ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ
ಇಂದಿನಿಂದ ತಿಂಗಳಿಡೀ ಸೇವಾ ಸಂಕಲ್ಪ ಅಭಿಯಾನ
ಸೇವಾ ಸಂಕಲ್ಪ ಅಭಿಯಾನದ ಪ್ರಥಮ ಕಾರ್ಯಕ್ರಮವಾಗಿ ಸೆಪ್ಟೆಂಬರ್ 17ರಂದು ಸರ್ಕಾರದ ಯೋಜನೆಗಳು ಫಲಾನುಭವಿಗಳ ಬಾಗಿಲಿಗೆ ಬಾಗಿಲಿಗೆ ತಲುಪಬೇಕು ಎಂಬುದು ಸೇವಾ ಸಂಕಲ್ಪ ಅಭಿಯಾನದ ಪ್ರಮುಖ ಆಶಯವಾಗಿದೆ.
Tumkurnews.in
ತುಮಕೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ಹಾಗೂ ಅವರು ಸಂವಿಧಾನಿಕ ಅಧಿಕಾರದ ಜವಾಬ್ದಾರಿ ವಹಿಸಿಕೊಂಡು 25ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ, ಭಾರತೀಯ ಜನತಾ ಪಾರ್ಟಿಯಿಂದ ದೇಶಾದ್ಯಂತ ಒಂದು ತಿಂಗಳ ‘ಸೇವಾ ಸಂಕಲ್ಪ ಅಭಿಯಾನ’ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಹಾಗೂ ಜನಕಲ್ಯಾಣ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡುವುದು. ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳು, ಸೌಲಭ್ಯಗಳು ಮತ್ತು ಫಲಾನುಭವಿಗಳ ಅರ್ಹತೆಗಳ ಕುರಿತು ಸಾರ್ವಜನಿಕರಿಗೆ ನೇರವಾಗಿ ಮಾಹಿತಿ ನೀಡಿ, ಅರ್ಹರಿಗೆ ಸ್ಥಳದಲ್ಲಿಯೇ ಅಗತ್ಯ ಮಾರ್ಗದರ್ಶನ ಹಾಗೂ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಸೇವಾ ಸಂಕಲ್ಪ ಅಭಿಯಾನದ ಪ್ರಥಮ ಕಾರ್ಯಕ್ರಮವಾಗಿ ಸೆಪ್ಟೆಂಬರ್ 17ರಂದು ಸರ್ಕಾರದ ಯೋಜನೆಗಳು ಫಲಾನುಭವಿಗಳ ಬಾಗಿಲಿಗೆ ಬಾಗಿಲಿಗೆ ತಲುಪಬೇಕು ಎಂಬುದು ಸೇವಾ ಸಂಕಲ್ಪ ಅಭಿಯಾನದ ಪ್ರಮುಖ ಆಶಯವಾಗಿದೆ. ಜಿಲ್ಲೆಯಾದ್ಯಂತ ಒಂದು ತಿಂಗಳ ಕಾಲ ವಿವಿಧ ಸೇವಾ, ಆರೋಗ್ಯ, ಸಾಮಾಜಿಕ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪಕ್ಷದ ಕಾರ್ಯಕರ್ತರು ಸರ್ಕಾರ ಮತ್ತು ಜನರ ನಡುವಿನ ಸೇವಾ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣನವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಸದರ ಕಚೇರಿ ಮುಂಭಾಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಕ್ಷೇತ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಸಾರ್ವಜನಿಕರಿಗೆ ಕೇಂದ್ರ ಸರ್ಕಾರದ ವಿವಿಧ ಜನಪರ ಯೋಜನೆಗಳು, ಸವಲತ್ತುಗಳು, ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಫಲಾನುಭವಿಗಳಿಗೆ ದೊರೆಯಬಹುದಾದ ಪ್ರಯೋಜನಗಳ ಕುರಿತು ಸ್ಥಳದಲ್ಲಿಯೇ ಸಂಪೂರ್ಣ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಿದ್ದಾರೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಅರ್ಹರಾಗಿದ್ದರೂ ಮಾಹಿತಿ ಕೊರತೆಯಿಂದ ಸೌಲಭ್ಯದಿಂದ ವಂಚಿತರಾಗಿರುವ ನಾಗರಿಕರಿಗೆ ಈ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಲಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಅಗತ್ಯವಿರುವ ಯೋಜನೆಗಳ ಮಾಹಿತಿ ನೀಡಿ, ಸಾಧ್ಯವಾದ ಕಡೆಗಳಲ್ಲಿ ಸ್ಥಳದಲ್ಲಿಯೇ ಸವಲತ್ತುಗಳ ವಿತರಣೆ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದು, ಸಾರ್ವಜನಿಕರಿಗೆ ವಿವಿಧ ಆರೋಗ್ಯ ತಪಾಸಣೆಗಳು ಹಾಗೂ ತಜ್ಞ ವೈದ್ಯರಿಂದ ಆರೋಗ್ಯ ಸಲಹೆ ಮತ್ತು ಮಾರ್ಗದರ್ಶನವನ್ನು ಉಚಿತವಾಗಿ ನೀಡಲಾಗುತ್ತದೆ. ಸಮಾಜದ ಎಲ್ಲಾ ವರ್ಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೆಬ್ಬಾಕ ರವಿಶಂಕರ್ ಮನವಿ ಮಾಡಿದ್ದಾರೆ.
25 ಸಾಧಕರಿಗೆ ಸನ್ಮಾನ:
ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷಗಳ ಮಹತ್ವದ ಸೇವಾ ಪಯಣವನ್ನು ಪೂರೈಸುತ್ತಿರುವ ಸಂದರ್ಭದಲ್ಲಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿ ಸಾಧನೆ ಮಾಡಿರುವ 25 ಮಂದಿ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಶಿಕ್ಷಣ, ವೈದ್ಯಕೀಯ, ಕಲೆ, ಕ್ರೀಡೆ, ಸಮಾಜಸೇವೆ, ಕೃಷಿ, ಉದ್ಯಮ, ಸೇವಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಾಧಕರನ್ನು ಗೌರವಿಸಲಾಗುವುದು ಎಂದು ಹೇಳಿದ್ದಾರೆ.
