ತುಮಕೂರು ಜಿಲ್ಲೆಯಲ್ಲಿ 21 ಲಕ್ಷ ಮತದಾರರು!; ತಿದ್ದುಪಡಿಗೆ ಅವಕಾಶ ನೀಡಿದ ಆಯೋಗ

1 min read

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ: ವೇಳಾಪಟ್ಟಿ ಪ್ರಕಟ

Tumkurnews
ತುಮಕೂರು; ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023ರ ಸಂಬಂಧ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳಲ್ಲಿ ಕರಡು ಮತದಾರರ ಪಟ್ಟಿಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು‌.
ದಿನಾಂಕ: 9-11-2022ರಂದು ಕರಡು ಮತದಾರರ ಪಟ್ಟಿಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗಿದ್ದು, ವೇಳಾಪಟ್ಟಿಯನ್ವಯ ಈಗಾಗಲೇ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗಿದೆ. ದಿ.9-11-2022ರಿಂದ ಡಿಸೆಂಬರ್ 8, 2022ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ಈ ಅವಧಿಯಲ್ಲಿ ಬಿ.ಎಲ್.ಓ.ಗಳು ಮನೆ-ಮನೆಗೆ ಭೇಟಿ ನೀಡಿ ಅರ್ಹ ಮತದಾರರಿಂದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರನ್ನು ತೆಗೆದು ಹಾಕುವ ಅಥವಾ ವರ್ಗಾವಣೆ ಮಾಡುವ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ಆನ್‍ಲೈನ್ ಮೂಲಕ ಅರ್ಜಿ ಪಡೆಯಲಿದ್ದಾರೆ. ನಂತರ 2023ರ ಜನವರಿ 5ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಮತದಾರರ ಗುರುತಿನ ಚೀಟಿ ವಿತರಣೆಗೆ ಗ್ರಹಣ; ಕಾರಣ ಕ್ಷುಲ್ಲಕ!
ಕರಡು ಮತದಾರರ ಪಟ್ಟಿಯಲ್ಲಿ 10,82,752 ಪುರುಷರು, 10,79,769 ಮಹಿಳೆಯರು, 92 ಇತರರು ಸೇರಿದಂತೆ ಒಟ್ಟು 21,62,613 ಮತದಾರರಿದ್ದು, ಸೇವಾ ಮತದಾರರ ಪಟ್ಟಿಯಲ್ಲಿ 749 ಪುರುಷರು, 40 ಮಹಿಳೆಯರು ಸೇರಿದಂತೆ ಒಟ್ಟು 789 ಮತದಾರರಿರುತ್ತಾರೆ. ಅಲ್ಲದೆ, ಜಿಲ್ಲೆಯಲ್ಲಿ 26,856 ವಿಕಲಚೇತನ ಮತದಾರರನ್ನು ನೋಂದಣಿ ಮಾಡಲಾಗಿದೆ.
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಯುಕ್ತ ನವೆಂಬರ್ 12 ಮತ್ತು 20 ಹಾಗೂ ಡಿಸೆಂಬರ್ 3 ಮತ್ತು 4ರಂದು ವಿಶೇಷ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಪರಿಷ್ಕರಣೆ ಅವಧಿಯಲ್ಲಿ ವಿಶೇಷ ಚೇತನ, ಗುಡ್ಡಗಾಡು, ಹಕ್ಕಿ-ಪಿಕ್ಕಿ, ಅರಣ್ಯಗಳಲ್ಲಿ ವಾಸಿಸುವವರು, ಲೈಂಗಿಕ ಕಾರ್ಯಕರ್ತರು, ಅನಾಥರು, ತೃತೀಯ ಲಿಂಗಿಗಳ ಸೇರ್ಪಡೆಗಾಗಿ ವಿಶೇಷ ಗಮನಹರಿಸಲಾಗುವುದು.

ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ?; ಚುನಾವಣಾ ಆಯೋಗದಿಂದ ಮಹತ್ವದ ಸೂಚನೆ
ಜಿಲ್ಲೆಯ ಜೆಂಡರ್ ರೇಷಿಯೋ 997 ಮತ್ತು ಇ.ಪಿ.ರೇಷಿಯೋ 77.27 ಇರುವುದರಿಂದ ಜೆಂಡರ್ ರೇಷಿಯೋ ಕಡಿಮೆ ಮಾಡಲು ಮರಣ ಹೊಂದಿದ, ಮದುವೆಯಾಗಿ ಹೋಗಿರುವ ಮಹಿಳಾ ಮತದಾರರನ್ನು ಹಾಗೂ ಇ.ಪಿ. ರೇಷಿಯೋ ಕಡಿಮೆ ಮಾಡಲು ಮರಣ ಹೊಂದಿದ, ಖಾಯಂ ಸ್ಥಳಾಂತರಗೊಂಡ ಮತದಾರರ ಹೆಸರುಗಳನ್ನು ನಿಯಮಾನುಸಾರ ಮತದಾರರ ಪಟ್ಟಿಯಿಂದ ಕೈಬಿಡಲು ಕ್ರಮವಹಿಸಲಾಗುವುದು.
ಜಿಲ್ಲೆಯಲ್ಲಿ 30,165 ಯುವ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಉಳಿಕೆ ಇರುವ ಅರ್ಹ ಯುವ ಮತದಾರರ ಸೇರ್ಪಡೆಗೆ ಬಿಎಲ್‍ಓಗಳು ಮನೆ-ಮನೆ ಭೇಟಿ ನೀಡುವ ಸಂದರ್ಭದಲ್ಲಿ ವಿಶೇಷ ಗಮನ ನೀಡಿ ನೋಂದಣಿ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರತಿ ವರ್ಷ ಜನವರಿ 1ನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ಪರಿಷ್ಕರಣೆ ಕಾರ್ಯ ನಡೆಸಲಾಗುತ್ತಿತ್ತು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಸ್ತುತ ಜನವರಿ 1, ಏಪ್ರಿಲ್ 1, ಜುಲೈ 1, ಅಕ್ಟೋಬರ್ 1ನ್ನು ಅರ್ಹತಾ ದಿನಾಂಕಗಳೆಂದು ಗೊತ್ತುಪಡಿಸಲಾಗಿದೆ. ಗೊತ್ತುಪಡಿಸಲಾದ ದಿನಾಂಕಗಳಿಗೆ 18 ವರ್ಷ ತುಂಬಲಿರುವ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗಾಗಿ ಮುಂಚಿತವಾಗಿಯೇ ಅರ್ಜಿ ಸಲ್ಲಿಸಬಹುದಾಗಿದೆ. ಸಂಬಂಧಿಸಿದ ಬಿಎಲ್‍ಒ, ಎಇಆರ್ ಒ, ಇಆರ್’ಒಗಳು ಈ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ವಿಲೇ ಪಡಿಸಲು ಕ್ರಮವಹಿಸಲಿದ್ದಾರೆ.
ಜಿಲ್ಲೆಯಲ್ಲಿರುವ ಎಲ್ಲಾ ಅರ್ಹ ಮತದಾರರು ಈ ಮತದಾರರ ಪಟ್ಟಿ ಪರಿಷ್ಕರಣೆಯ ಸದುಪಯೋಗ ಪಡೆದು ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ನಿಗಧಿತ ನಮೂನೆಯಲ್ಲಿ ಡಿಸೆಂಬರ್ 8ರೊಳಗಾಗಿ ಆನ್‍ಲೈನ್ ಮೂಲಕ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಮತದಾರರು www.nvsp.in ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಅವರು ತಿಳಿಸಿದರು.

ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಿ; ಸಿಇಓ ಮನವಿ

About The Author

You May Also Like

More From Author

+ There are no comments

Add yours