಿದ್ದು ಸದರಿಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಕೋರಾ ಪೊಲೀಸ್ ಠಾಣಾ ಮೊ.ಸಂ:39/2024, ಕಲಂ: 302, 201 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ನಂತರ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಅವರ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ.ಮರಿಯಪ್ಪ ಮತ್ತು ಬಿ.ಎಸ್ ಅಬ್ದುಲ್ ಖಾದರ್ ಅವರ ಸೂಚನೆ ಮತ್ತು ಮಾರ್ಗದರ್ಶನದಂತೆ ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಆರ್ ಚಂದ್ರಶೇಖರ್ ನೇತೃತ್ವದಲ್ಲಿ ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕ ಅಮರೇಶ್ ಗೌಡ, ತುಮಕೂರು ನಗರ ಪೊಲೀಸ್ ಠಾಣೆಯ ನಿರೀಕ್ಷಕ ದಿನೇಶ್ ಕುಮಾರ್, ಡಿ.ಎಸ್.ಬಿ ನಿರೀಕ್ಷಕ ಅವಿನಾಶ್, ತುಮಕೂರು ಗ್ರಾಮಾಂತರ ಮತ್ತು ಕೋರಾ ಪೊಲೀಸ್ ಠಾಣೆಯ ಪಿಎಸ್‌ಐ ಗಳಾದ ಮೋಹನ್, ಸಾಗರ್ ಅಸ್ಕಿ ಮತ್ತು ಸಿಬ್ಬಂದಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ನರಸಿಂಹರಾಜು, ರಮೇಶ್, ದುಶ್ಯಂತ್‌ರವರು ಸ್ಥಳದಲ್ಲಿ ದೊರೆತ ಸಾಕ್ಷ್ಯಗಳು, ಸ್ಥಳೀಯ ಮಾಹಿತಿ, ತಾಂತ್ರಿಕ ಮತ್ತು ವೈಜ್ಞಾನಿಕ ವಿಧಾನದ ಮೂಲಕ ಕೊಲೆಯಾದವರನ್ನು ಪತ್ತೆ ಮಾಡಿದ್ದಾರೆ.
ಅದರಂತೆ ಕೊಲೆಯಾದವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ 1) ಇಶಾಕ್ ಸೀಮಮ್ ಬಿನ್ ಮೋಯ್ದಿನ್, 54 ವರ್ಷ, ಅಲಂದಿಲ್ಲಾ, ಮದಡ್ಕ, ಕೂವೆಟ್ಟು ಗ್ರಾಮ, 2) ಶಾಹುಲ್ ಹಮೀದ್, ಬಿನ್ ಖಾದರ್, 45 ವರ್ಷ, ಅಬ್ದುಲ್ ಮಜೀಲ್, ನಾಡಾಜಿ ಮನೆ, ಪೆರ್ಮಾನ ಗ್ರಾಮ ಮತ್ತು 3) ಸಿದ್ದಿಕ್ ಬಿನ್ ಅಬ್ದುಲ್ ಖಾದರ್, 34 ವರ್ಷ, ಶಿರ್ಲಾಲು ಗ್ರಾಮ ಎಂದು ತಿಳಿದು ಬಂದಿದೆ.
ನಂತರ ತುಮಕೂರಿನ ಶಿರಾ ಗೇಟ್‌ನಲ್ಲಿ ವಾಸವಿರುವ 1) ಪಾತರಾಜು @ ರಾಜು @ ರಾಜಗುರು ಕುಮಾರ್, ಬಿನ್ ಲೇಟ್ ಸಿದ್ಧಲಿಂಗಪ್ಪ, 35 ವರ್ಷ, ಪೂಜಾರಿ ಮತ್ತು 2) ಸತ್ಯಮಂಗಲದ ವಾಸಿ ಗಂಗರಾಜು ಬಿನ್ ಹನುಮಂತರಾಯಪ್ಪ, 35 ವರ್ಷ ಎಂಬವರನ್ನು ದಿನಾಂಕ: 25-03-2024 ರಂದು ಬೆಳಿಗ್ಗೆ ವಶಕ್ಕೆ ಪಡೆದು ವಿಚಾರ ಮಾಡಲಾಗಿ ಮೃತರು ಪಾತರಾಜನ ಜೊತೆ ಸೇರಿ ಸುಮಾರು 6-7 ತಿಂಗಳಿನಿಂದ ನಿಧಿ ಹುಡುಕುವ ಕೆಲಸ ಮಾಡುತ್ತಿದ್ದು, ಪಾತರಾಜನಿಗೆ ಸುಮಾರು 6 ಲಕ್ಷ ರೂ ಹಣ ನೀಡಿರುತ್ತಾರೆ. ಹಣ ನೀಡಿ 6 ತಿಂಗಳು ಕಳೆದರೂ ನಿಧಿ ಹುಡುಕಿ ಕೊಟ್ಟಿಲ್ಲವಾದ್ದರಿಂದ ಹಣ ವಾಪಸ್ ಕೊಡುವಂತೆ ಇಲ್ಲವಾದರೆ ಪೊಲೀಸರಿಗೆ ದೂರು ನೀಡುವುದಾಗಿ ಮೃತರು ಪಾತರಾಜನ ಹಿಂದೆ ಬಿದ್ದಿದ್ದರು.
ಇದರಿಂದಾಗಿ ಅವರನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ಪಾತರಾಜು ತನಗೆ ಪರಿಚಯದ ಸತ್ಯಮಂಗಲದ ವಾಸಿ ಗಂಗರಾಜು ಮತ್ತು ಅವನ 6 ಜನ ಸಹಚರರಾದ 1) ಪುಟ್ಟಸ್ವಾಮಯ್ಯನ ಪಾಳ್ಯದ ಮಧುಸೂಧನ್, 24 ವರ್ಷ, 1) ಸಂತೇಪೇಟೆಯ ನವೀನ್, 24 ವರ್ಷ, 3) ವೆಂಕಟೇಶಪುರದ ಕೃಷ್ಣ, 22 ವರ್ಷ, 4) ಹೊಂಬಯ್ಯನಪಾಳ್ಯದ ಗಣೇಶ, 19 ವರ್ಷ, 5) ನಾಗಣ್ಣನಪಾಳ್ಯದ ಕಿರಣ್, 23 ವರ್ಷ ಹಾಗೂ 6) ಕಾಳಿದಾಸನಗರದ ಸೈಮನ್, 18 ವರ್ಷರವರನ್ನು ಸೇರಿಸಿಕೊಂಡು ಮೂರು ಜನರನ್ನು ಕೊಲೆ ಮಾಡಿದರೆ ಆರೋಪಿತರಿಗೆ 3 ಕೆ.ಜಿ ಚಿನ್ನ ಕೊಡುವ ಆಮಿಷವೊಡ್ಡಿ ಕೊಲೆ ಮಾಡುವ ಹಿಂದಿನ ದಿನ ಸಂಚು ರೂಪಿಸಿದ್ದಾರೆ.
ಅದರಂತೆ ದಿನಾಂಕ: 22.03.2024 ರಂದು ಬೆಳಗಿನ ಜಾವ 12 ಗಂಟೆ ಸುಮಾರಿಗೆ ಮೃತರನ್ನು ಚಿನ್ನ ನೀಡುವುದಾಗಿ ಬೀರನಕಲ್ಲು ಬೆಟ್ಟದ ಸಮೀಪ ಕರೆಸಿಕೊಂಡು ಅವರುಗಳನ್ನು ಮಚ್ಚು, ಲಾಂಗ್ ಮತ್ತು ಡ್ಯಾಗರ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಬಳಿಕ ಅವರದೇ ಕಾರಿನಲ್ಲಿ ಕುಚ್ಚಂಗಿ ಕೆರೆಗೆ ತೆಗೆದುಕೊಂಡು ಹೋಗಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿರುವುದಾಗಿರುತ್ತದೆ. ತನಿಖೆ ಪ್ರಗತಿಯಲ್ಲಿರುತ್ತದೆ. ಪ್ರಕರಣವನ್ನು ಭೇದಿಸಿದ ತಂಡವನ್ನು ಕೇಂದ್ರ ವಲಯದ ಪೊಲೀಸ್ ಮಹಾನಿರೀಕ್ಷಕ ರವಿಕಾಂತೇಗೌಡ ಮತ್ತು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಅವರು ಶ್ಲಾಘಿಸಿದ್ದಾರೆ.

ತುಮಕೂರು: ಸುಟ್ಟು ಕರಕಲಾದ ಕಾರಿನಲ್ಲಿ ಮೂವರ ಮೃತದೇಹ ಪತ್ತೆ: ವಿಡಿಯೋ

You May Also Like

More From Author

+ There are no comments

Add yours