ಕಾಸ್ ಕೊಟ್ರೂ ಪಾಸ್ ಸಿಗ್ತಿಲ್ಲ!
ಆರಂಭವಾಗದ ಉಚಿತ ವಿದ್ಯಾರ್ಥಿ ಬಸ್ ಪಾಸ್; ಸ್ಥಗಿತಗೊಂಡ ಅರ್ಜಿ ಸಲ್ಲಿಕೆ; ಪಾಸ್ ಸಿಗದೆ ವಿದ್ಯಾರ್ಥಿಗಳ ಪರದಾಟ
-ಅಶೋಕ್ ಆರ್.ಪಿ ತುಮಕೂರು: ಪುರುಷ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾಡಿದ ಘೋಷಣೆ ವಿದ್ಯಾರ್ಥಿಗಳ ಪಾಲಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ!
ಹೌದು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಚೊಚ್ಚಲ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ ಸಿಎಂ ಡಿ.ಕೆ ಶಿವಕುಮಾರ್, ಪುರುಷ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಣೆ ಮಾಡಿದರು. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ನಿತ್ಯ ಬಸ್ ಚಾರ್ಜ್ ನೀಡಿ ಪ್ರಯಾಣಿಸುವಂತಾಗಿದೆ.
ಹೊರೆಯಾದ ಉಚಿತ ಬಸ್ ಪಾಸ್: ಪ್ರತಿ ವರ್ಷವೂ ಜೂನ್ ತಿಂಗಳ ಮೊದಲ ವಾರದಲ್ಲಿ ರಾಜ್ಯದ ಸಾರಿಗೆ ನಿಗಮಗಳು ವಿದ್ಯಾರ್ಥಿ ಬಸ್ ಪಾಸ್ ವಿತರಣೆಗೆ ಅರ್ಜಿ ಆಹ್ವಾನಿಸುತ್ತಿದ್ದವು. ಇದೇ ಮೊದಲ ಬಾರಿಗೆ ಈ ಬಾರಿ ಮೇ 29ರಿಂದಲೇ ರಾಜ್ಯದ ಸಾರಿಗೆ ನಿಗಮಗಳು ವಿದ್ಯಾರ್ಥಿ ಬಸ್ ಪಾಸ್ ವಿತರಣೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದವು. ಜೂನ್ 1ರಿಂದ ಒನ್ ಸೆಂಟರ್’ಗಳಲ್ಲಿ ಹಾಗೂ ನಿಗದಿತ ಪಾಸ್ ಕೌಂಟರ್’ಗಳಲ್ಲಿ ರಿಯಾಯಿತಿ ದರ ಪಾವತಿಸಿ ಬಸ್ ಪಾಸ್ ಪಡೆದುಕೊಳ್ಳುವಂತೆ ಪ್ರಕಟಣೆ ಮೂಲಕ ತಿಳಿಸಿತ್ತು. ಅದರಂತೆ ವಿದ್ಯಾರ್ಥಿಗಳು ಮೇ 29ರಿಂದಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ, ಹಣ ಪಾವತಿಸಿ ಬಸ್ ಪಾಸ್ ಪಡೆದುಕೊಳ್ಳುತ್ತಿದ್ದರು. ಆದರೆ ಜೂನ್ 3ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ ಶಿವಕುಮಾರ್, ಪುರುಷ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಣೆ ಮಾಡಿದರು. ಅಷ್ಟೇ, ಅಲ್ಲಿಗೆ ಇಡೀ ವಿದ್ಯಾರ್ಥಿ ಬಸ್ ಪಾಸ್ ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಅರ್ಜಿ ಸಲ್ಲಿಕೆ, ಪಾಸ್ ವಿತರಣೆ ಸ್ಥಗಿತ: ಉಚಿತ ಬಸ್ ಪಾಸ್ ಯೋಜನೆ ಘೋಷಣೆಯಾಗುವ ಒಂದು ದಿನ ಮುಂಚಿತವಾಗಿಯೇ ಜೂನ್ 2ರಿಂದಲೇ ಬಸ್ ಪಾಸ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆನ್ ಲೈನ್’ನಲ್ಲಿ ನಿಷ್ಕ್ರಿಯಗೊಳಿಸಲಾಗಿತ್ತು. ಅದಾದ ಬಳಿಕ ಜೂ.9ರಿಂದ ಪುನಃ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಹೊಸ ಪಾಸ್ ಹಾಗೂ ವಿಳಾಸ ಬದಲಾವಣೆಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ.
60ಕಿಮೀನಿಂದ 50ಕಿಮೀಗೆ ಇಳಿಕೆ: ಈ ಹಿಂದೆ ವಿದ್ಯಾರ್ಥಿಗಳು ತಮ್ಮ ಶಾಲಾಕಾಲೇಜಿನಿಂದ 60 ಕಿಮೀ ಅಂತರದವರೆಗೆ ಬಸ್ ಪಾಸ್ ಪಡೆಯಲು ಅವಕಾಶವಿತ್ತು. ಈ ಮಿತಿಯನ್ನು 70 ಕಿಮೀಗೆ ಹೆಚ್ಚಳ ಮಾಡುವಂತೆ ವಿದ್ಯಾರ್ಥಿಗಳು ಈ ಹಿಂದಿನಿಂದಲೂ ಸರ್ಕಾರಗಳನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಈಗಿನ ಸರ್ಕಾರ ಅದನ್ನು 50 ಕಿಮೀಗೆ ಕಡಿತ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಶಾಕ್ ನೀಡಿದೆ! ಇದರಿಂದಾಗಿ 50ಕಿಮೀಗಿಂತಲೂ ಹೆಚ್ಚು ಅಂತರದಲ್ಲಿ ಶಿಕ್ಷಣಕ್ಕಾಗಿ ಬಸ್ ಅವಲಂಭಿಸಿರುವ ವಿದ್ಯಾರ್ಥಿಗಳಿಗೆ ತೀವ್ರ ಅನಾನುಕೂಲವನ್ನುಂಟು ಮಾಡಿದೆ.
ಸ್ಥಳ ನಮೂದಿಗೆ ಅವಕಾಶವಿಲ್ಲ: ಈ ಹಿಂದೆ ವಿದ್ಯಾರ್ಥಿಗಳು ತಮಗೆ ಬೇಕಾದ ಸ್ಟೇಜ್(ನಿಗದಿತ ನಿಲುಗಡೆ)ಗೆ ಸಂಚಾರ ಮಾರ್ಗ ನಮೂದಿಸಿ ಬಸ್ ಪಾಸ್ ಪಡೆಯಬಹುದಿತ್ತು. ಆದರೆ ಈ ಬಾರಿ ಸಾರಿಗೆ ನಿಗಮಗಳು ಸೂಚಿಸಿರುವ ಸ್ಟೇಜ್’ಗಳನ್ನೇ ಎಲ್ಲಿಂದ ಎಲ್ಲಿಗೆ ಎಂದು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕು. ಈ ಬದಲಾವಣೆಯಿಂದಾಗಿ ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪಾಸ್ ಪಡೆಯಲು ಸಾಧ್ಯವಾಗುತ್ತಿಲ್ಲ, ಬದಲಾಗಿ ಸಾರಿಗೆ ಸಂಸ್ಥೆಗಳು ಕೊಟ್ಟಂತೆ ತೆಗೆದುಕೊಂಡು ಸುಮ್ಮನಾಗಬೇಕು ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಸ್ ಕೊಟ್ಟರೂ ಪಾಸ್ ಸಿಗ್ತಿಲ್ಲ: ಜೂನ್ 2ರಂದು ಬಸ್ ಪಾಸ್ ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸ್ಥಗಿತಗೊಂಡಿದ್ದು, ಈವರೆಗೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಈಗಾಗಲೇ ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ ಹಾಗೂ ಡಿಪ್ಲೋಮಾ ತರಗತಿಗಳು ಆರಂಭವಾಗಿ 10 ದಿನ ಕಳೆದಿದ್ದು, ವಿದ್ಯಾರ್ಥಿಗಳು ಬಸ್ ಪಾಸ್ ಸಿಗದೆ ಪರದಾಡುತ್ತಿದ್ದಾರೆ. ಉಚಿತ ಬೇಡ ಹಣ ಕೊಡ್ತೇವೆ ಎಂದರೂ ಅರ್ಜಿ ಸಲ್ಲಿಸಲು ಅವಕಾಶವಿಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಕಾಲೇಜಿಗೆ ಗೈರು: ನಿತ್ಯ ಅಧಿಕ ಹಣ ಕೊಟ್ಟು ಬಸ್ ಸಂಚಾರ ಮಾಡಲಾಗದೇ ಅನೇಕ ಬಡ ವಿದ್ಯಾರ್ಥಿಗಳು ಕಾಲೇಜಿಗೆ ಗೈರಾಗುತ್ತಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ವಿದ್ಯಾರ್ಥಿ ಬಸ್ ಪಾಸ್ ವಿತರಣೆಗೆ ಎದುರಾಗಿರುವ ತೊಡಕುಗಳನ್ನು ನಿವಾರಣೆ ಮಾಡಿ, ಆದಷ್ಟು ಶೀಘ್ರವಾಗಿ ಬಸ್ ಪಾಸ್ ವಿತರಣೆ ಮಾಡಬೇಕಿದೆ.
ಪಾಸ್ ದರಕ್ಕಿಂತ ಹೆಚ್ಚು ಹಣ ಖರ್ಚಾಗಿದೆ: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಈ ಮೊದಲಿನಿಂದಲೂ ಉಚಿತ ಬಸ್ ಪಾಸ್ ನೀಡಲಾಗುತ್ತಿದ್ದು, ವಿಮಾ ಮತ್ತು ಸಂಸ್ಕರಣಾ ವೆಚ್ಚವಾಗಿ 150ರೂ.ಗಳನ್ನು ಕಟ್ಟಿಸಿಕೊಳ್ಳಲಾಗುತ್ತಿದೆ. ಇತರೆ ವರ್ಗದ ಪಿಯುಸಿ, ಡಿಪ್ಲೊಮಾ ಮತ್ತು ಪದವಿ ವಿದ್ಯಾರ್ಥಿಗಳಿಗೆ 1050ರೂ. ಪಾಸ್ ದರವಿತ್ತು. ಇದೀಗ ಉಚಿತ ಪಾಸ್ ವಿತರಣೆ ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಣ ಕೊಟ್ಟು ನಿತ್ಯ ಸಂಚಾರ ಮಾಡುವಂತಾಗಿದೆ. ದೂರದ ಊರುಗಳಿಂದ ಓಡಾಡುವ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ 100ರಿಂದ 150ರೂ.ಗಳ ವರೆಗೂ ಬಸ್ ಚಾರ್ಜ್ ಖರ್ಚಾಗುತ್ತಿದ್ದು, ಈಗಾಗಲೇ ಬಸ್ ಪಾಸ್ ದರಕ್ಕಿಂತಲೂ ಅಧಿಕ ಹಣ ವೆಚ್ಚವಾಗಿದೆ. ಹೀಗಾಗಿ ಸರ್ಕಾರದ ಉಚಿತ ಪಾಸ್ ಯೋಜನೆ ವಿದ್ಯಾರ್ಥಿಗಳಿಗೆ ಶಾಪವಾಗಿ ಪರಿಣಮಿಸಿದೆ.
ಅಭಿಪ್ರಾಯ: ನಾನು ಜಾಲಹಳ್ಳಿಕ್ರಾಸ್ ನಿಂದ ತುಮಕೂರಿಗೆ ಕಾಲೇಜಿಗೆ ಬರುತ್ತಿದ್ದೇನೆ. ಈ ವರ್ಷ ಇನ್ನೂ ವಿದ್ಯಾರ್ಥಿ ಬಸ್ ಪಾಸ್ ವಿತರಣೆ ಮಾಡಿಲ್ಲ. ನಿತ್ಯ ಹಣ ಕೊಟ್ಟು ಬರಲಾಗದೇ ಕಾಲೇಜಿಗೆ ಒಂದು ವಾರದಿಂದ ರಜೆ ಹಾಕಿದ್ದೇನೆ. ಫ್ರೀ ಬೇಡ, ಹಣ ಕೊಡ್ತೀವಿ, ಪಾಸ್ ಕೊಡಿ ಅಂದ್ರೂ ಪಾಸ್ ಸಿಗ್ತಿಲ್ಲ.
–ದರ್ಶನ್, ಪದವಿ ವಿದ್ಯಾರ್ಥಿ, ತುಮಕೂರು.
ಅಭಿಪ್ರಾಯ:
ಪುರುಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಸರ್ಕಾರದ ಹಂತದಲ್ಲಿದೆ. ಈಗ ರಿಯಾಯಿತಿ ದರದಲ್ಲಿ ಪಾಸ್ ವಿತರಣೆ ಮಾಡಲಾಗುತ್ತಿದೆ. ಉಚಿತ ಪಾಸ್ ಆರಂಭವಾದ ಬಳಿಕ ಈಗ ಹಣ ಕೊಟ್ಟು ಪಾಸ್ ಪಡೆದಿರುವ ವಿದ್ಯಾರ್ಥಿಗಳ ಹಣವನ್ನು ಹಿಂದಿರುಗಿಸಲಾಗುವುದು. ಹೊಸ ಪಾಸ್’ಗೆ ಅರ್ಜಿ ಸಲ್ಲಿಸಲು ತಾಂತ್ರಿಕ ಸಮಸ್ಯೆ ಇದ್ದರೆ ಪರಿಶೀಲಿಸಲಾಗುವುದು.
– ಬಸವರಾಜ್, ವಿಭಾಗಿಯ ನಿಯಂತ್ರಣಾಧಿಕಾರಿ, ಕೆ.ಎಸ್.ಆರ್.ಟಿ.ಸಿ, ತುಮಕೂರು.
ಹೇಳಿಕೆ: ಮುಂದಿನ ಒಂದೆರಡು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುವುದು. ಈಗಾಗಲೇ ಹಣ ಕೊಟ್ಟು ಪಾಸ್ ಪಡೆದ ವಿದ್ಯಾರ್ಥಿಗಳಿಗೆ ಹಣ ಹಿಂದಿರುಗಿಸಲಾಗುವುದು.
–ಭೈರತಿ ಸುರೇಶ್, ಸಾರಿಗೆ ಸಚಿವ, ಕರ್ನಾಟಕ ಸರ್ಕಾರ.
